ಶಾಸಕ ಪ್ರದೀಪ್ ಈಶ್ವರ್ ತಾಯಿಯ ಹೆಸರಲ್ಲಿ ಅಮ್ಮ ಕ್ಲಿನಿಕ್

| Published : Jul 31 2025, 12:45 AM IST

ಸಾರಾಂಶ

ಕುಗ್ರಾಮಗಳ ಮನೆ ಬಳಿಗೆ ಆರೋಗ್ಯ ಚಿಕಿತ್ಸೆ ತಲುಪಿಸಲು ಅಮ್ಮ ಕ್ಲಿನಿಕ್‌ ಯೋಜನೆಯನ್ನು ಕಳೆದ ಸೋಮವಾರ ಮಂಚೇನಹಳ್ಳಿ ತಾಲೂಕಿನ ವರವಣಿ ಗ್ರಾಮದಲ್ಲಿ ಆರಂಭಿಸಿದ್ದು, ಬುಧವಾರ ಚಿಕ್ಕಬಳ್ಳಾಪುರ ತಾಲೂಕಿನ ರೇಣುಮಾಕಲಹಳ್ಳಿ ಗ್ರಾಮದಲ್ಲಿ ಆರೋಗ್ಯ ಸೇವೆ ನೀಡಿದಾಗ ಉತ್ತಮ ಸ್ಪಂದನೆ ದೊರೆತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ಷೇತ್ರದಲ್ಲಿ ಒಂದಿಲ್ಲೊಂದು ನೂತನ ಪ್ರಯೋಗಗಳ ಮೂಲಕ ರಾಜ್ಯದಲ್ಲಿ ಹೆಸರಾಗಿರುವ ಪ್ರದೀಪ್ ಈಶ್ವರ್ ಈಗ ತಮ್ಮ ತಾಯಿ ಮಂಜುಳ ಅವರ ಹೆಸರಿನಲ್ಲಿ ಕ್ಷೇತ್ರದ ಜನತೆಗೆ ತಜ್ಞ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆಯೊಂದಿಗೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುವ ಅಮ್ಮ ಕ್ಲಿನಿಕ್ ಅನ್ನು ಆರಂಭಿಸಿದ್ದಾರೆ.

ವಾರದಲ್ಲಿ ಮೂರು ದಿನ ಅಮ್ಮ ಕ್ಲಿನಿಕ್ ನ ತಜ್ಞ ವೈದ್ಯರ ತಂಡ ಆಯ್ದ ಹಳ್ಳಿಗಳಿಗೆ ಒಂದೊಂದು ದಿನ ತೆರಳಿ ಅಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೂ ಶಿಬಿರ ನಡೆಸಿ, ಶಿಬಿರಕ್ಕೆ ಬರುವ ಗ್ರಾಮದ ನಿವಾಸಿಗಳಿಗೆ ಬಿ.ಪಿ., ಷುಗರ್, ಹೃದಯ ಸಂಬಂಧಿ ಕಾಯಿಲೆ, ಮೂಳೆ , ಕ್ಯಾನ್ಸರ್, ಸಾಮಾನ್ಯ ಕಾಯಿಲೆಗಳು ಸೇರಿದಂತೆ ಎಲ್ಲ ಬಗೆಯ ಕಾಯಿಲೆಗಳ ಪರೀಕ್ಷೆ, ರಕ್ತಪರೀಕ್ಷೆ, ಇಸಿಜಿ ಮಾಡಿ, ಅಗತ್ಯವಿರುವವರಿಗೆ ಸ್ಥಳದಲ್ಲೇ ಉಚಿತ ಔಷಧಿಗಳು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ದು ಉಚಿತವಾಗಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುತ್ತಾರೆ.

ಕುಗ್ರಾಮಗಳ ಮನೆ ಬಳಿಗೆ ಆರೋಗ್ಯ ಚಿಕಿತ್ಸೆ ತಲುಪಿಸಲು ಅಮ್ಮ ಕ್ಲಿನಿಕ್‌ ಯೋಜನೆಯನ್ನು ಕಳೆದ ಸೋಮವಾರ ಮಂಚೇನಹಳ್ಳಿ ತಾಲೂಕಿನ ವರವಣಿ ಗ್ರಾಮದಲ್ಲಿ ಆರಂಭಿಸಿದ್ದು, ಬುಧವಾರ ಚಿಕ್ಕಬಳ್ಳಾಪುರ ತಾಲೂಕಿನ ರೇಣುಮಾಕಲಹಳ್ಳಿ ಗ್ರಾಮದಲ್ಲಿ ಆರೋಗ್ಯ ಸೇವೆ ನೀಡಿದಾಗ ಉತ್ತಮ ಸ್ಪಂದನೆ ದೊರೆತಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗಭೂಷಣ್ ಮಾತನಾಡಿ, ಯಾರೊಬ್ಬರೂ ದುಡ್ಡಿನ ಕಾರಣದಿಂದ ಆರೋಗ್ಯ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಅಮ್ಮ ಕ್ಲಿನಿಕ್ ಯೋಜನೆ ಕೈಗೆತ್ತಿಕೊಂಡಿದ್ದು, ಶಾಸಕ ಪ್ರದೀಪ್‌ ಈಶ್ವರ್‌ ಸ್ವಂತ ಖರ್ಚಿನಲ್ಲಿ ಈ ಕೆಲಸ ಮಾಡುತ್ತಿದ್ದು, ಬುಧವಾರ ನಡೆದ ತಪಾಸಣೆಯಲ್ಲಿ150ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು. 20 ಮಂದಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಇವರೆಲ್ಲರಿಗೂ ಉಚಿತವಾಗಿ ಚಿಕಿತ್ಸೆ ಕೊಡುವ ವ್ಯವಸ್ಥೆಯನ್ನು ಶಾಸಕ ಪ್ರದೀಪ್‌ ಈಶ್ವರ್‌ ಮಾಡಲಿದ್ದಾರೆ. ಎಂದರು.

ಯೋಜನಾ ಪ್ರಾಧಿಕಾರದ ಸದಸ್ಯೆ ಹಮೀಮ್, ಮುಖಂಡರಾದ ಬೈರೇಶ್, ಚೇತನ್,ಬಾಬಾಜಾನ್, ರಮೇಶ್,ಮೆಹಬೂಬ್, ಅಲ್ತಾಪ್,ವಿನಯ್ ಬಂಗಾರಿ, ಗ್ರಾಮಸ್ಥರು ಮತ್ತಿತರರು ಇದ್ದರು.