3 ಪುರಸಭೆ ವ್ಯಾಪ್ತಿಯಲ್ಲಿ ಅಮೃತ 2.0 ಯೋಜನೆ: ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್

| Published : Jul 22 2025, 12:17 AM IST

3 ಪುರಸಭೆ ವ್ಯಾಪ್ತಿಯಲ್ಲಿ ಅಮೃತ 2.0 ಯೋಜನೆ: ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಕಾಮಗಾರಿ ಅಮೃತ 2.0 ಯೋಜನೆಯು ಹುಮನಾಬಾದ್‌, ಚಿಟಗುಪ್ಪ, ಹಳ್ಳಿಖೇಡ (ಬಿ) ಪುರಸಭೆಯ ವ್ಯಾಪ್ತಿಯಲ್ಲಿ ಗುತ್ತಿಗೆ ದಾರರು ನಿಗದಿತ ಅವಧಿಯಲ್ಲಿ ಪ್ರತಿ ಮನೆಗಳ ನಲ್ಲಿಗಳ ಮೂಲಕ 20x7 ಕುಡಿಯುವ ನೀರು ಒದಗಿಸಲು ಗುಣಮಟ್ಟ ಕಾಮಗಾರಿ ಕಾಯ್ದುಕೊಳ್ಳಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಕಾಮಗಾರಿ ಅಮೃತ 2.0 ಯೋಜನೆಯು ಹುಮನಾಬಾದ್‌, ಚಿಟಗುಪ್ಪ, ಹಳ್ಳಿಖೇಡ (ಬಿ) ಪುರಸಭೆಯ ವ್ಯಾಪ್ತಿಯಲ್ಲಿ ಗುತ್ತಿಗೆ ದಾರರು ನಿಗದಿತ ಅವಧಿಯಲ್ಲಿ ಪ್ರತಿ ಮನೆಗಳ ನಲ್ಲಿಗಳ ಮೂಲಕ 20x7 ಕುಡಿಯುವ ನೀರು ಒದಗಿಸಲು ಗುಣಮಟ್ಟ ಕಾಮಗಾರಿ ಕಾಯ್ದುಕೊಳ್ಳಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಮಾಹಿತಿ ನೀಡಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ 165.14 ಕೋಟಿ ರು. ವೆಚ್ಚದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40, ಉಳಿದ ಶೇ.10 ರಷ್ಟು ವಿವಿಧ ಯೋಜನೆ ಅನುದಾನದ ಉಳಿತಾಯದಿಂದ ಮುಂದಿನ 30 ವರ್ಷಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ.

ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಕಾಮಗಾರಿ ಮುಗಿದ ಕೂಡಲೇ ಅಗೆದಿರುವ ರಸ್ತೆಗಳನ್ನು ಪುನಃ ರೀಪೇರಿ ಮಾಡುವಂತೆ ಎಚ್ಚರಿಕೆ ವಹಿಸಬೇಕು ಎಂದರು.

ಮೆಸ್ಸರ್ಸ್ ಕೆವಾಡಿಯಾ ಕನ್ಸ್‌ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಅಹಮದಾಬಾದ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯ ಮಾಡಬೇಕು. ₹2.5 ಕೋಟಿ ಐದು ವರ್ಷ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಪೂರ್ಣಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಈಗಾಗಲೇ ಪೈಪ್‌ಲೈನ್ ಆಳವಡಿಕೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇನ್ನು ಮುಂದೆ ಕೆಲಸ ಚುರುಕುಗೊಳಿಸಿ ಪ್ರತಿವಾರವೂ ಕಾಮಗಾರಿ ಪ್ರಗತಿಯ ವರದಿಯನ್ನು ತಮಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

ಕಾಮಗಾರಿ ಸಂದರ್ಭದಲ್ಲಿ ಬದಲಾವಣೆ ಅನಿವಾರ್ಯತೆ ಬಂದಲ್ಲಿ ಅದಕ್ಕೆ ತಗಲುವ ಖರ್ಚು ಕೆಕೆಆರ್‌ಡಿಬಿಯಿಂದ ಮಂಜೂರು ಮಾಡಲಾಗುವುದು. ಪುರಸಭೆ ಕೈಗೊಳ್ಳುವ ಅಭಿವದ್ಧಿ ಯೋಜನೆಗಳಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಅವರು, ಸಭೆಯಲ್ಲಿ ಗೈರಾಗಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರಿನ ಯೋಜನೆಯ ಮೂಲಕ ಜನರಿಗೆ ಮೂಲ ಸೌಕರ್ಯಗಳು ಕಲ್ಪಿಸುವ ಕುರಿತು ಇಚ್ಛಾಶಕ್ತಿ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ನರಸಿಂಹರೆಡ್ಡಿ ಮಾತನಾಡಿ. 8.28 ಹಳ್ಳಿಖೇಡ (ಬಿ), 22.94 ಹುಮನಾಬಾದ, 12.24 ಚಿಟ್ಟಗುಪ್ಪ ಪುರಸಭೆಯಿಂದ ಇಟಿಪಿ ಪ್ಲಾಂಟ್ ಸೇರಿದಂತೆ ಇತರೆ ಖರ್ಚು ವೆಚ್ಚಕ್ಕೆ ಹಣ ಮಂಜೂರಾತಿ ಮಾಡಬೇಕು. ಟ್ಯಾಂಕ್ ನಿರ್ಮಾಣಕ್ಕೆ ಟೀಚರ್ಸ್ ಕಾಲೊನಿ ಒಂದು ಸ್ಥಳ ಗುರುತಿಸಲಾಗಿದ್ದು ಇನ್ನೂ ಮೂರು ಸ್ಥಳಗಳು ಗುರುತಿಸಿ ನಮಗೆ ನೀಡಿದಲ್ಲಿ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಬಹುದು. ಟ್ಯಾಂಕ್ ನಿರ್ಮಾಣಕ್ಕೆ ಕನಿಷ್ಠ ಎಂಟು ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಚಿಟಗುಪ್ಪ ಪುರಸಭೆ ಮುಖ್ಯಾಧಿಕಾರಿ ಬಾಬಾ, ಹುಮನಾಬಾದ್ ಪುರಸಭೆ ಮುಖ್ಯಾಧಿಕಾರಿ ವನಿತಾ ಚವ್ಹಾಣ, ಹಳ್ಳಿಖೇಡ (ಬಿ) ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಿಂಗಪ್ಪ ಹದನೂರ, ಪುರಸಭೆ ಸದಸ್ಯರಾದ ರಮೇಶ ಕಲ್ಲೂರ, ಸುನೀಲ್ (ಕಾಳಪ್ಪ) ಪಾಟೀಲ್, ವಿಜಯಕುಮಾರ ದುರ್ಗದ, ಧನಲಕ್ಷ್ಮಿ ಗೊಡಕೆ ಇದ್ದರು.