ಸಾರಾಂಶ
ಬಸವರಾಜ ಹಿರೇಮಠ
ಶಿಗ್ಗಾಂವಿ: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಇರುವ ಮೆಟ್ರಿಕ್ ಪೂರ್ವ ವಸತಿ ನಿಲಯ!ಹಿಂದುಳಿದ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಸತಿ ನಿಲಯದ ಮೇಲ್ವಿಚಾರಕ ಎಚ್.ಎಸ್. ರಮೇಶ ಅವರ ವಿಶೇಷ ಕಾಳಜಿ ಮತ್ತು ಆಸಕ್ತಿಯಿಂದ ವಸತಿ ನಿಲಯದ ಆವರಣ ಸಂಪೂರ್ಣ ಹಸಿರುಮಯವಾಗಿದೆ. ಈ ವಸತಿ ನಿಲಯದಲ್ಲಿ ೫೦ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಆಟ, ಪಾಠ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಜತೆಗೆ ರಮೇಶ ಅವರ ಮಾರ್ಗದರ್ಶನದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿಕೊಂಡಿದ್ದಾರೆ.
ವಸತಿ ನಿಲಯದ ಸುತ್ತಮುತ್ತ ಬೆಳೆದ 300ಕ್ಕೂ ಅಧಿಕ ಹಣ್ಣು, ಹೂವು, ತರಕಾರಿ ಗಿಡಗಳು-ಬಳ್ಳಿಗಳು ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈ ಪರಿಸರ ಮಕ್ಕಳ ಉತ್ತಮ ಓದಿಗೆ ಪ್ರೇರಣೆ ನೀಡುವಂತಿದೆ.ಇಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ರಮೇಶ ಅವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
ವಸತಿ ನಿಲಯದ ಆವರಣದಲ್ಲಿ ನಿರ್ಮಾಣ ಮಾಡಿದ ಕೈದೋಟದಲ್ಲಿ ಬೆಳೆದ ಟೊಮೆಟೊ, ಮೂಲಂಗಿ, ಬದನೆಕಾಯಿ, ಮೆಂತೆ, ಕರಿಬೇವು, ಕೋತಂಬರಿಯಂತಹ ತರಕಾರಿಗಳನ್ನು ವಸತಿ ನಿಲಯದ ನಿತ್ಯ ಅಡುಗೆಗೆ ಬಳಸಲಾಗುತ್ತಿದೆ. ಇಲ್ಲಿ ಬೆಳೆದ ಪೇರಲ, ಪಪ್ಪಾಯಿ, ಮಾವು, ಚಿಕ್ಕು, ಸೀತಾಫಲ, ಬಾಳೆ ಹಣ್ಣುಗಳನ್ನೆ ಮಧ್ಯಾಹ್ನ ಊಟದ ಜತೆಗೆ ನೀಡಲಾಗುತ್ತಿದೆ.ಈ ಜಾಗ ಮೊದಲು ಸಂಪೂರ್ಣ ಪಾಳುಬಿದ್ದಿತ್ತು. ಈ ಸ್ಥಳದಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯ ನಿರ್ಮಾಣವಾದ ಆನಂತರ ಮೇಲ್ವಿಚಾರಕರಾಗಿ ರಮೇಶ ಎಚ್.ಎಸ್. ಅಧಿಕಾರ ಸ್ವೀಕರಿಸಿದರು. ಅವರು ಅಲ್ಲಿರುವ ಸಿಬ್ಬಂದಿ ಸಹಕಾರದಿಂದ ತೆಗ್ಗು-ದಿನ್ನೆ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿ, ಅಲ್ಲಿ ಸುಂದರವಾದ ಪರಿಸರ ನಿರ್ಮಾಣ ಮಾಡಿದರು.
ವಿದ್ಯಾರ್ಥಿಗಳಿಗೆ ಆಟ, ಪಾಠದ ಜತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಗಿಡ ನೆಡಿಸಿ, ಅದನ್ನು ರಕ್ಷಿಸುವ ಜವಾಬ್ದಾರಿ ನೀಡಿದರು. ಉತ್ತಮ ಗಿಡ ಪಾಲನೆ-ಪೋಷಣೆ ಮಾಡಿದ ವಿದ್ಯಾರ್ಥಿಗೆ ಪ್ರಶಸ್ತಿ ಸಹ ನೀಡುವರು. ವಸತಿ ನಿಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು, ಸಸ್ಯಕಾಶಿಯಂತೆ ಭಾಸವಾಗುತ್ತದೆ. ಅವರ ಈ ಸಾಧನೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಇಲಾಖೆಯ ಮೇಲಧಿಕಾರಿಗಳ ಪ್ರೋತ್ಸಾಹ, ಗ್ರಾಮಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಹಕಾರದಿಂದ ಉತ್ತಮ ಜಾಗೃತಿ ಮಾಡಿಸಲು ನನ್ನಿಂದ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಸಂರಕ್ಷಣೆಯ ಕಾರ್ಯ ಮಾಡುವ ಆಸೆ ನನ್ನದಾಗಿದೆ ಎಂದು ವಸತಿ ನಿಲಯ ಮಲ್ವಿಚಾರಕ ಎಚ್.ಎಸ್. ರಮೇಶ ಹೇಳುತ್ತಾರೆ.ನಿಲಯ ಪಾಲಕ ರಮೇಶ ಅವರ ಪರಿಸರ ಕಾಳಜಿಯಿಂದ ಹೋತನಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಪರಿಸರ ಸ್ನೇಹಿ ಮಾದರಿ ವಸತಿ ನಿಲಯವಾಗಿದೆ ಎಂದು ಹಾವೇರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರವೀಣ ಕೆ.ಎಸ್. ಹೇಳುತ್ತಾರೆ.