ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟು ಬಳಿ ರಾಜ್ಯಸರ್ಕಾರ ನಿರ್ಮಿಸಲು ಮುಂದಾಗಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಹಾಗೂ ರೈತ ವಿರೋಧಿ ಯೋಜನೆಯಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು.ಇದರ ಜೊತೆಗೆ 100 ಕೋಟಿ ರು. ವೆಚ್ಚದಲ್ಲಿ ರೂಪಿಸಿರುವ ಕಾವೇರಿ ಆರತಿ ಯೋಜನೆ ಕೇವಲ ಹಣ ಲೂಟಿ ಹೊಡೆಯುವ ಯೋಜನೆಯಾಗಿದೆ. ಈ ಯೋಜನೆಗೆ ಖರ್ಚು ಮಾಡುವ ಹಣವನ್ನು ವಿತರಣಾ ನಾಲೆಗಳ ಅಭಿವೃದ್ಧಿಗೆ ಬಳಸಿದರೆ ಕೊನೆ ಭಾಗದ ರೈತರ ನೀರಿನ ದಾಹ ನೀಗಿಸಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ, ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಇವುಗಳು ಅಭಿವೃದ್ಧಿ ಯೋಜನೆಗಳಲ್ಲ. ಅಭಿವೃದ್ಧಿ ವಿನಾಶದ ಯೋಜನೆಗಳು. ಈ ಯೋಜನೆಗಳು ಜಿಲ್ಲೆಯ ಕೃಷಿಕರ ಬದುಕಿಗೆ ಮಾರಕವಾಗಿರುವಂತಹ ಯೋಜನೆಗಳು. ಅಚ್ಚುಕಟ್ಟುದಾರ ರೈತರು, ಗ್ರಾಮಗಳ ಪಾಲಿನ ಕರಾಳ ಯೋಜನೆಗಳು. ಇವುಗಳನ್ನು ಕೂಡಲೇ ರಾಜ್ಯಸರ್ಕಾರ ಕೈಬಿಡಬೇಕು ಎಂದು ಆಗ್ರಹಪಡಿಸಿದರು.ಅಭಿವೃದ್ಧಿ ವಿರೋಧಿ ಯೋಜನೆಗಳ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಟ, ಪ್ರತಿಭಟನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೂ ಭಂಡತನಕ್ಕೆ ಬಿದ್ದಿರುವ ರಾಜ್ಯಸರ್ಕಾರ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ತರಾತುರಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಟೀಕಿಸಿದರು.
ಅಣೆಕಟ್ಟು, ಅಣೆಕಟ್ಟು ಪ್ರದೇಶ, ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ವಯ ನಿಷೇಧಿತ ಪ್ರದೇಶವಾಗಿದೆ. ಹೈಕೋರ್ಟ್ ಈಗಾಗಲೇ ಅಣೆಕಟ್ಟೆ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಅಣೆಕಟ್ಟೆಗೆ ಧಕ್ಕೆ ತರುವಂತಹ ಯಾವುದೇ ಯೋಜನೆಗಳನ್ನು ರೂಪಿಸಬಾರದು ಎಂದು ನಿಷೇಧ ಹೇರಿದೆ. ಹಾಗಾಗಿ ಅಣೆಕಟ್ಟೆ ಬಳಿ ಪ್ರವಾಸೋದ್ಯಮ, ಜನದಟ್ಟಣೆ, ಉದ್ಯೋಗ, ವಸತಿ, ವ್ಯಾಪಾರ ಇನ್ನಿತರ ಖಾಸಗಿ ವ್ಯವಸ್ಥೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.ಕಾವೇರಿ ಆರತಿ ಯೋಜನೆಗೆ 100 ಕೋಟಿ ರು. ಹಣ ಖರ್ಚು ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಅಣೆಕಟ್ಟು ಬಳಿ ಪ್ರತಿನಿತ್ಯ 10 ಸಾವಿರ ಪ್ರವಾಸಿಗರು, 4 ಸಾವಿರ ವಾಹನಗಳಿಗೆ ಅವಕಾಶ ನೀಡುತ್ತಿರುವುದು ಅಣೆಕಟ್ಟೆಯ ಭದ್ರತೆ, ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕುಗಳ 100 ಗ್ರಾಮಗಳ ಕೃಷಿಕರ ಬದುಕು ನಾಶವಾಗಲಿದೆ ಎಂದು ಕಿಡಿಕಾರಿದರು.
ಬೃಹತ್ ಬೆಂಗಳೂರು ರೂಪಿಸಲು ಕೆಆರ್‌ಎಸ್ ಅಣೆಕಟ್ಟೆಯ ನೀರನ್ನು ಬರಿದುಗೊಳಿಸಿ ಜಿಲ್ಲೆಯನ್ನು ದಿವಾಳಿ ಮಾಡುತ್ತಿರುವ ಘೋರ ಕೃತ್ಯಗಳಾಗಿವೆ. ಈ ಯೋಜನೆಗಳು ಜಿಲ್ಲೆಯ ಜನರ ಪಾಲಿಗೆ ಮರಣದ ಯೋಜನೆಗಳಾಗಿವೆ ಎಂದು ವಿಷಾದಿಸಿದರು.ಸುದ್ಧಿಗೋಷ್ಠಿಯಲ್ಲಿ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಎಚ್.ಸಿ.ಮಂಜುನಾಥ, ಕೆ.ಎಸ್.ಸೂರ್ಯಕುಮಾರ್, ಕೆ.ನರಸಿಂಹ, ಎಂ.ವಿ.ಕೃಷ್ಣ, ಎಂ.ಕುಮಾರ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))