ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಮೃತ ವಿಶ್ವವಿದ್ಯಾಪೀಠಂ ತನ್ನ ಮೈಸೂರು ಕ್ಯಾಂಪಸ್ ನಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್ ಅನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಳಿಸಿತು. ಆಗಸ್ಟ್ 18 ರಂದು ನಡೆದ ಶುಭಾರಂಭ 2025 ಕಾರ್ಯಕ್ರಮದಲ್ಲಿ ಪ್ರಥಮ ಎಂಬಿಎ ತರಗತಿ ಉದ್ಘಾಟಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಹಿಟಾಚಿ ಗ್ರೂಪ್ ಕಂಪನಿಯ ಗ್ಲೋಬಲ್ ಲಾಜಿಕ್ ನ ಕಾರ್ಪೊರೇಟ್ ಉಪಾಧ್ಯಕ್ಷೆ ಅಶ್ವಿನಿ ನಂದಿನಿ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ವಿವರಿಸಿದರು.ವಿದ್ಯಾರ್ಥಿಗಳು ದೊಡ್ಡ ಕನಸು ಕಾಣುವುದರ ಜೊತೆಗೆ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೊಂದಿಕೊಳ್ಳುವಿಕೆ, ಕುತೂಹಲ ಮತ್ತು ನಿರಂತರ ಕಲಿಕೆಯು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರು.ನಿಜವಾದ ಯಶಸ್ಸು ಜೀವನದಲ್ಲಿ ಉತ್ಸಾಹ, ಉದ್ದೇಶ ಮತ್ತು ಸಮತೋಲನದಿಂದ ಬರುತ್ತದೆ ಎಂದ ಅವರು, ಅಮೃತ ವಿಶ್ವವಿದ್ಯಾಪೀಠಂನ ಶೈಕ್ಷಣಿಕ ಶ್ರೇಷ್ಠತೆ ಮತ್ತು ಆಧ್ಯಾತ್ಮಿಕ ನೆಲೆಯ ಮಿಶ್ರಣವು ವೃತ್ತಿ ಪರರನ್ನು ಮಾತ್ರವಲ್ಲದೆ ಸಹಾನುಭೂತಿಯುಳ್ಳ ಮನುಷ್ಯರನ್ನು ಸೃಷ್ಟಿಸುತ್ತಿದೆ ಎಂದರು.ಗೌರವ ಅತಿಥಿಯಾಗಿದ್ದ ಬೆಂಗಳೂರಿನ ಇನ್ಫೋಸಿಸ್ ನ ಅಸೋಸಿಯೇಟ್ ಉಪಾಧ್ಯಕ್ಷ ಮತ್ತು ಜಾಗತಿಕ ಮುಖ್ಯಸ್ಥ ಜಿ. ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳು ಎಂಬಿಎ ಶಿಕ್ಷಣವನ್ನು ಕೇವಲ ಶೈಕ್ಷಣಿಕ ದೃಷ್ಟಿಯಿಂದ ನೋಡದೆ ಬದಲಾಗುತ್ತಿರುವ ಜಗತ್ತಿಗೆ ಅದನ್ನು ಅನ್ವಯಿಸುವ ಬಗೆಯನ್ನು ಕಲಿತುಕೊಳ್ಳಬೇಕು. ಸೃಜನಶೀಲತೆ ಮತ್ತು ಅಂತಃಪ್ರಜ್ಞೆಯ ಮೂಲಕ ಕಲಿಯುವುದು, ಕಲಿತದ್ದನ್ನು ಬಿಟ್ಟು ಮತ್ತೆ ಕಲಿಯುವುದು ಬಹಳ ಮುಖ್ಯವಾಗುತ್ತದೆ ಎಂದರು. ಯಶಸ್ಸು ಗಳಿಸಬೇಕಾದರೆ ಅನೇಕ ವಿಷಯಗಳಲ್ಲಿ ಪ್ರಜ್ಞಾ ಪೂರ್ವಕವಾಗಿ ರಾಜಿಮಾಡುಕೊಳ್ಳಬೇಕಾಗುತ್ತದೆ. ನಿರ್ವಹಣೆಯು ಸವಾಲುಗಳನ್ನು ಸ್ವೀಕರಿಸುವುದು, ಸಂಘರ್ಷಗಳನ್ನು ಧನಾತ್ಮಕವಾಗಿ ನೋಡುವುದು ಮತ್ತು ಸಮಸ್ಯೆ- ಪರಿಹರಿಸುವ ಕೌಶಲ್ಯ ಅಭಿವೃದ್ಧಿಪಡಿಸುವುದಾಗಿದೆ ಎಂದರು.ಶ್ರೀಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯರಾದ ಸ್ವಾಮಿ ಆತ್ಮಾನಂದ ಪುರಿ ಅವರು ಆಶೀರ್ವಚನ ನೀಡುತ್ತಾ, ಯಶಸ್ಸು ಎಂಬುದು ಒಂದು ಸ್ಥಿತಿಯಲ್ಲ, ಸವಾಲುಗಳನ್ನು ಎದುರಿಸುವ, ಸ್ವಾಗತಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವಾಗಿದೆ. ವಿದ್ಯಾರ್ಥಿಗಳು ಉತ್ಸಾಹ, ಪ್ರತಿಭೆ, ಸಾಮಾಜಿಕ ಅಗತ್ಯ, ಜೀವನೋಪಾಯ ಕಂಡುಕೊಳ್ಳುವ ಹಾಗೂ ಸವಾಲನ್ನು ಬೇಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.ಮತ್ತೋರ್ವ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರಿನ ಹಿರಿಯ ವಕೀಲ ಓ. ಶಾಮ ಭಟ್ ಅವರು, ವಿದ್ಯಾರ್ಥಿಗಳು ತರಗತಿಗಳನ್ನೂ ಮೀರಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಅಮೃತ ಮೈಸೂರಿನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ; ಸಂಚಾಲಕ ಮುಕ್ತಿಧಾಮೃತ ಚೈತನ್ಯ; ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು; ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್ ಹಾಗೂ ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಪಾಲ್ಗೊಂಡಿದ್ದರು.