ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು, ಸನ್ಮಾರ್ಗ, ಸಮೃದ್ಧಿಯ ಕಾರ್ಯದಲ್ಲಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕು. ತನ್ಮೂಲಕ ಸಮಾಜ ಗಟ್ಟಿಯಾಗಿ ನಿಲ್ಲುವಂತೆ ಮಾಡಿ, ನಮ್ಮ ಮಾನವ ಸಂಪನ್ಮೂಲದ ಸದ್ಬಳಕೆಯಿಂದ ದೇಶದ ಹಿತರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು. ಎಲ್ಲ ಭೇದ ಮರೆತು, ಸಮಾಜ ಒಗ್ಗಟ್ಟಿನಿಂದ ಸಮೃದ್ಧಿಯಾಗಿ ಬೆಳೆಯಬೇಕು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ. ನಮ್ಮಲ್ಲಿ ಭಿನ್ನತೆ ಸೃಷ್ಟಿಸಲು ಧರ್ಮದಿಂದ ಹೊರತಾಗಿ ರಾಜಕೀಯವಾಗಿ ಮಾಡಲಾಗುತ್ತಿದ್ದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲರೂ ಒಂದಾಗಿ ನಡೆಯಬೇಕು. ಸಹಾಯ ಮಾಡಲು ಆಗದೇ ಇದ್ದರೆ ಸುಮ್ಮನಿರಿ. ಆದರೆ ಕಾಲೆಳೆಯುವ ಕೆಲಸ ಮಾಡಬೇಡಿ. ದ್ವೇಷ, ಅಸೂಯೆಯಿಂದ ಸಮಾಜದ ಉನ್ನತಿಗೆ ಧಕ್ಕೆ ಬರುತ್ತದೆ. ಲಿಂಗಾಯತರಲ್ಲಿ ಮೇಲು-ಕೀಳು ಇಲ್ಲ. ಜಾಗ್ರತವಾಗಿ ಸಮಾಜ ಒಗ್ಗೂಡಿಸುವ ಪ್ರಯತ್ನ ಆಗಬೇಕು. ನಾವು ಒಗ್ಗಟ್ಟಾಗಬೇಕಾಗಿರುವುದು ನಮ್ಮ ಉದ್ಧಾರಕ್ಕೇ ಹೊರತು, ಬೇರೆ ಸಮಾಜದ ಮೇಲೆ ದುರಾಗ್ರಹ ಹೊಂದಲು ಅಲ್ಲ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಜಿಲ್ಲಾ ಪದಾಧಿಕಾರಿಗೆ ಸೇವಾದೀಕ್ಷೆ ಬೋಧಿಸಿದರು. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಪಾಟೀಲ್, ರಾಜ್ಯ ಉಪಾಧ್ಯಕ್ಷ ಗುರಪ್ಪ ಮೆಟಗುಡ್ಡ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವೀರಶೈವ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ವಿ.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಮ್ಮ ಸಮಾಜದ ಅಭಿವೃದ್ಧಿ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನಮ್ಮ ಸಹಕಾರ ನೀಡಿದಂತಾಗುತ್ತದೆ. ನಾವು ನಮ್ಮ ಅಭಿವೃದ್ಧಿ ಮಾಡಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಅದನ್ನು ನಾವೆಲ್ಲ ಸೇರಿ ಮಾಡಬೇಕಾಗಿದೆ ಎಂದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಬಾಂಧವರನ್ನು ಒಟ್ಟುಗೂಡಿಸುವ ಸಲುವಾಗಿಯೇ ಸಂಘಟನೆ ಅಗತ್ಯವಾಗಿದೆ. ಅದನ್ನು ಬಲಗೊಳಿಸುವ ಕಾರ್ಯ ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶಕುಮಾರ ದಾವಣಗೆರೆ ಸ್ವಾಗತಿಸಿದರು. ಮಂಜುನಾಥ ಹಿರೇಮಠ, ಚೇತನಾ ಗೌಡರ್ ಕಾರ್ಯಕ್ರಮ ನಿರೂಪಿಸಿದರು.