ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ಅಮೃತ-೨ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಮತ್ತೊಂದು ಸಭೆ ನಡೆಯುವರೆಗೆ ಕಾಮಗಾರಿ ನಿಲ್ಲಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ-೨ ಯೋಜನೆ ವೈಜ್ಞಾನಿಕ ಮಾದರಿಯಲ್ಲಿ ನಡೆಸುತ್ತಿಲ್ಲ ಎನ್ನುವ ಸದಸ್ಯರ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತಗೆದುಕೊಂಡರು. ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ಸುದೀರ್ಘ ಬಾಳಿಕೆ ಬರಬೇಕಾಗಿದೆ. ಹೀಗಾಗಿ ಪಟ್ಟಣದ ೨೩ ವಾರ್ಡ್ ಗಳಲ್ಲಿ ಕಾಮಗಾರಿ ನಡೆಯಲಿದ್ದು, ಹಂತ, ಹಂತವಾಗಿ ಕಾಮಗಾರಿ ಮುಗಿದ ಬಳಿಕ ಇನ್ನೊಂದು ವಾರ್ಡ್ ಗೆ ತೆರಳಬೇಕು.ಕಾಮಗಾರಿ ನಡೆಸುವ ವೇಳೆ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತರಬೇಕು.ಅಲ್ಲದೆ ಮುಂದಿನ ಸಭೆಗೆ ಮುಖ್ಯ ಗುತ್ತಿಗೆದಾರರು ಆಗಮಿಸಿ ಕಾಮಗಾರಿ ಸಂಪೂರ್ಣ ಮಾಹಿತಿ ನೀಡುವರೆಗೆ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸೂಚಿಸಿದರು.ಪಟ್ಟಣದಲ್ಲಿ ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ಯೋಜನೆಯಡಿ ನಡೆಸುವ ಕಾಮಗಾರಿ ನಡೆಸಲು ಸಭೆಯ ಅನುಮತಿ ಕೇಳಿದಾಗ ಸದಸ್ಯ ಮುರ್ತುಜಾ ಡಾಲಾಯತ್, ಕಳೆದ ಸಭೆಯಲ್ಲಿ ಕಳಪೆ ಕಾಮಗಾರಿ ಆರೋಪ ಹಿನ್ನೆಲೆಯಲ್ಲಿ ಮಹೇಶ ಪಾಟೀಲ ಹಾಗೂ ಬಸವರಾಜ ಬಂಕದ ಅವರಿಗೆ ಕಾಮಗಾರಿ ನೀಡಬಾರದೆಂದು ಠರಾವು ಪಾಸ್ ಮಾಡಲಾಗಿದೆ. ಮತ್ತೆ ಅವರಿಗೆ ಗುತ್ತಿಗೆ ನೀಡಿದರೆ ಕಳಪೆ ಕಾಮಗಾರಿ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದಾಗ ಮುದಿಯಪ್ಪ ಮುಧೋಳ, ಉಮೇಶ ರಾಠೋಡ ಧ್ವನಿಗೂಡಿಸಿದರು. ಕಾಮಗಾರಿಯ ಗುಣಮಟ್ಟದ ಜವಾಬ್ದಾರಿ ಹೊತ್ತುಕೊಳ್ಳುವದಾಗಿ ಪುರಸಭೆ ಅಭಿಯಂತರ ಉಮೇಶಗೌಡ ಓಜನಹಳ್ಳಿ ಹೇಳಿದಾಗ ಕಾಮಗಾರಿ ಬಿಲ್ ಮಾಡುವಾಗ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತಂದು ಬಿಲ್ ಮಾಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅಭಿಯಂತರರಿಗೆ ತಾಕೀತು ಮಾಡಿದರು.
ಪಟ್ಟಣದ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸಲು, ಶುದ್ಧ ಕುಡಿಯುವ ನೀರಿನ ಘಟಕಗಳ ವಾರ್ಷಿಕ ನಿರ್ವಹಣೆಗೆ ಟೆಂಡರ್, ಠರಾವ್ ಸಂಖ್ಯೆ ೮೯ ರಲ್ಲಿ ಎಸ್‌ಎಫ್‌ಸಿ ₹೨೪.೧೦ ಯೋಜನೆಯ ೨೦೧೭-೧೮ & ೨೦೧೮-೧೯ ನೇ ಸಾಲಿನಲ್ಲಿ ಉಳಿಕೆ ಮೊತ್ತಕ್ಕೆ ಪ.ಪಂಗಡ ಜನಾಂಗದವರಿಗೆ ಸಣ್ಣ ಉದ್ಯಮ ನಡೆಸಲು ಸಹಾಯಧನಕ್ಕೆ ಪರಿಷ್ಕೃತ ಕ್ರೀಯಾ ಯೋಜನೆ ತಯಾರಿಸಲು, ಬೀದಿ ದೀಪ ನಿರ್ವಹಣೆ, ಬೀದಿ ದನ ಹಾಗೂ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮತ್ತು ತೆರವುಗೊಳಿಸಲು,ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗೆ, ಮಹಾವೀರ ಜೈನ ಸಮುದಾಯ ಭವನಕ್ಕೆ ನಿವೇಶನ ಒದಗಿಸಲು, ತಾಪಂ ಕಟ್ಟಡ ನಿರ್ಮಾಣಕ್ಕೆ ಜಾಗ, ರೋಣ ದಿಂದ ಗಜೇಂದ್ರಗಡ ತಾಲೂಕಿಗೆ ಸ್ಥಳಾಂತರವಾದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಖಾಲಿ ನಿವೇಶನ ನೀಡಲು, ಪಟ್ಟಣದ ೩ ರಸ್ತೆಗಳಲ್ಲಿ ಸ್ವಾಗತ ಬಾಗಿಲು ನಿರ್ಮಾಣಕ್ಕೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹಸಿರು ನಿಶಾನೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಸದಸ್ಯರಾದ ಯಮನೂರ ತಿರಕೋಜಿ, ರಾಜು ಸಾಂಗ್ಲಿಕರ, ಯು.ಆರ್. ಚೆನ್ನಮ್ಮನವರ, ಶಿವರಾಜ ಘೋರ್ಪಡೆ, ರೂಪೇಶ ರಾಠೋಡ, ಕನಕಪ್ಪ ಅರಳಿಗಿಡದ, ಮುರ್ತುಜಾ ಡಾಲಾಯತ, ಮುದಿಯಪ್ಪ ಮುಧೋಳ, ವೆಂಕಟೇಶ ಮುದಗಲ್, ವೀರಪ್ಪ ಪಟ್ಟಣಶೆಟ್ಟಿ, ಲಕ್ಷ್ಮೀ ಮುಧೋಳ, ಮುತ್ತಣ್ಣ ಮ್ಯಾಗೇರಿ, ರಫೀಕ್ ತೋರಗಲ್, ಬಸವರಾಜ ಹೂಗಾರ, ದ್ರಾಕ್ಷಾಯಿಣಿ ಚೋಳಿನ, ಲೀಲಾ ಸವಣೂರ, ದೀಪಾ ಗೌಡರ ಸೇರಿ ಇತರರು ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತರಬೇತಿಯಲ್ಲಿದ್ದು, ಅವರು ಬಂದ ಬಳಿಕ ತರಕಾರಿ ಮಾರುಕಟ್ಟೆ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಮೊದಲ ಹಂತವಾಗಿ ೧೦೦ತಳ್ಳುವ ಗಾಡಿ ನೀಡಲು ತೀರ್ಮಾನಿಸಿದ್ದು, ತಿಂಗಳ ಅಂತ್ಯದೊಳಗೆ ಉಳಿದ ತಳ್ಳುವ ಗಾಡಿ ನೀಡಲಾಗುತ್ತದೆ. ಬಳಿಕ ಇನ್ನುಳಿದ ೩೦ ಬೀದಿಬದಿ ಕಾರ್ಮಿಕರಿಗೆ ತಳ್ಳುವ ಗಾಡಿ ನೀಡಲಾಗುತ್ತದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.