ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡಲು ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರಲು ಹಲವು ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿವೆ ಎಂದು ಧರ್ಮಸ್ಥಳ ಕ್ಷೇತ್ರದ ಭಕ್ತರು ಕೊರಟಗೆರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಹಾಗೂ ಭಕ್ತವೃಂದ ಭಾಗವಹಿಸಿ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಧರ್ಮಸ್ಥಳದ ಪರ ನಾವಿದ್ದೇವೆ, ಹೆಗ್ಗಡೆಯವರ ಪರ ಹೋರಾಡುತ್ತೇವೆ ಎಂದು ಘೋಷಣೆ ಕೂಗಿದರು.
ಅಖಿಲ ಭಾರತ ವೀರಶೈವ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ಮಮತಾ ದಿವಾಕರ್ ಮಾತನಾಡಿ, ಈ ರಾಜ್ಯದಲ್ಲಿ ಮೂಲಭೂತವಾದಿಗಳು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಹಾಳು ಮಾಡುವ ಉದ್ದೇಶದಿಂದ ಹೊರಗಿನ ಶಕ್ತಿಗಳೊಂದಿಗೆ ಕೈ ಜೋಡಿಸಿ, ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ, ಸಮಾಜ ಘಾತುಕ ಶಕ್ತಿಗಳಾದ ಮಹೇಶ್‌ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎನ್ನುವ ಹಿಂದೂ ಧರ್ಮದ ವಿರೋಧಿಯು ಯೂ ಟ್ಯೂಬ್ ಮುಂದಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.ಹಿಂದುಳಿದ ವರ್ಗಗಳ ಮುಖಂಡ ಎಸ್. ಪವನ್ ಕುಮಾರ್ ಮಾತನಾಡಿ, ಈ ದೇಶದಲ್ಲಿ ಪದೇ- ಪದೇ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಹೊರಗಿನ, ಅನ್ಯ ಧರ್ಮದ ಶಕ್ತಿಗಳು, ಒಳಗಿನ ಕೆಲವು ಧರ್ಮ ವೀರೋಧಿ ಕುಯುಕ್ತಿಗಳ ಜೊತೆಗೂಡಿ ಹಣದ ಪ್ರಭಾವ ಬಳಸಿ ಕ್ಷೇತ್ರದ ಮಹಿಮೆ ಹಾಳು ಮಾಡುವ ಕೆಲಸಗಳಲ್ಲಿ ತೊಡಗಿವೆ, ಇವುಗಳನ್ನು ಹಿಂದೂಗಳು ಒಟ್ಟಾಗಿ ಮೆಟ್ಟಿ ನಿಲ್ಲಬೇಕು, ಧರ್ಮಸ್ಥಳದ ಪರ ನಾವೀದ್ದೇವೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಸಂಘದ ಜಿಲ್ಲಾ ಯುವ ಅಧ್ಯಕ್ಷ ದರ್ಶನ್ ಮಾತನಾಡಿ, ಈ ಪ್ರತಿಭಟನೆಯಲ್ಲಿ ಧರ್ಮವನ್ನು ಉಳಿಸಲು ಧರ್ಮಸೈನ್ಯ ಹೊರಟಿದೆ, ಸತ್ಯವನ್ನು ಹೇಳಿ ಧರ್ಮವನ್ನು ಉಳಿಸು ಎನ್ನುವ ಶ್ಲೋಕದಂತೆ ಇಂದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳು ಆ ಸ್ಥಳದ ಮಹಿಮೆಯನ್ನು ಹಾಗೂ ಕುತಂತ್ರಿಗಳ ಕುಯುಕ್ತಿಯನ್ನು ತೋರಿಸುತ್ತಿವೆ, ಇದು ಹೀಗೆ ಮುಂದುವರಿದರೆ ಉಗ್ರ ಹೋರಾಟಕ್ಕೆ ಭಕ್ತರು ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಎಲ್.ರಾಜಣ್ಣ ಮಾತನಾಡಿ, ನಾವು ಧರ್ಮವನ್ನು ಉಳಿಸಬೇಕಾಗಿದೆ, ಧರ್ಮಸ್ಥಳಕ್ಕೆ ಕೆಲವು ಕಿಡಿಗೇಡಿಗಳು ಹಚ್ಚುತಿರುವ ಕಳಂಕ ತೊಳೆಯಬೇಕಿದೆ. ಅದಕ್ಕಾಗಿ ಧರ್ಮ ಉಳಿಸಿ, ಧರ್ಮಸ್ಥಳವನ್ನು ಉಳಿಸಿ ಎನ್ನುವ ಹೋರಾಟಕ್ಕೆ ಕೊರಟಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಪ್ರದೀಪ್ ಕುಮಾರ್, ಮಾಜಿ ಸದಸ್ಯರಾದ ಕೋಟೆ ರಂಗನಾಥ್, ಸುಶೀಲಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ನಾಗರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಮುಖಂಡರಾದ ಆರ್.ಎಸ್.ರಾಜಣ್ಣ, ಗುರುಪ್ರಸಾದ್, ಚಿಕ್ಕರಂಗಯ್ಯ, ರಾಜೇಶ್ವರಿ, ಶೀತಲ್, ವಿಜಯ್‌ಕುಮಾರ್, ದಿನೇಶ್, ಸಿದ್ದರಾಜು ಸೇರಿ ಇನ್ನಿತರರು ಭಾಗವಹಿಸಿದ್ದರು.