ಸಾರಾಂಶ
ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್‌ರಾವ್ ಜಯಂತ್ಯುತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಟ್ಟೂರುಸರ್ವರಿಗೂ ಸಮಾನತೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಾವಣೆ ಮಾಡುವ ಸಂಚು ನಡೆಯುತ್ತಿದೆ. ಇಂತಹ ಮನಸ್ಥಿತಿಯವರು ಇದೀಗ ಗಾಂಧಿ ಹೆಸರು ಅಳಿಸುವ ಮತ್ತು ಮನು ಸಂಸ್ಕೃತಿ ಹೇರುವ ದುಸ್ಸಾಹಸ ಮಾಡುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಾಗಿರಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಕೊಟ್ಟೂರು ತಾಲೂಕು ಆಡಳಿತ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ಮತ್ತು ಡಾ.ಬಾಬು ಜಗಜೀವನ್‌ರಾವ್ 118ನೇ ಜಯಂತ್ಯುತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.124 ಸಂವಿಧಾನವನ್ನು ಅಧ್ಯಯನ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ಮೆಚ್ಚುವ ಸಂವಿಧಾನ ರಚಿಸಿದ್ದಾರೆ. ದಲಿತರ ನೆರಳು ಕಂಡರೆ ಆಗದ ದಿನಗಳಿಂದ ತುಳಿತಕ್ಕೊಳಗಾದ ಸರ್ವರನ್ನು ಮೇಲೆತ್ತುವ ಸದುದ್ದೇಶದಿಂದ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿ ಪ್ರತಿಯೊಬ್ಬರ ಬದುಕಿನಲ್ಲಿ ಮಹಾಬೆಳಕು ನೀಡಿರುವ ಮಹಾತ್ಮರು ಎಂದು ಬಣ್ಣಿಸಿದರು.
ದಾರಿದ್ರ್ಯ ಸ್ಥಿತಿಯಲ್ಲಿದ್ದ ಸಮಾಜದ ಪರಿವರ್ತನೆ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ಅಪಾಯದ ಸೂತ್ರ ಹೆಣೆದಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಸಂವಿಧಾನವಿಲ್ಲದಿದ್ದರೆ ಯಾವುದೇ ನಾಯಕ ಉನ್ನತ ಹುದ್ದೆಯನ್ನು ಹೊಂದಲಾರ ಎಂದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮರಿಸ್ವಾಮಿ, ಶಿಕ್ಷಕ ತೆಗ್ಗಿನಕೇರಿ ಕೊಟ್ರೇಶ್, ಮುಖಂಡ ರಾಮು, ತಾಪಂ ಇಒ ಡಾ. ಆನಂದಕುಮಾರ್, ತಹಶೀಲ್ದಾರ್ ಅಮರೇಶ್ ಜಿ.ಕೆ., ಸನ್ಮಾನಿತಗೊಂಡ ತೂಲಹಳ್ಳಿ ಜಯಪ್ರಕಾಶ ಮಾತನಾಡಿದರು.
ಪಪಂ ಅಧ್ಯಕ್ಷೆ ರೇಖಾ ಬದ್ದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಿ.ಸಿದ್ದಯ್ಯ, ಸದಸ್ಯರಾದ ವೀಣಾ ವಿವೇಕಾನಂದಗೌಡ, ಜಗದೀಶ್, ಎಂ.ಸಿ. ಕೆಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ, ಪಿ.ಎಸ್.ಐ. ಗೀತಾಂಜಲಿ ಸಿಂಧೆ, ನೂರುಲ್ಲಾ ಖಾನ್, ಪರಶುರಾಮ, ಎನ್.ಭರಮಣ್ಣ ಇತರರಿದ್ದರು. ಮಧು ಸ್ವಾಗತಿಸಿ, ಸಿ.ಮ.ಗುರುಬಸವರಾಜ ನಿರೂಪಿಸಿದರು.