ವ್ಯಕ್ತಿಗಳ ನಡುವಿನ ವಾಗ್ವಾದ ಓರ್ವನ ಕೊಲೆಯಲ್ಲಿ ಅಂತ್ಯ

| Published : Apr 06 2025, 01:49 AM IST

ಸಾರಾಂಶ

ಕೊಲೆಯಾದ ಲಕ್ಕಪ್ಪ ಮತ್ತು ಸಂಗಡಿಗರು ದೊಡ್ಡನುಕಟ್ಟೆ ಗ್ರಾಮದ ತಮ್ಮ ಮನೆಯ ಮುಂದೆ ಚೌಕಾಬಾರ ಆಡುತ್ತಿದ್ದ ಸಮಯದಲ್ಲಿ ಇದೇ ಗ್ರಾಮದ ಬಸವರಾಜು ಎಂಬಾತನು ನೀವು ಜೂಜಾಟ ಆಡುತ್ತಿದ್ದೀರಿ, ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ ನಡೆದ ವಾಗ್ವಾದದಲ್ಲಿ ಬಸವರಾಜ ಮತ್ತು ನಂಜುಂಡ ಎಂಬುವವರು ಲಕ್ಕಪ್ಪ ಮತ್ತು ಸಂಗಡಿಗರಿಗೆ ಚಾಕುವಿನಿಂದ ಇರಿದಿದ್ದಾರೆ.

ಅರಸೀಕೆರೆ: ಮನೆ ಮುಂಭಾಗದಲ್ಲಿ ಚೌಕಾಬಾರ ಆಡುತ್ತಿದ್ದ ಸಮಯದಲ್ಲಿ ನಡೆದ ವಾಗ್ವಾದವು ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾದರೆ ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಬಾಣಾವರದ ಸಮೀಪದ ದೊಡ್ಡನುಕಟ್ಟೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಲಕ್ಕಪ್ಪ (48) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಕೊಲೆಯಾದ ಲಕ್ಕಪ್ಪ ಮತ್ತು ಸಂಗಡಿಗರು ದೊಡ್ಡನುಕಟ್ಟೆ ಗ್ರಾಮದ ತಮ್ಮ ಮನೆಯ ಮುಂದೆ ಚೌಕಾಬಾರ ಆಡುತ್ತಿದ್ದ ಸಮಯದಲ್ಲಿ ಇದೇ ಗ್ರಾಮದ ಬಸವರಾಜು ಎಂಬಾತನು ನೀವು ಜೂಜಾಟ ಆಡುತ್ತಿದ್ದೀರಿ, ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ ನಡೆದ ವಾಗ್ವಾದದಲ್ಲಿ ಬಸವರಾಜ ಮತ್ತು ನಂಜುಂಡ ಎಂಬುವವರು ಲಕ್ಕಪ್ಪ ಮತ್ತು ಸಂಗಡಿಗರಿಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಲಕ್ಕಪ್ಪನನ್ನು ಪಂಚೇನಳ್ಳಿಯ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೇ ಲಕ್ಕಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಾಯಗೊಂಡಿದ್ದ ಶಶಿಧರ್ ಮತ್ತು ವಸಂತ್ ಕುಮಾರ್ ಅವರಿಗೆ ಅರಸೀಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಂತರ ಲಕ್ಕಪ್ಪನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಹಿಂದೆ ಲಕ್ಕಪ್ಪನ ಬಳಿ ಕೆಲಸ ಮಾಡುತ್ತಿದ್ದ ಬಸವರಾಜನು ತನ್ನನ್ನು ಕೆಲಸದಿಂದ ಬಿಡಿಸಿದ ವೈಷಮ್ಯ ಮನಸ್ಸಲ್ಲಿಟ್ಟುಕೊಂಡು ಲಕ್ಕಪ್ಪನನ್ನು ನಂಜುಂಡ ಎಂಬಾತನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂಬ ದೂರಿನ ಆಧಾರದ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ನಾಯ್ಡು, ಡಿವೈಎಸ್ಪಿ ಲೋಕೇಶ್, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರಾದ ಅರುಣ್ ಕುಮಾರ್ ಹಾಗೂ ಬಾಣಾವರ ಠಾಣೆಯ ಪಿಎಸ್ಐ ಸುರೇಶ್ ನೇತೃತ್ವದ ತಂಡವು ಆರೋಪಿಗಳನ್ನು ಸೆರೆಹಿಡಿದು ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣವು ಬಾಣಾವರ ಠಾಣೆಯಲ್ಲಿ ದಾಖಲಾಗಿದೆ.