ಸಾರಾಂಶ
ಹುಬ್ಬಳ್ಳಿ: ಅಮೃತ್ ಭಾರತ್ ಯೋಜನೆ-2ರ ಅಡಿ ನೈರುತ್ಯ ರೈಲ್ವೆಯ 34 ರೈಲು ನಿಲ್ದಾಣಗಳನ್ನು ₹800.31 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ 28 ನಿಲ್ದಾಣಗಳು, ಆಂಧ್ರಪ್ರದೇಶದ 2, ತಮಿಳುನಾಡಿನ 2 ರೈಲು ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗದ 7 ನಿಲ್ದಾಣಗಳಾದ ಆಲಮಟ್ಟಿ, ಬಾದಾಮಿ, ಬಾಗಲಕೋಟ, ವಿಜಯಪುರ, ಮುನಿರಾಬಾದ, ಸಂವರ್ದಂ, ವಾಸ್ಕೋ ಡ ಗಾಮಾ, ಬೆಂಗಳೂರು ವಿಭಾಗದ 15 ನಿಲ್ದಾಣಗಳಾದ ತುಮಕೂರು, ವೈಟ್‌ಫೀಲ್ಡ್, ಬಂಗಾರಪೇಟೆ, ಚೆನ್ನಪಟ್ಟಣ, ಧರ್ಮಪುರಿ, ಹೊಸೂರು, ದೊಡ್ಡಬಳ್ಳಾಪುರ, ಹಿಂದುಪುರ, ಕೆಂಗೇರಿ, ಕೃಷ್ಣರಾಜಪುರಂ, ಕುಪ್ಪಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗದ 12 ರೈಲು ನಿಲ್ದಾಣಗಳಾದ ಸಾಗರ ಜಂಬಗೂರು, ಸಕಲೇಶಪುರ, ಶಿವಮೊಬ್ಬ ಟೌನ್, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ಬಂಟ್ವಾಳ, ಚಾಮರಾಜನಗರ, ಚಿಕ್ಕಮಂಗಳೂರು, ಹಾಸನ, ಚಿತ್ರದುರ್ಗ, ರಾಣಿಬೆನ್ನೂರು ನಿಲ್ದಾಣಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ.ಅಮೃತ್ ಭಾರತ್ ಸ್ಟೇಷನ್ ಯೋಜನೆ ದೇಶಾದ್ಯಂತ ರೈಲ್ವೆ ನಿಲ್ಯಾಣಗಳನ್ನು ಆಧುನೀಕರಿಸುವಲ್ಲಿ ಮತ್ತು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಯಾಣಿಕರ ಅನುಭವಗಳನ್ನು ಹೆಚ್ಚಿಸಲು, ಸುರಕ್ಷತೆಗೆ ಆದ್ಯತೆ ನೀಡಲು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಸಂಯೋಜಿಸುವ ದೃಷ್ಟಿಕೋನ ಹೊಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ₹303 ಕೋಟಿ ವೆಚ್ಚದಲ್ಲಿ ಹಂತ -1ರಲ್ಲಿ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈಗ ಹಂತ -2 ನೈಋತ್ಯ ರೈಲ್ವೆಯ 34 ನಿಲ್ದಾಣಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಆಧುನೀಕರಿಸಲು ಸಜ್ಜಾಗಿದೆ.ಈ ನಿಲ್ದಾಣಗಳು ನವೀಕರಣವನ್ನು ಪಡೆಯುವುದಲ್ಲದೆ, ಕಾಯುವ ಪ್ರದೇಶಗಳು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು 12 ಮೀಟರ್ ಅಗಲದ ಪಾದಚಾರಿ ಮೇಲ್ವೇತುವೆ, ಉನ್ನತ ಮಟ್ಟದ ಪ್ಲಾಟ್ ಫಾರ್ಮ್ ಶೆಲ್ಟರ್ ಗಳು, ಆಗಮನ ಮತ್ತು ನಿರ್ಗಮನ ಪ್ರದೇಶಗಳ ಪ್ರತ್ಯೇಕತೆ, ಪ್ರಸ್ತುತ ಮತ್ತು ಭವಿಷ್ಯದ ಯೋಜಿತ ಸಂಚಾರವನ್ನು ಪೂರೈಸಲು ಸುಧಾರಿತ ಪರಿಚಲನಾ ಪ್ರದೇಶದಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.
ಎಲ್ಲ ವರ್ಗದ ನಿಲ್ದಾಣಗಳಲ್ಲಿ ಆಧುನಿಕ ಕಣ್ಗಾವಲು ವ್ಯವಸ್ಥೆ, ಲಿಫ್ಟ್ ಗಳು ಮತ್ತು ಎಸ್ಕಲೇಟರ್‌ಗಳು, ಉಚಿತ ವೈ-ಫೈ, ಮನರಂಜನಾ, ಶಾಪಿಂಗ್ ಪ್ರದೇಶಗಳು, ರೆಸ್ಟೋರೆಂಟ್, ಎಟಿಎಂಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳನ್ನು ಒದಗಿಸುವುದರೊಂದಿಗೆ ಸುರಕ್ಷತೆ, ಭದ್ರತೆ ಮತ್ತು ಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.ಕರ್ನಾಟಕದ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ನಗರದ ಐಕಾನ್‌ಗಳಾಗಿ ಹೊರಹೊಮ್ಮಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯನ್ನು ಫೆ. 26ರಂದು ಮಧ್ಯಾಹ್ನ 12.30ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.