ಗೋಕರ್ಣ ದೇಗುಲದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ಅಮೃತಾನ್ನ

| Published : Jan 07 2025, 12:33 AM IST

ಗೋಕರ್ಣ ದೇಗುಲದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ಅಮೃತಾನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಇದುವರೆಗೆ 60 ಲಕ್ಷಕ್ಕೂ ಹೆಚ್ಚು ಜನರು ಪ್ರಸಾದ ಭೋಜನ ಮಾಡಿದ್ದಾರೆ. ಕರ್ನಾಟಕದ ಜತೆ ಮಹಾರಾಷ್ಟ್ರ, ಗುಜರಾತ, ರಾಜಸ್ತಾನ, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳ ಭಕ್ತರಿಗೂ ಪ್ರಸಾದ ಭೋಜನ ವರದಾನವಾಗಿದೆ.

ವಸಂತಕುಮಾರ್ ಕತಗಾಲ ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವರ ಅಮೃತಾನ್ನ ಪ್ರಸಾದ ಭೋಜನಕ್ಕೆ ಭಕ್ತರು ಹರಿದು ಬರುತ್ತಿದ್ದಾರೆ. ಪ್ರತಿದಿನ 3- 4 ಸಾವಿರ ಭಕ್ತರು ಪ್ರಸಾದ ಭೋಜನ ಮಾಡುತ್ತಿದ್ದಾರೆ. ದೂರದೂರದಿಂದ ಬರುವ ಭಕ್ತರಿಗೆ ಇದು ವರದಾನವಾಗಿ ಪರಿಣಮಿಸಿದೆ. ಇದುವರೆಗೆ 60 ಲಕ್ಷಕ್ಕೂ ಹೆಚ್ಚು ಜನರು ಪ್ರಸಾದ ಭೋಜನ ಮಾಡಿದ್ದಾರೆ. ಕರ್ನಾಟಕದ ಜತೆ ಮಹಾರಾಷ್ಟ್ರ, ಗುಜರಾತ, ರಾಜಸ್ತಾನ, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳ ಭಕ್ತರಿಗೂ ಪ್ರಸಾದ ಭೋಜನ ವರದಾನವಾಗಿದೆ.ಗೋಕರ್ಣ ಮಹಾಬಲೇಶ್ವರ ದೇವಾಲಯ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿದ್ದಾಗ ಅಂದರೆ 2008ರಲ್ಲಿ ರಾಘವೇಶ್ವರ ಶ್ರೀಗಳು ಗೋಕರ್ಣ ದೇವಾಲಯದಲ್ಲಿ ಅಮೃತಾನ್ನ ಪ್ರಸಾದ ಭೋಜನ ಆರಂಭಿಸಿದರು. ಅಂದಿನಿಂದ ಇಂದಿನ ತನಕ ಪ್ರತಿದಿನವೂ ಭಕ್ತರಿಗೆ ಪ್ರಸಾದ ಭೋಜನವನ್ನು ಉಣಬಡಿಸಲಾಗುತ್ತಿದೆ. ಅಮೃತಾನ್ನ ಭೋಜನದಲ್ಲಿ ಅನ್ನ, ಸಾಂಬಾರು, ಸಾರು, ಮಜ್ಜಿಗೆ, ಪಾಯಸ ಇರಲಿದ್ದು, ಎಲ್ಲವೂ ರುಚಿಕಟ್ಟಾಗಿರುತ್ತದೆ. ಮಧ್ಯಾಹ್ನ 12 ಗಂಟೆಯಿಂದ 2 ಹಾಗೂ ಸಂಜೆ 7.30ರಿಂದ 8.30ರ ತನಕ ಅನ್ನಸಂತರ್ಪಣೆ ನಡೆಯುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಪ್ರತಿದಿನ ರಾಜ್ಯದ ವಿವಿಧೆಡೆಯ 100- 150ರಷ್ಟು ಶಾಲೆಗಳ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭೋಜನಕ್ಕೆ ಬರುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವ ಅಯ್ಯಪ್ಪ ಭಕ್ತರೂ ಬರುತ್ತಾರೆ. ಶಿವರಾತ್ರಿ ದಿನ ಬೆಳಗ್ಗೆಯಿಂದ ರಾತ್ರಿ ತನಕ ಉಪಾಹಾರ ನೀಡಲಾಗುತ್ತದೆ. ಅಂದು ಲಕ್ಷಾಂತರ ಜನರು ಉಪಾಹಾರ ಸೇವಿಸುವುದು ವಿಶೇಷವಾಗಿದೆ. ಶ್ರಾವಣ ಮಾಸದಲ್ಲೂ ಭೋಜನಶಾಲೆ ಜನರಿಂದ ತುಂಬಿರುತ್ತದೆ. ಪ್ರಸಾದ ಭೋಜನ ಸುವ್ಯವಸ್ಥಿತವಾಗಿ ಮುಂದುವರಿಯಬೇಕು. ಇದರಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ತುಂಬಾ ಅನುಕೂಲವಾಗಿದೆ ಎಂದು ಭೋಜನ ಮಾಡಿದ ಭಕ್ತರು ಅಭಿಪ್ರಾಯಪಡುತ್ತಾರೆ.

ಅಡುಗೆ ಮನೆಗೆ ಹೋದರೆ ಅನ್ನ ಮಾಡುವ ಬೃಹತ್ ಬಾಯ್ಲರ್ ಎದುರಾಗುತ್ತದೆ. ಪ್ರತಿದಿನ 3- 4 ಕ್ವಿಂಟಲ್ ಅಕ್ಕಿ ಬೇಕು. 40- 50 ಕೆಜಿ ತೊಗರಿಬೇಳೆ, ಕಡಿಮೆ ಎಂದರೂ 50 ಕೆಜಿಯಷ್ಟು ತರಕಾರಿ ಬೇಕು. ಈ ಹಿಂದೆ ಅಡುಗೆ ಮನೆಯಲ್ಲಿ ಹಾಗೂ ಬಡಿಸಲು 12 ಪೂರ್ಣಕಾಲಿಕ ಸಿಬ್ಬಂದಿ ಇದ್ದರು. ಜನಜಂಗುಳಿ ಹೆಚ್ಚಿದ್ದಾಗ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ.

ಸಿಬ್ಬಂದಿ ನೇಮಕ: ಗೋಕರ್ಣ ಮಹಾಬಲೇಶ್ವರ ದೇವಾಲಯದ ಪ್ರಸಾದ ಭೋಜನದಿಂದ ಭಕ್ತರಿಗೆ ಅನುಕೂಲ ಆಗಿದೆ. ಸದ್ಯದಲ್ಲೇ ಅಗತ್ಯ ಇರುವಷ್ಟು ಅಡುಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತೇವೆ. ಈಗಾಗಲೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಮಹಾಬಲೇಶ್ವರ ದೇವಾಲಯ ಆಡಳಿತ ಸಮಿತಿ ಕಾರ್ಯದರ್ಶಿ ಕಲ್ಯಾಣಿ ಕಾಂಬಳೆ ತಿಳಿಸಿದರು.

ರುಚಿಕಟ್ಟು ಆಹಾರ: ಗೋಕರ್ಣದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯ ಜನರು ಪ್ರಸಾದ ಭೋಜನ ಸೇವಿಸುತ್ತಾರೆ. ಎಲ್ಲ ಪದಾರ್ಥಗಳೂ ರುಚಿಕಟ್ಟಾಗಿವೆ. ಇದರಿಂದ ಭಕ್ತರಿಗೆ ತುಂಬಾ ಅನುಕೂಲವಾಗಿದೆ ಎಂದು ಬೆಂಗಳೂರಿನ ಪ್ರವಾಸಿಗ ಶಿವಕುಮಾರ ತಿಳಿಸಿದರು.