ನಾಗರಿಕರ ಗಮನ ಸೆಳೆದ ಜಾಗೃತಿ ಪ್ರದರ್ಶನ

| Published : Feb 01 2025, 12:46 AM IST

ಸಾರಾಂಶ

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸರು ಹಮ್ಮಿಕೊಂಡಿರುವ ‘ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ – 2025’ ವಿನೂತನ ಕಾರ್ಯಕ್ರಮ ನಾಗರಿಕರ ಗಮನ ಸೆಳೆಯಿತು.

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸರು ಹಮ್ಮಿಕೊಂಡಿರುವ ‘ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ – 2025’ ವಿನೂತನ ಕಾರ್ಯಕ್ರಮ ನಾಗರಿಕರ ಗಮನ ಸೆಳೆಯಿತು.

ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಪೊಲೀಸ್ ಇಲಾಖೆ ಗೆಸ್ಟ್‌ಹೌಸ್ ಆವರಣದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಪ್ರದರ್ಶನದಲ್ಲಿ ಸರ್ವೇ ಸಾಮಾನ್ಯವಾಗಿ ಪೊಲೀಸ್ ಇಲಾಖೆಯು ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಜನಜಾಗೃತಿ ಮೂಡಿಸಲು ಸಭೆ – ಸಮಾರಂಭ ಆಯೋಜನೆ, ರಸ್ತೆ-ಸರ್ಕಲ್‌ಗಳಲ್ಲಿ ಎಚ್ಚರಿಕೆಯ ಬರಹ ಬರೆಯಿಸುವುದು ಸೇರಿದಂತೆ ನಾನಾ ಜನಜಾಗೃತಿ ಕಾರ್ಯಕ್ರಮ ನಡೆಸುತ್ತದೆ.ಆದರೆ, ಶಿವಮೊಗ್ಗದ ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು, ಈ ಬಗ್ಗೆ ವಸ್ತು ಪ್ರದರ್ಶನ ಮಾದರಿಯ ವ್ಯವಸ್ಥೆಯನ್ನೇ ಮಾಡಿದ್ದಾರೆ. 16 ಕೌಂಟರ್‌ಗಳನ್ನು ತೆರೆದಿದ್ದಾರೆ. ಪ್ರತಿಯೊಂದು ಕೌಂಟರ್‌ನಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಸಂಬಂಧಿಸಿದ ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದಾರೆ.

ಅಪಘಾತಕ್ಕೀಡಾದ ಬೈಕ್ ಸೇರಿದಂತೆ ಕೆಲ ವಾಹನಗಳನ್ನು ಕೂಡ ಪ್ರದರ್ಶನದಲ್ಲಿಟ್ಟಿದ್ದಾರೆ. ಯಾವ ಕಾರಣದಿಂದ ಅಪಘಾತವಾಗಲು ಕಾರಣವಾಗಿದೆ ಎಂಬ ವಿವರಗಳನ್ನು ಕೂಡ ಹಾಕಿದ್ದಾರೆ. ಅಪಘಾತ ಸಂಭವಿಸದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು, ಅಪಘಾತವಾದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಿದ್ದಾರೆ.

ಸುಗಮ ವಾಹನ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಬಳಕೆ ಮಾಡುವ ವಿವಿಧ ವಸ್ತುಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಪ್ರಮಾಣವೆಷ್ಟು, ಯಾವ್ಯಾವ ಉಲ್ಲಂಘನೆಗೆ ಎಷ್ಟೆಷ್ಟು ದಂಡ ವಿಧಿಸಲಾಗುತ್ತದೆ ಎಂಬಿತ್ಯಾದಿ ವಿವರಗಳನ್ನು ಪ್ರದರ್ಶನದಲ್ಲಿ ನಾಗರಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ ಸುರಕ್ಷಿತ ಹೆಲ್ಮೆಟ್ ಪ್ರದರ್ಶನ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೌಂಟರ್, ಆಟ್‌ಟಿಒ ಇಲಾಖೆ ಕೌಂಟರ್, ಮಾದಕ ವಸ್ತು – ಸೈಬರ್ ಅಪರಾಧಗಳ ತಡೆ ಸೇರಿದಂತೆ ವಿವಿಧ ಕೌಂಟರ್‌ಗಳನ್ನು ಕೂಡ ತೆರೆಯಲಾಗಿದೆ. ಉಳಿದಂತೆ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡುವುದರಿಂದ ಉಂಟಾಗುವ ಪರಿಣಾಮ, ಪ್ರಥಮ ಚಿಕಿತ್ಸೆ, ಸ್ಮಾರ್ಟ್ ಸಿಟಿ ಕ್ಯಾಮರಾಗಳ ಕಾರ್ಯನಿರ್ವಹಣೆ ಮತ್ತು ದಂಡ ವಿಧಿಸುವಿಕೆ ಕಾರ್ಯವಿಧಾನ, ಡ್ರಂಕ್ ಅಂಡ್ ಡ್ರೈವ್, ವಾಹನ ವಿಮೆ, ವಾಹನಗಳ ದಾಖಲಾತಿ, ಸಿಗ್ನಲ್‌ಗಳ ಬಗ್ಗೆ ಮಾಹಿತಿ ಸೇರಿದಂತೆ ಸಂಚಾರಿ ನಿಯಮಗಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನಾಗರಿಕರಿಗೆ ನೀಡುವ ವ್ಯವಸ್ಥೆಯನ್ನು ಪ್ರದರ್ಶನದಲ್ಲಿ ಮಾಡಲಾಗಿದೆ.