ಆಕಸ್ಮಿಕ ಬೆಂಕಿಗೆ ರಾಗಿ ಹುಲ್ಲಿನ ಮೆದೆ ಭಸ್ಮ

| Published : Feb 18 2025, 12:34 AM IST

ಸಾರಾಂಶ

ಭಾನುವಾರ ಮಧ್ಯಾಹ್ನ ೪ ಗಂಟೆ ಸಮಯದಲ್ಲಿ ರಾಗಿ ಸಹಿತ ಹುಲ್ಲಿನ ಮೆದೆಗೆ ಆಕಸ್ಮಿವಾಗಿ ಬೆಂಕಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪಕ್ಕದಲ್ಲೇ ಇದ್ದ ಪಂಪ್‌ಸೆಟ್‌ನಿಂದ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬಿಸಿಲಿನ ತಾಪದ ಜೊತೆಗೆ ಬೀಸಿದ ಗಾಳಿಗೆ ಬೆಂಕಿಯ ಜ್ವಾಲೆ ಹೆಚ್ಚಾಗಿ ಇಡೀ ಮೆದೆಯನ್ನು ಆವರಿಸಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಒಕ್ಕಣೆ ಮಾಡಲು ಶೇಖರಿಸಿಟ್ಟಿದ್ದ ರಾಗಿ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ೭೫ ಸಾವಿರಕ್ಕೂ ಹೆಚ್ಚು ಮೌಲ್ಯದ ರಾಗಿ ಮತ್ತು ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕರಡಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಗ್ರಾಮದ ಜವರೇಗೌಡರ ಮಗ ರಾಮೇಗೌಡ ಎಂಬ ರೈತನಿಗೆ ಸೇರಿದ ಒಕ್ಕಣೆಯಾಗದ ರಾಗಿ ಸಹಿತ ಹುಲ್ಲಿನ ಮೆದೆ ಆಕಸ್ಮಿಕ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾಗಿದೆ. ಗ್ರಾಮದ ಸ.ನಂ.೧೪ರಲ್ಲಿ ಕೃಷಿ ಜಮೀನು ಹೊಂದಿರುವ ರಾಮೇಗೌಡ ಸಾಲ ಮಾಡಿ ರಾಗಿ ಬೆಳೆ ಬೆಳೆದು ಕಟಾವು ಮಾಡಿಸಿದ್ದ ೫ ಟ್ರ್ಯಾಕ್ಟರ್‌ನಷ್ಟು ರಾಗಿ ಸಹಿತ ಹುಲ್ಲನ್ನು ಒಕ್ಕಣೆ ಮಾಡುವ ಸಲುವಾಗಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮೆದೆ ಹಾಕಿದ್ದರು.

ಭಾನುವಾರ ಮಧ್ಯಾಹ್ನ ೪ ಗಂಟೆ ಸಮಯದಲ್ಲಿ ರಾಗಿ ಸಹಿತ ಹುಲ್ಲಿನ ಮೆದೆಗೆ ಆಕಸ್ಮಿವಾಗಿ ಬೆಂಕಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪಕ್ಕದಲ್ಲೇ ಇದ್ದ ಪಂಪ್‌ಸೆಟ್‌ನಿಂದ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬಿಸಿಲಿನ ತಾಪದ ಜೊತೆಗೆ ಬೀಸಿದ ಗಾಳಿಗೆ ಬೆಂಕಿಯ ಜ್ವಾಲೆ ಹೆಚ್ಚಾಗಿ ಇಡೀ ಮೆದೆಯನ್ನು ಆವರಿಸಿತು. ನಂತರ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು.

ಬೇರೊಂದು ಸ್ಥಳದಲ್ಲಿ ಬೆಂಕಿ ನಂದಿಸಲು ಹೋಗಿದ್ದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ಬಹುತೇಕ ರಾಗಿ ಸಹಿತ ಹುಲ್ಲು ಸುಟ್ಟು ಹೋಗಿತ್ತು. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರಾದರೂ ರಾಗಿ ಮತ್ತು ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿತ್ತು.

ರೈತನ ಅಳಲು: ಇರುವ ಐದಾರು ಎಕರೆ ಜಮೀನಿನಲ್ಲಿ ರಾಗಿ ಬೆಳೆಯುವ ಸಲುವಾಗಿ ೨೦ ಸಾವಿರ ರು. ಸಾಲ ಮಾಡಿದ್ದೆ. ಬೆಳೆದಿದ್ದ ರಾಗಿ ಕಟಾವು ಮಾಡಿಸಿ ಮೆದೆ ಹಾಕಿಸಲು ೧೫ ಸಾವಿರಕ್ಕೂ ಹೆಚ್ಚು ಸಾಲ ಮಾಡಿದ್ದೆ. ಶಿವರಾತ್ರಿ ಹಬ್ಬದ ನಂತರ ಒಕ್ಕಣೆ ಮಾಡಲು ಕಣದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆದರೆ ಭಾನುವಾರ ಸಂಜೆ ರಾಗಿ ಸಹಿತ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿರುವುದರಿಂದ ವರ್ಷ ಪೂರ್ತಿ ನಮ್ಮ ಜಾನುವಾರುಗಳ ಮೇವಿಗೆ ತೊಂದರೆಯಾಗಿದೆ. ರಾಗಿ ಬೆಳೆಯಲು ಮಾಡಿರುವ ಸಾಲವನ್ನು ತೀರಿಸುವುದಾದರೂ ಹೇಗೆಂಬ ಆತಂಕ ಶುರುವಾಗಿದೆ ಎಂದು ರೈತ ರಾಮೇಗೌಡ ಕಣ್ಣೀರು ಹಾಕಿದರು.

ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್, ಅಧಿಕಾರಿಗಳಾದ ಆರ್.ಚಂದ್ರಶೇಖರ್, ಡಿ.ಎನ್.ಗಂಗಾಧರಯ್ಯ, ಚಾಲಕ ಪ್ರಭುಲಿಂಗ ಮುದುಕಪ್ಪ ಜೋಗಿ, ಅಗ್ನಿಶಾಮಕದಳದವರಾದ ಗೊಡಚಪ್ಪ ಜಾಡಗೌಡರ್, ಎನ್.ಬಿ.ರಾಹುಲ್ ಮತ್ತು ಜಿ.ಗೋಪಾಲಗೌಡ ಅವರು ಸ್ಥಳೀಯರ ನೆರವಿನೊಂದಿಗೆ ಒಂದೂವರೆ ಗಂಟೆ ಕಾಲ ಬೆಂಕಿಯನ್ನು ನಂದಿಸುವ ಮೂಲಕ ಪಕ್ಕದಲ್ಲೇ ಇದ್ದ ಎರಡು ಹುಲ್ಲಿನ ಮೆದೆಗಳನ್ನು ರಕ್ಷಣೆ ಮಾಡಿದರು.