ತಾಯಿ, ಇಬ್ಬರು ಹೆಮ್ಮಕ್ಕಳ ಉದ್ಯಮ ಯಶೋಗಾಥೆ ‘ಅಮ್ಮಾ ಮಶ್ರೂಮ್ಸ್‌ʼ

| N/A | Published : Jul 07 2025, 12:34 AM IST / Updated: Jul 07 2025, 02:34 PM IST

ಸಾರಾಂಶ

ಬಂಟ್ವಾಳ ತಾಲೂಕು ಕರಿಯಂಗಳ ಪಂಚಾಯಿತಿ ವ್ಯಾಪ್ತಿಯ ಪೊಳಲಿಯ ಬಳಿಯ ಬಡಕಬೈಲ್ ಗ್ರಾಮದಲ್ಲಿ ಕಾಮಿನಿ ಎಂಬ ಮಹಿಳೆ ಇಬ್ಬರು ಹೆಣ್ಣುಮಕ್ಕಳಾದ ತುಷಾರಾ ಮತ್ತು ಪವಿತ್ರಾ ಜೊತೆಗೂಡಿ ನಡೆಸಿರುವ ಮಶ್ರೂಮ್‌ ಉದ್ಯಮ ಇಂದು ಇವರನ್ನು ಎತ್ತರಕ್ಕೇರಿಸಿದೆ. 

ಮೌನೇಶ ವಿಶ್ವಕರ್ಮ

 ಬಂಟ್ವಾಳ : ಸಾಧಿಸುವ ಮನಸ್ಸಿದ್ದರೆ ಸಾಧನೆ ಕಷ್ಟವಲ್ಲ. ಇಲ್ಲಿ ಛಲವೇ ದೊಡ್ಡ ಬಲ ಎನ್ನುವುದಕ್ಕೆ ತಾಲೂಕಿನ ಪೊಳಲಿ ಸಮೀಪದ ಬಡಕಬೈಲು ಗ್ರಾಮದ ಈ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸ್ಪಷ್ಟ ನಿದರ್ಶನ ಎನಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕು ಕರಿಯಂಗಳ ಪಂಚಾಯಿತಿ ವ್ಯಾಪ್ತಿಯ ಪೊಳಲಿಯ ಬಳಿಯ ಬಡಕಬೈಲ್ ಗ್ರಾಮದಲ್ಲಿ ಕಾಮಿನಿ ಎಂಬ ಮಹಿಳೆ ಇಬ್ಬರು ಹೆಣ್ಣುಮಕ್ಕಳಾದ ತುಷಾರಾ ಮತ್ತು ಪವಿತ್ರಾ ಜೊತೆಗೂಡಿ ನಡೆಸಿರುವ ಮಶ್ರೂಮ್‌ ಉದ್ಯಮ ಇಂದು ಇವರನ್ನು ಎತ್ತರಕ್ಕೇರಿಸಿದೆ. 

ಮನೆಯಲ್ಲೇ ಬೆಳೆದ ತಾಜಾ ಓಯಿಸ್ಟರ್ ಮಶ್ರೂಮ್‌ಗಳನ್ನು ತಾವೇ ಪ್ಯಾಕ್‌ ಮಾಡಿ. ತಾವೇ ಮಾರಾಟ ಮಾಡುವ ಮೂಲಕ ನಡೆಯುತ್ತಿರುವ ಸ್ವಾವಲಂಬಿ ವ್ಯಾಪಾರದಿಂದ ಇವರು ಗಮನ ಸೆಳೆದಿದ್ದಾರೆ.ಕಾಮಿನಿ ಆರಂಭದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನಿವೃತ್ತಿಯ ಬಳಿಕ ಸ್ವ ಉದ್ಯೋಗ ಮಾಡುವ ಉದ್ದೇಶ ಹೊಂದಿದ್ದರು. ಅದಕ್ಕಾಗಿ ಕಾಸರಗೋಡಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಶ್ರೂಮ್‌ ಬೆಳೆ ತರಬೇತಿ ಪಡೆದಿದ್ದರು. ಇದೇ ವೇಳೆ ಹೆರಿಗೆಗೆಂದು ತಾಯಿ ಮನೆಗೆ ಬಂದಿದ್ದ ಹಿರಿಮಗಳು ತುಷಾರ ತಾಯಿಯಿಂದ ತರಬೇತಿ ಪಡೆದು, ತಾನೂ ಮಶ್ರೂಮ್‌ ಬೆಳೆಸುವ ಕೆಲಸಕ್ಕೆ ತಾಯಿಗೆ ಸಾಥ್‌ ನೀಡಿದರು.

 ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದ ಅವರಿಗೆ ಈ ಕೆಲಸದಲ್ಲಿಯೇ ಹೆಚ್ಚು ಖುಷಿ ಕಂಡು ಅದರಲ್ಲೇ ತೊಡಗಿಸಿಕೊಂಡರು. ಇದಾಗಿ ಒಂದೆರಡು ವರ್ಷದ ಬಳಿಕ ಉಪನ್ಯಾಸಕಿಯಾಗಿದ್ದ ಕಿರಿಮಗಳು ಪವಿತ್ರಾ ಕೂಡ ಚಿಕ್ಕಮಗುವಿನ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ತಾಯಿ ಮತ್ತು ಅಕ್ಕನ ಕೆಲಸಕ್ಕೆ ಜೊತೆಯಾಗುತ್ತಾರೆ. ಹೀಗೆ ಅಣಬೆ ಕೃಷಿಯ ಮೂಲಕ ಖುಷಿ ಕಾಣುತ್ತಿದೆ ಈ ಕುಟುಂಬ.

ಮನೆಯ ಬಳಿಯೇ ಬೆಳೆಯುತ್ತಾರೆ: ಬಡಕಬೈಲಿನ ತಮ್ಮ ಮನೆಯ ಅಂಗಳದಲ್ಲಿರುವ ಹಳೆಯ ಕಟ್ಟಡದಲ್ಲಿ ಪ್ರಸ್ತುತ ಅಣಬೆ ಬೇಸಾಯ ಮಾಡುತ್ತಿದ್ದು, ಸದ್ಯಕ್ಕೆ ಪ್ರತಿ ದಿನ ಕನಿಷ್ಠ 9 ಕಿಲೋಗ್ರಾಂ ತಾಜಾ ಓಯಿಸ್ಟರ್ ಮಶ್ರೂಮ್‌ ಬೆಳೆಸುತ್ತಿದ್ದಾರೆ, ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಾದರೆ ಬೆಳೆಯುವುದೇ ಸಾಧ್ಯವಿಲ್ಲ. ಹೀಗಾಗಿ ಬೇಸಿಗೆ ವೇಳೆಯಲ್ಲಿ ಮಶ್ರೂಮ್‌ ಉತ್ಪಾದನೆ ಸ್ಥಗಿತಗೊಳ್ಳುತ್ತದೆ. ಮಳೆಗಾಲ ಶುರುವಾದ ಬಳಿಕ ಮತ್ತೆ ಪ್ರಾರಂಭಿಸಿದ್ದೇವೆ.

 ಮತ್ತು ಅವುಗಳನ್ನು 2 ದಿನ ಮಾತ್ರ ಶೇಖರಿಸಬಹುದಾದ್ದರಿಂದ ಮಾರುಕಟ್ಟೆ ಹುಡುಕುವುದು ಇವರಿಗೆ ದೊಡ್ಡ ಸವಾಲಾಗಿದೆ . ಪ್ರತಿದಿನ ೯ ಕೆ.ಜಿ. ಯಷ್ಟು ಅಣಬೆ ಬೆಳೆಯುವುದರ ಜೊತೆಯಲ್ಲಿ ಅಣಬೆಗಳಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸುತ್ತಿರುವುದರಿಂದ ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿರುವುದು ಇವರ ಕೆಲಸಕ್ಕೆ ಸಾರ್ಥಕತೆ ತಂದುಕೊಟ್ಟಿದೆ. ‘ಅಮ್ಮ ಮಶ್ರೂಮ್ಸ್‌’ ಹೆಸರಿನ ಬ್ರಾಂಡ್‌ ನಲ್ಲಿ ಇವರ ಅಣಬೆ ಉತ್ಪನ್ನಗಳಾದ ಕಟ್ಲೆಟ್, ಮೈದಾ ರಹಿತ ಮೊಮೊಸ್‌, ಪಿಕಲ್‌, ಬರ್ಗರ್‌, ಚಕ್ಕುಲಿ, ಸಂಡಿಗೆ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

200 ಗ್ರಾಂ ತಾಜಾ ಮಶ್ರೂಮ್‌ ಪ್ಯಾಕೆಟ್‌ಗೆ ₹60 ವಿಧಿಸಲಾಗುತ್ತಿದೆ. ಪ್ಯಾಕಿಂಗ್ ಕೂಡ ಮನೆಯಲ್ಲೇ ನಡೆಯುತ್ತದೆ. ಮಂಗಳೂರು ಕೈಕಂಬದ ಎಫ್‌ಪಿಒ ಹಾಗೂ ಜಿಲ್ಲೆಯ ವಿವಿಧ ಆಹಾರ ಮೇಳಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೊಳಲಿ ಜಾತ್ರೆ, ಆಳ್ವಾಸ್‌ ಆಹಾರ ಮೇಳ, ಉಪ್ಪಿನಂಗಡಿ, ಪುತ್ತೂರು ಹಲಸು ಮೇಳದಲ್ಲಿ, ಪಿಲಿಕುಳ ಅರ್ಬನ್ ಹಾಥ್‌ ಸಹಿತ ವಿವಿಧೆಡೆಗಳಲ್ಲಿ ನಡೆದ ಹಣ್ಣುಗಳ ಮೇಳದಲ್ಲೂ ಅಮ್ಮಾ ಮಶ್ರೂಮ್ಸ್‌ ನ ಸ್ಟಾಲ್‌ ಗಮನ ಸೆಳೆದಿದೆ.ಪ್ರಧಾನಮಂತ್ರಿಗಳ ಪಿಎಂಎಫ್‌ ಎಂಇ ಯೋಜನೆಯಡಿ ಯಂತ್ರೋಪಕರಣಗಳ (ಮಶ್ರೂಮ್ ಡ್ರಾಯರ್‌) ಖರೀದಿಗೆ ಸಹಾಯ, ತೋಟಗಾರಿಕಾ ಇಲಾಖೆಯಿಂದ ಬೆಳೆಸುವ ಸಲುವಾಗಿ ಸಬ್ಸಿಡಿ, ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ಇವೆಲ್ಲವೂ ನಮ್ಮ ಉದ್ಯಮಕ್ಕೆ ಬೆಂಬಲವಾಗಿದೆ ಎನ್ನುತ್ತಾರೆ ತುಷಾರ.

 ಅಣಬೆಯ ಜೊತೆಗೆ ಅಣಬೆ ಖಾದ್ಯಗಳಿಗೂ ಹೆಚ್ಚಿನ ಬೇಡಿಕೆ ಬರುತ್ತಿದೆ, ಮುಂದಿನ ಹಂತದಲ್ಲಿ ಉದ್ಯಮ ವಿಸ್ತರಿಸುವ ಯೋಚನೆಯಿದೆ.

-ತುಷಾರಾ, ಅಣಬೆ ಬೆಳೆದು ಯಶಸ್ವಿಯಾದ ಮಹಿಳಾ ಉದ್ಯಮಿ.

Read more Articles on