ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ 52ನೇ ವರ್ಷದ ತೆರೆ ಮಹೋತ್ಸವ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ 52ನೇ ವರ್ಷದ ತೆರೆ ಮಹೋತ್ಸವ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿತು.ಮಾ. 28ಮತ್ತು 29ರಂದು ನಡೆದ ಮುತ್ತಪ್ಪ ದೇವರ ತೆರೆ ಮಹೋತ್ಸವಕ್ಕೆ ಧ್ವಜಾರೋಹಣ ಮೂಲಕ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಮಹೇಶ್ ಕಡಗದಾಳು ಚಾಲನೆ ನೀಡಿದರು.
ಅಮ್ಮತ್ತಿ ಓಂಟಿಯಂಗಡಿ ಇಂಜಿಲಿಗೆರೆ ಪಾಲಿಬೆಟ್ಟ ಸಿದ್ದಾಪುರ ವಿರಾಜಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ತೆರೆ ಮಹೋತ್ಸವದಲ್ಲಿ ಪಾಲ್ಗೊಂಡರು. ಎರಡು ದಿನಗಳ ಕಾಲ ನಡೆದ ತೆರೆ ಮಹೋತ್ಸವದಲ್ಲಿ ವಿವಿಧ ದೇವರುಗಳ ಕೋಲಗಳ ತೆರೆಗಳನ್ನು ಭಕ್ತರು ನೋಡಿ ಕಣ್ಣುಂಬಿಕೊಂಡರು. ವಸೂರಿಮಾಲಾ ತೆರೆ, ಕಂಡಕರ್ಣನ್ ತೆರೆ, ಪೊಟ್ಟನ್ ತೆರೆ ಭಕ್ತರನ್ನು ಹೆಚ್ಚು ಆಕರ್ಷಿಸಿತು. ಉಳಿದಂತೆ ಮುತ್ತಪ್ಪ ತಿರುವಪ್ಪನ ತೆರೆ, ವಿಷ್ಣುಮೂರ್ತಿ ತೆರೆ, ಶಾಸ್ತಪನ್ ತೆರೆ, ಗುಳಿಗನ ತೆರೆಗಳು ನಡೆದವು. ತೆರೆ ಮಹೋತವ ಅಂಗವಾಗಿ ಆಗಮಿಸಿದ ಭಕ್ತರಿಗೆ ಶನಿವಾರ ಹಾಗೂ ಭಾನುವಾರ ಅನ್ನಸಂತರ್ಪಣೆ ನಡೆಯಿತು. ತೆರೆ ಮಹೋತ್ಸವ ಅಂಗವಾಗಿ ಮುತ್ತಪ್ಪ ದೇವಾಲಯ ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಈ ಸಂದರ್ಭ ದೇವಾಲಯದ ಅಧ್ಯಕ್ಷ ರವಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಹಿಳೆಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.