ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ (ಕೆಆರ್‌ಎಸ್) ಬೃಂದಾವನ ಉದ್ಯಾನ ಆವರಣದಲ್ಲಿ ಸುಮಾರು 2,500 ಕೋಟಿ ರು. ವೆಚ್ಚದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್/ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಿರುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.ರಾಜ್ಯ ಸರ್ಕಾರ ಮಾ.15ರಂದು ಹೊರಡಿಸಿರುವ ಟೆಂಡರ್ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಕೆ.ಬೋರಯ್ಯ ಹಾಗೂ ಮಂಡ್ಯ ಜಿಲ್ಲೆಯ ಕೆಲ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ನೇತೃತ್ವದ ವಿಭಾಗೀಯ ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ಕರ್ನಾಟಕ ಕಾವೇರಿ ನೀರಾವರಿ ನಿಗಮ, ರಾಜ್ಯ ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಜಲಾಶಯಗಳ ಭದ್ರತಾ ಪ್ರಾಧಿಕಾರ ಸೇರಿ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯೋಜನೆಯ ಸಮಗ್ರ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ಕೆಆರ್‌ಎಸ್ ಜಲಾಯಶದ ನಾಲೆ ಪುನರುಜ್ಜೀವನ ಮಾಡಬೇಕು. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮಳವಳ್ಳಿ, ಚನ್ನಪಟ್ಟಣ, ರಾಮನಗರ ತಾಲೂಕಿನ ಹಳ್ಳಿಗಳಲ್ಲಿನ ಕೆರೆಗಳ ಹೂಳು ತೆಗೆಸಬೇಕು. ಇದರಿಂದ ರೈತರ ಕೃಷಿಗೆ ನೆರವಾಗಲಿದೆ. ಈ ಕುರಿತು ಅರ್ಜಿದಾರರು ಹಾಗೂ ರೈತರು ಕಳೆದ 20 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೋರಾಟ ಮಾಡುತ್ತಿದ್ದಾರೆ.
ಆದರೆ, ನಾಲೆಗಳ ಅಭಿವೃದ್ಧಿಗೆ ಹಾಗೂ ಕೆರೆಗಳ ಹೂಳು ತೆಗೆಯಲು ಅನುದಾನ ಬಿಡುಗಡೆ ಮಾಡದ ಸರ್ಕಾರ, ಇದೀಗ ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಮತ್ತು ಕೆಲ ರಾಜಕಾರಣಗಳ ವೈಯಕ್ತಿಕ ಹಿತಾಸಕ್ತಿಯಿಂದ ಡಿಸ್ನಿಲ್ಯಾಂಡ್ ಯೋಜನೆ ರೂಪಿಸಿದೆ. ಆದ್ದರಿಂದ ಈ ಯೋಜನೆಗೆ ಟೆಂಡರ್ ಆಹ್ವಾನಿಸಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠವನ್ನು ಕೋರಿದರು.ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಲಕ್ಷಾಂತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದರು. ತೋಟಗಾರಿಕೆ ಅಭಿವೃದ್ಧಿಗೆ ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ 198 ಎಕರೆಯಲ್ಲಿ ಬೃಂದಾವನ ಉದ್ಯಾನ ನಿರ್ಮಿಸಿದ್ದಾರೆ. ಈಗ ಕೇವಲ ಮನೋರಂಜನೆ ಮತ್ತು ಪ್ರವಾಸಿಗರ ಆಕರ್ಷಣೆಗಾಗಿ ರೂಪಿಸಿರುವ ಬೃಹತ್ ಯೋಜನೆ ಜಾರಿಯಾದರೆ ಜಲಾಶಯ ಮತ್ತು ನೀರಿನ ಮೇಲೆ ಅವಲಂಬಿತ ಕೃಷಿ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೃಂದಾವನ ಉದ್ಯಾನ ಪಾರಂಪರಿಕ ತಾಣವಾಗಿದ್ದು, ತೋಟಗಾರಿಕೆ ಹಾಗೂ ಮೀನುಗಾರಿಕೆ ಸಂಶೋಧನಾ ಕೇಂದ್ರವಿದೆ. ಹಾಗಾಗಿ, ಬೃಂದಾವನ ಉದ್ಯಾನವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಸರ್ಕಾರಕ್ಕೆ ನಿರ್ದೆಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.