ಸಾರಾಂಶ
- ಹೆಗ್ಗೇರಿ ಕಾಲೋನಿ ಸಮುದಾಯ ಭವನದಲ್ಲಿ ಅಮ್ಮ ಫೌಂಡೇಷನ್ ವತಿಯಿಂದ 28 ನೇ ಉಚಿತ ಆರೋಗ್ಯ ಶಿಬಿರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಮ್ಮ ಫೌಂಡೇಷನ್ ಜನರ ಆರೋಗ್ಯಕ್ಕಾಗಿ 10 ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಫೌಂಡೇಷನ್ ಸಂಸ್ಥಾಪಕ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.
ಮಂಗಳವಾರ ನಾಗಲಾಪುರ ಗ್ರಾಮದ ಹೆಗ್ಗೇರಿ ಕಾಲೋನಿ ಸಮುದಾಯ ಭವನದಲ್ಲಿ ಅಮ್ಮ ಫೌಂಡೇಷನ್ ಆಶ್ರಯದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆ ತಜ್ಞ ವೈದ್ಯರ ತಂಡದಿಂದ 28 ನೇ ಉಚಿತ ಆರೋಗ್ಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸೇವೆಗೆ ಯಾವುದೇ ಜಾತಿ, ಧರ್ಮ, ಭಾಷೆ ಕಟ್ಟು ಪಾಡುಗಳಿಲ್ಲ. ರೋಗಿಗಳನ್ನು ವೈದ್ಯರು, ಸಿಬ್ಬಂದಿ ಹಾಗೂ ಕುಟುಂಬದವರು ಪ್ರೀತಿಯಿಂದ ನೋಡಿಕೊಂಡರೆ ರೋಗಿಯ ಅರ್ಧ ಕಾಯಿಲೆ ಗುಣವಾಗಲಿದೆ. ಗ್ರಾಮೀಣ ಭಾಗದಲ್ಲಿ ಅಮ್ಮ ಫೌಂಡೇಷನ್ ಸಂಸ್ಥೆ ನಡೆಸುತ್ತಿರುವ ಆರೋಗ್ಯ ಶಿಬಿರ ಅತ್ಯಂತ ಯಶಸ್ವಿಯಾಗುತ್ತಿದೆ. ಈ ಆರೋಗ್ಯ ಶಿಬಿರಕ್ಕೆ ಬೇರೆ ತಾಲೂಕಿನಿಂದಲೂ ರೋಗಿಗಳು ಬಂದಿದ್ದಾರೆ. ಅಮ್ಮ ಫೌಂಡೇಷನ್ ಗೆ ವಿವಿಧ ಗ್ರಾಮಗಳಲ್ಲಿ ಸದಸ್ಯರಿದ್ದಾರೆ ಎಂದರು.ನನ್ನ ದುಡಿಮೆ ಹಣದಿಂದಲೇ ಅಮ್ಮ ಫೌಂಡೇಷನ್ ಹುಟ್ಟು ಹಾಕಿ ಸಮಾಜ ಸೇವೆ ಮಾಡುತ್ತಿದ್ದೇನೆ. ಈ ಶಿಬಿರದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯ ಇದ್ದವರಿಗೆ ಇಂದೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. 1 ತಿಂಗಳ ನಂತರ ಇದೇ ಜಾಗದಲ್ಲಿ ವೈದ್ಯರು ಮರು ಪರೀಕ್ಷೆ ಮಾಡುತ್ತಾರೆ. ಆಗ ಅವಶ್ಯಕತೆ ಇದ್ದವರಿಗೆ ಉಚಿತ ಕನ್ನಡಕ ನೀಡುತ್ತೇವೆ. ಕಳೆದ ವಾರ ಸೀತೂರಿನಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ 20 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಅಮ್ಮ ಎಂದರೆ ಕರುಣೆ,ದಯೆ, ಅನುಕಂಪ, ಪ್ರೀತಿ ಎಂಬರ್ಥದಲ್ಲಿ ಸುಧಾಕರ ಶೆಟ್ಟರು ತಮ್ಮ ಸೇವೆಗೆ ಅಮ್ಮ ಫೌಂಡೇಷನ್ ಎಂದು ನಾಮಕರಣ ಮಾಡಿದ್ದಾರೆ. ಅವರು ಪ್ರತಿ ಫಲ ಅಪೇಕ್ಷೆ ಇಲ್ಲದೆ ಶೃಂಗೇರಿ ಕ್ಷೇತ್ರದಾದ್ಯಂತ ಸಮಾಜ ಸೇವೆ ಮಾಡುತ್ತಿದ್ದಾರೆ.28 ಬಾರಿ ಆರೋಗ್ಯ ಶಿಬಿರ ನಡೆಸಿದ್ದು ಬಡವರಿಗೆ ಅನುಕೂಲ. ಅಮ್ಮ ಫೌಂಡೇಷನ್ ಆರೋಗ್ಯ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಸುಧಾಕರ ಶೆಟ್ಟ ಮೈಸೂರಿನಲ್ಲಿ ಅಂತಾರಾಷ್ಟೀಯ ಮಟ್ಟದ ಮಕ್ಕಳ ಶಾಲೆ ನಡೆಸುತ್ತಿದ್ದಾರೆ ಎಂದರು.ಅಮ್ಮ ಫೌಂಡೇಷನ್ ನ ಕಾರ್ಯ ನಿರ್ವಹಣಾಧಿಕಾರಿ ವೆಂಕಪ್ಪ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಧಾಕರ ಸ್ ಶೆಟ್ಟಿ 2002 ರಲ್ಲಿ ಮೈಸೂರಿನಲ್ಲಿ ಅಮ್ಮ ಫೌಂಡೇಷನ್ ಸ್ಥಾಪನೆ ಮಾಡಿದರು. ಆ ಸಂದರ್ಭದಲ್ಲಿ ಅವರು 2 ಸರ್ಕಾರಿ ಶಾಲೆ ಗಳನ್ನು ದತ್ತು ತೆಗೆದುಕೊಂಡಿದ್ದರು. ಮೈಸೂರಿನಲ್ಲೂ ಆರೋಗ್ಯ ಶಿಬಿರ ನಡೆಸಿದ್ದರು. ಸುಧಾಕರ ಶೆಟ್ಟರು ಕೊಪ್ಪ ತಾಲೂಕಿನ ತುಮಕಾನೆಯವರಾಗಿದ್ದು ಮೈಸೂರಿನಲ್ಲಿ ಜ್ಞಾನ ಸರೋವರ ಎಂಬ ವಸತಿ ಶಾಲೆ ನಡೆಸುತ್ತಿದ್ದು 3 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಲ್ಲಿ ಅಮ್ಮ ಫೌಂಡೇಷನ್ ಸ್ಥಾಪನೆ ಮಾಡಿ ಶೃಂಗೇರಿ ಕ್ಷೇತ್ರದಲ್ಲಿ 28 ಆರೋಗ್ಯ ಶಿಬಿರ ನಡೆಸಿದ್ದಾರೆ. ಕೊರೋನ ಸಮಯದಲ್ಲಿ 11 ಸಾವಿರ ಜನರಿಗೆ ಪುಡ್ ಕಿಟ್ ನೀಡಿದ್ದಾರೆ. ಮೊಬೈಲ್ ಸಿಗ್ನಲ್ ಸಿಗದೆ ಇರುವ 18 ಶಾಲೆಗಳಿಗೆ ಬೂಸ್ಟರ್ ಹಾಕಿಸಿಕೊಟ್ಟಿದ್ದಾರೆ. 3 ತಾಲೂಕುಗಳ 1 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕುಕ್ಕರ್ ನೀಡಿದ್ದಾರೆ. ಉದ್ಯೋಗ ಮೇಳ ನಡೆಸಿ 1200 ಯುವ ಜನರಿಗೆ ಉದ್ಯೋಗ ಕೊಡಿಸಿದ್ದಾರೆ. ಶೃಂಗೇರಿ ಕ್ಷೇತ್ರದ 3 ತಾಲೂಕುಗಳ 150 ಶಾಲೆಗಳಿಗೆ ನೋಟು ಬುಕ್ ವಿತರಿಸಿದ್ದಾರೆ. ಅಗತ್ಯ ಇರುವ 52 ಜನರಿಗೆ ವೀಲ್ ಛೇರ್, ವಾಕರ್ ನೀಡಿದ್ದಾರೆ ಎಂದರು.
ಸಭೆ ಅದ್ಯಕ್ಷತೆ ವಹಿಸಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸುಧಾಕರ ಶೆಟ್ಟರು ಸ್ಥಾಪಿಸಿದ ಅಮ್ಮ ಫೌಂಡೇಷನ್ ನಿಂದ ಶೃಂಗೇರಿ ಕ್ಷೇತ್ರದ ಶೇ. 25 ರಷ್ಟು ಜನರಿಗೆ ಫಲ ಸಿಕ್ಕಿದೆ. ಅವರು ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ನೇತ್ರ ಪರೀಕ್ಷೆ ಆಂದೋಲನ ಹಮ್ಮಿಕೊಂಡಿದ್ದಾರೆ ಎಂದರು.ಸಭೆಯಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಎನ್.ಶಿವದಾಸ್, ಜೆಡಿಎಸ್ ಉಪಾಧ್ಯಕ್ಷರಾದ ಬಿ.ಟಿ.ರವಿ, ಉಪೇಂದ್ರ, ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಮುಖಂಡರಾದ ಪ್ರಭಾಕರ ಶೆಟ್ಟರು,ಇ.ಸಿ.ಸೇವಿಯಾರ್, ಕೆಂಪಣ್ಣ, ಸತೀಶ್, ಎ.ವಿ.ಜೋಸ್, ಲತಾ, ಚಿನ್ನಯ್ಯ ಮತ್ತಿತರರು ಇದ್ದರು.
-- ಬಾಕ್ಸ್--ಅಮ್ಮ ಫೌಂಡೇಷನ್ ಹೆಗ್ಗೇರಿ ಕಾಲೋನಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 28 ನೇ ಆರೋಗ್ಯ ಶಿಬಿರದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡದವರು 270 ಜನರನ್ನು ಪರೀಕ್ಷೆ ಮಾಡಿದರು. ನೇತ್ರ ಪರೀಕ್ಷೆಯಲ್ಲಿ 24 ಜನರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳಿಸಲು ತೀರ್ಮಾನಿಸಲಾಯಿತು.147 ಜನರಿಗೆ ಕನ್ನಡಕ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದರು.