ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಅವಧಿಗಿಂತ ಮುನ್ನ ಜನಿಸಿದ ಶಿಶುಗಳು, ತಾಯಿ ಕಳೆದುಕೊಂಡ ಹಾಗೂ ಎದೆ ಹಾಲಿನ ಕೊರತೆ ಎದುರಿಸುತ್ತಿರುವ ತಾಯಂದಿರ ಶಿಶುಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ತಾಯಿ ಎದೆ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಧಾರವಾಡ ರೋಟರಿ ಸಂಸ್ಥೆ ಆಶ್ರಯದಲ್ಲಿ ಎಸ್‌ಡಿಎಂ ಆಸ್ಪತ್ರೆಯಲ್ಲಿ 2022ರ ಅಕ್ಟೋಬರ್ ತಿಂಗಳಲ್ಲಿ ಶುರು ಮಾಡಿದ ಅಮೃತ ಮಿಲ್ಕ್ ಬ್ಯಾಂಕ್ ಎದೆ ಹಾಲು ಅಂತಹ ಶಿಶುಗಳಿಗೆ ವರದಾನವಾಗಿದೆ.
ಧಾರವಾಡ ಮಾತ್ರವಲ್ಲದೇ ಉತ್ತರ ಕರ್ನಾಟಕದ ಅದೆಷ್ಟೋ ಮಕ್ಕಳಿಗೆ ಈ ಬ್ಯಾಂಕ್ ಸಹಾಯವಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ 1627 ತಾಯಂದಿರಿಂದ ಬರೋಬ್ಬರಿ 1,96,420 ಮಿಲಿ ಲೀಟರ್ ಪ್ರಮಾಣದಲ್ಲಿ ಎದೆ ಹಾಲು ಸಂಗ್ರಹಿಸಲಾಗಿದೆ.ನವಜಾತ ಶಿಶುಗಳ ಹಾಗೂ ಬಾಣಂತಿಯರ ಆರೋಗ್ಯ ಪೋಷಣೆ ಹಾಗೂ ಪಾಲನೆಯ ದೃಷ್ಟಿಯಿಂದ ಸಾರ್ವಜನಿಕ ವಲಯದಲ್ಲಿ ಶುಲ್ಕ ರಹಿತವಾಗಿ ಈ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು ಸ್ವಯಂಪ್ರೇರಣೆಯಿಂದ ತಮ್ಮ ಎದೆ ಹಾಲು ದಾನ ಮಾಡಲು ಬರುವ ತಾಯಂದಿರನ್ನು ಎಸ್‌ಡಿಎಂ ಆಸ್ಪತ್ರೆಯು ಗುರುತಿಸಿ ಇತರರಿಗೂ ಮಾದರಿಯಾಗುವಂತೆ ಮಿಲ್ಕ್ ಡೋನರ್ ಚಾಂಪಿಯನ್ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸುತ್ತಿದೆ.
ಎಷ್ಟು ಮಕ್ಕಳಿಗೆ ವಿತರಣೆ:2022ರ ಅಕ್ಟೋಬರ್ ತಿಂಗಳಿಂದ 2024ರ ಜೂನ್ ತಿಂಗಳ ವರೆಗೆ 1672 ತಾಯಂದಿರು, 196,420 ಮಿ.ಲೀ, ಹಾಲು ದಾನ ಮಾಡಿದ್ದು, 960 ಶಿಶುಗಳು ಈ ಹಾಲಿನ ಪ್ರಯೋಜನ ಪಡೆದಿವೆ. ದಾನ ಮಾಡಿದ ಹಾಲಿನ ಪೈಕಿ 1,89,550 ಮಿಲಿ ಲೀಟರ್ ಹಾಲನ್ನು ಪ್ಯಾಶ್ಚೀಕರಿಸಲಾಗಿದೆ ಹಾಗೂ ಈ ವರೆಗೆ 1,33,900 ಮಿಲೀ ಎದೆ ಹಾಲನ್ನು ಶಿಶುಗಳಿಗೆ ಬಳಸಲಾಗಿದೆ. ಸದ್ಯ 12,480 ಮಿ.ಲೀ ಹಾಲು ವಿತರಣೆಗೆ ಸೂಕ್ತವಾಗಿದೆ ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಉಪ ಪ್ರಾಚಾರ್ಯರು ಹಾಗೂ ಮಕ್ಕಳ ತಜ್ಞ ಡಾ. ವಿಜಯ ಕುಲಕರ್ಣಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ದೇಶದಲ್ಲಿ 120ಕ್ಕೂ ಹೆಚ್ಚು ಅಧಿಕ ಮಿಲ್ಕ್ ಬ್ಯಾಂಕ್‌ಗಳಿವೆ. ಎಸ್‌ಡಿಎಂನ ಅಮೃತ ಮಿಲ್ಕ್ ಬ್ಯಾಂಕ್ ವಿಸ್ತಾರದ ಲೆಕ್ಕದಲ್ಲಿ ಸುಮಾರು ಒಂದು ಸಾವಿರ ಚದರ ಅಡಿಗಳಿಗೂ ಹೆಚ್ಚಿದ್ದು, ಡಾ. ಪಲ್ಲವಿ ದೇಶಪಾಂಡೆ ರೋಟರಿ ಕ್ಲಬ್ ಅಧ್ಯಕ್ಷರಿದ್ದಾಗ ಈ ಬ್ಯಾಂಕ್ ಶುರು ಮಾಡಲಾಯಿತು. ಭಾರತದ ಅತ್ಯಂತ ದೊಡ್ಡ ಮಿಲ್ಕ್ ಬ್ಯಾಂಕ್ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಹಾಲಿನ ಶೇಖರಣೆ, ಸಂಸ್ಕರಣೆ, ವಿನಿಮಯ ಹಾಗೂ ಸಮಾಲೋಚನೆಗೆ ಸಿಬ್ಬಂದಿ, ಆಧುನಿಕ ಉಪಕರಣ ಹೊಂದಿದೆ. ಸಂಪೂರ್ಣ ಕಾರ್ಯನಿರ್ವಹಣೆಗೆ ಬೇಕಾದ ಪ್ರತ್ಯೇಕ ಕೊಠಡಿಗಳಿವೆ. ಸಂಗ್ರಹಿಸಲಾದ ಎದೆ ಹಾಲನ್ನು ವಿಲೇವಾರಿ ಮಾಡುವ ಮುನ್ನ ಅದನ್ನು ಸೋಂಕು ರಹಿತವಾಗಿಸಲು ಪಾಶ್ಟರೈಸೇಶನ್ ತಂತ್ರಜ್ಞಾನ ಸಹ ಹೊಂದಿದೆ. ಮುಂಬರುವ ದಿನಗಳಲ್ಲಿ ದಾನಿ ತಾಯಿಯ ಹಾಲಿನ ಬಗ್ಗೆ ಹೆಚ್ಚು ಸಂಶೋಧನೆ ನಡೆಸಲು ಹಾಗೂ ಹಾಲಿನ ಗುಣಮಟ್ಟ ಕಾಪಾಡಲು ರೋಟರಿ ಕ್ಲಬ್‌ನ ಆಶಯದಲ್ಲಿ ಹ್ಯೂಮನ್ ಮಿಲ್ಕ್ ಅನಲೈಸರನ್ನು ಸ್ಥಾಪಿಸಿ ಪ್ರಸ್ತುತ ಬ್ಯಾಂಕ್‌ನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಯೋಜನೆಗಳನ್ನ ರೂಪಿಸಿದೆ ಎಂದು ಡಾ. ವಿಜಯ ಕುಲಕರ್ಣಿ ಹೆಚ್ಚಿನ ಮಾಹಿತಿ ತಿಳಿಸಿದರು. ಎದೆ ಹಾಲಿನ ಮಹತ್ವದ ಜಾಗೃತಿ ಆಗಲಿ1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಶಿಶುಗಳ ಆರೋಗ್ಯದ ಪೋಷಣೆ ಹಾಗೂ ಸಂರಕ್ಷಣೆಗಾಗಿ ವಿಶಿಷ್ಟ ಧ್ಯೇಯದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿ ವರ್ಷ ಆ. 1ರಿಂದ 7ರ ವರೆಗೆ ಆಚರಿಸುತ್ತಿದ್ದು, ಎಸ್‌ಡಿಎಂ ವಿವಿಯಲ್ಲೂ ಸಹ ಈ ಸಪ್ತಾಹ ನಡೆಯುತ್ತಿದೆ. ಇದರಂಗವಾಗಿ ಅಮೃತ್ ಮಿಲ್ಕ್ ಬ್ಯಾಂಕ್‌ನ 2ನೇ ವರ್ಷಾಚರಣೆ ಆಯೋಜಿಸುವ ಮೂಲಕ ನಾಡಿನ ಮತ್ತಷ್ಟು ತಾಯಂದರಿಗೆ ತಮ್ಮ ಎದೆ ಹಾಲನ್ನು ದಾನ ಮಾಡುವ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಎಂದು ಎಸ್‌ಡಿಎಂ ವಿವಿ ಕುಲಪತಿ ಡಾ. ನಿರಂಜನಕುಮಾರ ಹೇಳಿದ್ದಾರೆ.