ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಿಮ್ಸ್ ಆಸ್ಪತ್ರೆ ನಿರ್ವಹಣೆಗೆ ವಾರ್ಷಿಕ ₹24 ಕೋಟಿ ಹೊರತಾಗಿಯೂ ಹೆಚ್ಚುವರಿಯಾಗಿ ₹30 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಈ ಭಾಗದ ಜನರಿಗೆ ಸಂಜೀವಿನಿಯಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬೆಂಗಳೂರು ಹಾಗೂ ಮೈಸೂರು ಭಾಗದ ಆಸ್ಪತ್ರೆಗಳಿಗೆ ನೀಡುವ ಅನುದಾನದಂತೆ ಕಿಮ್ಸ್ ಆಸ್ಪತ್ರೆ ನಿರ್ವಹಣೆಗೆ ವಾರ್ಷಿಕವಾಗಿ ₹24 ಕೋಟಿ ಹೊರತಾಗಿ ಹೆಚ್ಚುವರಿಯಾಗಿ ₹30 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುವುದು ಅವಶ್ಯಕವಾಗಿದೆ ಎಂದರು.
ಆಸ್ಪತೆಗೆ ಬರುವ ರೋಗಿಗಳಿಗಾಗಿ ಆನ್‌ಲೈನ್ ಮೂಲಕ ಒಪಿಡಿ ನೋಂದಣಿ ಆರಂಭಿಸಲಾಗಿದೆ. ತುರ್ತು ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಕಿಡ್ನಿ ಕಸಿ, ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆ ಮಾಡಲಾಗುತ್ತದೆ. ಅಲ್ಲದೇ ಪ್ಯಾರಾ ಮೆಡಿಕಲ್ ಕೋರ್ಸ್ ಕೂಡ ಆರಂಭಿಸಲಾಗಿದ್ದು, ಪ್ಯಾರಾ ಮೆಡಿಕಲ್ ಕಾಲೇಜು ಆರಂಭಿಸುವ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಶೌಚಾಲಯ, ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಹೀಗಾಗಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಸ್ಪತ್ರೆಗೆ ಅವಶ್ಯಕವಾಗಿರುವ ವಿದ್ಯುತ್‌ನ್ನು ಹೆಸ್ಕಾಂ ಒದಗಿಸುತ್ತಿದೆ. ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಯಶಸ್ವಿನಿ, ಆರೋಗ್ಯ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಆಸ್ಪತ್ರೆ ಹಾಗೂ ಕಾಲೇಜಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಕಾಲಕಾಲಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಸ್ಪತ್ರೆ ಒಳಗಡೆ ಕ್ಯಾಂಟೀನ್ ಆರಂಭಿಸುವ ಕುರಿತು ಹಲವಾರು ಜನರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಈಗಾಗಲೇ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಡಯಟ್, ಶುಭ್ರವಾದ ಬಟ್ಟೆಗಳು, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಇನ್ಫೋಸಿಸ್ ಧರ್ಮಶಾಲಾ ಸೇವೆ ಸೇರಿದಂತೆ ಕಾರ್ಯಗಳು ನಡೆಯುತ್ತಿವೆ ಎಂದರು.ವಿವಿಧ ಅಭಿವೃದ್ಧಿ ಕಾರ್ಯಗಳು:
₹ 5 ಕೋಟಿ ವೆಚ್ಚದಲ್ಲಿ ಸಭಾಂಗಣ ನವೀಕರಣ, ₹23 ಕೋಟಿ ವೆಚ್ಚದಲ್ಲಿ 2 ಹೊಸ ಪದವಿಪೂರ್ವ ವಸತಿ ನಿಲಯಗಳ ನಿರ್ಮಾಣ, ಎನ್‌ಇಎಲ್‌ಎಸ್ ಸ್ಕಿಲ್ ಲ್ಯಾಬ್, ತುರ್ತು ಚಿಕಿತ್ಸಾ ಘಟಕ ಆರಂಭ, ಹು-ಧಾ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರೋಟರಿ ಸಹಾಯಧನದಿಂದ ಕಿಮ್ಸ್ ಮುಂಭಾಗ ಮತ್ತು ಹಿಂಭಾಗ ದ್ವಾರ ಬಾಗಿಲುಗಳ ನವೀಕರಣ, 2ನೇ ಕ್ಯಾಥ್ ಲ್ಯಾಬ್ ಸ್ಥಾಪನೆ, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆ ಸೂಪರ್ ಸ್ಪೆಷಾಲಿಟಿ ಕಟ್ಟಡ ಆರಂಭ, ಹೊಸ ಎಂಸಿಎಚ್ ಮತ್ತು ಕಾರ್ಡಿಯಾಲಜಿ ಬ್ಲಾಕ್ ಸ್ಥಾಪನೆ, 18 ಶವ ಇಡುವ ಹೊಸ ಶವಾಗಾರ ಕಟ್ಟಡ, ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ, ಆಸ್ಪತ್ರೆಯನ್ನು 2404 ಬೆಡ್‌ಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದೆ.ಆಸ್ಪತ್ರೆ ಹಾಗೂ ಕಾಲೇಜ್ ಕಟ್ಟಡ ನವೀಕರಣ, ಕ್ರೀಡಾಂಗಣ ಕಾಮಗಾರಿ, ಮುಖ್ಯ ಸಭಾಂಗಣ ಆರಂಭ, ಮುಖ್ಯ ಔಷಧಿ ಸಂಗ್ರಹಗಾರ ಕಟ್ಟಡ ನವೀಕರಣ, ಹಳೆಯ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ನವೀಕರಣ ಟೆಂಡರ್, ಒಂದು ತಿಂಗಳಲ್ಲಿ ಟೆಸ್ಲಾ ಎಂಆರ್‌ಐ ಸ್ಕ್ಯಾನ್ ಯಂತ್ರ ಅಳವಡಿಕೆ ಕಾಮಗಾರಿ ಮುಕ್ತಾಯವಾಗಲಿದೆ. ಹೊಸ ಸಿಎಸ್‌ಎಸ್‌ಡಿ ಹಾಗೂ ನೃಪತುಂಗ ಮತ್ತು ಚಾಲುಕ್ಯ ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕರು ಮಾಹಿತಿ ನೀಡಿದರು.
ನೆಫ್ರೊಲಜಿ ವಿಭಾಗದ ಡಾ. ಎಂ.ಆರ್. ಪಾಟೀಲ ಮಾತನಾಡಿ, ಈಗಾಗಲೇ ಹಲವಾರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಬೇರೆ ರಕ್ತದ ಗುಂಪಿನವರಿಗೂ ಸಹ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದರು.ಕಿಮ್ಸ್‌ನ ಸಹ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಡಾ. ಉದಯಕುಮಾರ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಸಿದ್ಧೇಶ್ವರ ಕಟಕೋಳ, ಡಾ. ಕಟ್ಟಿಮನಿ, ಡಾ. ಮಹೇಶಕುಮಾರ, ರವಿ ಜೋಶಿ ಸೇರಿದಂತೆ ಹಲವರಿದ್ದರು.
;Resize=(128,128))
;Resize=(128,128))
;Resize=(128,128))