ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಿದ್ದರಾಮಯ್ಯ ಅವರ ತೆರವಿನಿಂದ ಅಹಿಂದ ಸಮಾಜಕ್ಕೆ ಆಗಿರುವ ನಷ್ಟ ಭರ್ತಿ ಮಾಡಲು ಪರ್ಯಾಯ ಅವಕಾಶಗಳ ಸೃಷ್ಟಿ ಮಾಡಬೇಕೆಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಿದ್ದಾರೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಕೇವಲ ಕುರುಬರಿಗಷ್ಟೆ ಅಲ್ಲ. ಇಡೀ ಅಹಿಂದ ವರ್ಗಕ್ಕೆ ನೋವುಂಟಾಗಿದೆ. ಅಹಿಂದ ವರ್ಗಕ್ಕೆ ಆಗಿರುವ ಅನ್ಯಾಯವ ಸರಿಪಡಿಸಬೇಕು ಎಂದು ಹೇಳಿದರು.
ಕುರಿ ಕಾಯುತ್ತಿದ್ದ ಹುಡುಗ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬೆಳೆದಿದ್ದಾರೆಂದರೆ ಕಡಿಮೆ ಸಾಧನೆಯಲ್ಲ. ಅಹಿಂದ ಸಂಘಟಕ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದಾಗ ವರಿಷ್ಟರು ಸ್ವಾಗತಿಸಿ ಎರಡು ಬಾರಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಎರಡನೆ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಬಡವರು, ದೀನ ದಲಿತರು, ಶೋಷಿತರು, ಧ್ವನಿಯಿಲ್ಲದವರಿಗೆ ಶಕ್ತಿ ತುಂಬಿದರು. ವರಿಷ್ಟರ ಸೂಚನೆಯಂತೆ ರಾಜಿನಾಮೆ ನೀಡಿರುವುದು ನಮಗೆಲ್ಲಾ ನೋವಾಗಿದ್ದರು. ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನಾವುಗಳು ಸ್ವಾಗತಿಸುತ್ತೇವೆಂದು ತಿಳಿಸಿದರು.ರಾಜ್ಯದಲ್ಲಿ ಕುರುಬ ಸಮುದಾಯ ಮೂರನೆ ಅತಿ ದೊಡ್ಡ ಸಂಖ್ಯೆಯಲ್ಲಿದೆ. ಜೆಡಿಎಸ್‌ನಲ್ಲಿ ನಮಗೆ ಅವಕಾಶ ಕಡಿಮೆಯಿದೆ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಜೊತೆಗೆ ರಾಜ್ಯದಲ್ಲಿ ಎರಡನೇ ಅವಧಿಯ ನಿಗಮ ಮಂಡಳಿಗಳ ನೇಮಕದಲ್ಲಿ ನಮ್ಮ ಜನಾಂಗಕ್ಕೆ ಒತ್ತು ಕೊಡಬೇಕು. ನಾಲ್ಕು ಬಾರಿ ಶಾಸಕರಾಗಿರುವ ಬಿ.ಜಿ.ಗೋವಿಂದಪ್ಪನವರನ್ನು ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯನ್ನಾಗಿ ಮಾಡಬೇಕು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರಿಗೂ ಸಚಿವ ಸ್ಥಾನ ಕೊಡಬೇಕೆಂದು ವರಿಷ್ಟರನ್ನು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ರವರ ಮಂತ್ರಿ ಮಂಡಲದಲ್ಲಿ ಕುರುಬರಿಗೆ ಐದು ಸಚಿವ ಸ್ಥಾನ ಸಿಗಬೇಕು. ಏಳು ವಿಧಾನ ಪರಿಷತ್ ಸ್ಥಾನ ಖಾಲಿಯಾಗುತ್ತಿದೆ. ರಾಜ್ಯಸಭೆಗೂ ನಡೆಯುವ ಚುನಾವಣೆಯಲ್ಲಿ ಕುರುಬರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು. ಈ ಸಂಬಂಧ ಬಿಜೆಪಿ ಜೆಡಿಎಸ್ ನವವರಲ್ಲಿಯೂ ನಾವು ಮನವಿ ಮಾಡುತ್ತೇವೆ. ಪ್ರಸ್ತುತ ನಡೆಸಿರುವ ಜನಸಂಖ್ಯೆ ಸಮೀಕ್ಷೆ ವರದಿಯ ಸಿದ್ದರಾಮಯ್ಯನವರು ಸ್ವೀಕಾರ ಮಾಡಿರುವುದನ್ನು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅಂಗೀಕರಿಸಿ ಯಥಾವತ್ತಾಗಿ ಜಾರಿಗೊಳಿಸಬೇಕು. ಇದರಿಂದ ಹಿಂದುಳಿದ 104 ಜಾತಿಗಳಿಗೆ ಅನುಕೂಲವಾಗಲಿದೆ ಎಂದು ಬಿ.ಟಿ.ಜಗದೀಶ್ ಹೇಳಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ ಮಾತನಾಡಿ, ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಓಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು. ತಳಮಟ್ಟದ ಕುರುಬ ಜನಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಸ್ಥಾನಮಾನ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಚೆಕ್‍ಡ್ಯಾಂಗಳ ರಾಜ ಎಂದೆ ಪ್ರಸಿದ್ಧಿಯಾಗಿರುವ ಹೊಸದುರ್ಗದ ಹಿರಿಯ ಶಾಸಕ ಬಿ.ಜಿ.ಗೋವಿಂದಪ್ಪನವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ಕೊಡಬೇಕು. ನಾಲ್ಕು ಬಾರಿ ಶಾಸಕರಾಗಿರುವ ಇವರಿಗೆ ರಾಜಕಾರಣದಲ್ಲಿ ಅಪಾರ ಅನುಭವವಿದೆ. ಹಾಗಾಗಿ ಪರಿಗಣನೆಗೆ ತೆಗೆದುಕೊಂಡು ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.ಮುತ್ತು, ಮಾಳೇಶ್, ಉಮೇಶ್, ಕುರುಬರ ಸಂಘದ ನಿರ್ದೇಶಕ ಹೊಸದುರ್ಗದ ಲಿಂಗಮೂರ್ತಿ, ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.