ಸಾರಾಂಶ
ಇದೀಗ ಜೋಶಿ ಮತ್ತೆ ಗೆದ್ದಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ಅವರ ಗುರಿ ಮುಟ್ಟಲು ಈ ಚುನಾವಣೆಯಲ್ಲಂತೂ ಸಾಧ್ಯವಾಗಿಲ್ಲ. ಮುಂದೆ ಚುನಾವಣೆಯಲ್ಲಿ ಮತ್ತೆ ಪ್ರಯತ್ನಿಸಬಹುದು. ಆದರೆ ಅಲ್ಲಿವರೆಗೂ ತಮ್ಮ ಮಾತು ಮರೆತು ಸನ್ಮಾನ ಸ್ವೀಕರಿಸುತ್ತಾರೆಯೇ?
ಶಿವಾನಂದ ಗೊಂಬಿ
ಹುಬ್ಬಳ್ಳಿ:ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಚುನಾವಣೆ ಮುಂಚೆ ಹೇಳಿದಂತೆ ಕಾಯಂ ಆಗಿ ಸನ್ಮಾನ ಸ್ವೀಕರಿಸುವುದನ್ನು ಬಿಡುತ್ತಾರೆಯೋ ಅಥವಾ ಮೊದಲಿನಂತೆ ಶಾಲು,. ಮಾಲೆಗೆ ಕೊರಳೊಡ್ಡಿ ಸನ್ಮಾನ ಸ್ವೀಕರಿಸುತ್ತಾರೋ?
ಇದು ಇದೀಗ ಧಾರವಾಡ ಜಿಲ್ಲೆಯಷ್ಟೇ ಅಲ್ಲ. ಇಡೀ ಉತ್ತರ ಕರ್ನಾಟಕದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಚುನಾವಣೆಗೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಸಮರ ಸಾರಿದ್ದ ದಿಂಗಾಲೇಶ್ವರ ಶ್ರೀ, ಜೋಶಿ ಸೋಲಿಸುವುದೇ ನನ್ನ ಗುರಿ. ಈ ಹೋರಾಟದಲ್ಲಿ ಜಯ ಗಳಿಸುವವರೆಗೂ ನಾನು ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ, ಜೋಶಿ ದಾಖಲೆಯ 5ನೇ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಶ್ರೀಗಳು ಇದೀಗ ಏನು ಮಾಡುತ್ತಾರೆ? ಎಂಬುದು ಭಕ್ತರ ಪ್ರಶ್ನೆ.ಆಗಿದ್ದೇನು?:
ಜೋಶಿ ಅವರನ್ನು ಕಣಕ್ಕಿಳಿಸಬೇಡಿ. ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎಂದು ಶ್ರೀಗಳು ಮಾರ್ಚ್‌ನಲ್ಲಿ ಒತ್ತಾಯಿಸಿದ್ದರು. ಆದರೆ ಬಿಜೆಪಿ ವರಿಷ್ಠರು ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಶ್ರೀಗಳು, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಸೇರಿದಂತೆ ವಿವಿಧೆಡೆ ಭಕ್ತರ ಹಾಗೂ ವಿವಿಧ ಮಠಾಧೀಶರ ಸಭೆ ನಡೆಸಿದ್ದರು.ಸನ್ಮಾನವೆಲ್ಲ ಬೇಡ:
ಕೊನೆಗೆ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನೂ ಪ್ರಕಟಿಸಿದ್ದರು. ನಾಮಪತ್ರವನ್ನೂ ಸಲ್ಲಿಸಿದ್ದರು. ಅದರ ಬಳಿಕವೂ ಕ್ಷೇತ್ರಾದ್ಯಂತ ಸುತ್ತಿ ಭಕ್ತರ ಸಭೆ ಮೇಲೆ ಸಭೆ ನಡೆಸಲು ಆರಂಭಿಸಿದ್ದರು. ಆಗ ತಮ್ಮೂರಿಗೆ ಬರುತ್ತಿದ್ದ ಶ್ರೀಗಳು ಭಕ್ತರು, ಪ್ರಮುಖರು ಶಾಲು ಹೊದಿಸಿ, ಮಾಲೆ ಹಾಕಿ ಸನ್ಮಾನಿಸುತ್ತಿದ್ದರು. ಕೊನೆಗೆ ಶ್ರೀಗಳು, ತಾವೂ ಹೋರಾಟಕ್ಕೆ ಇಳಿದಿದ್ದೇನೆ. ಜೋಶಿ ಅವರನ್ನು ಸೋಲಿಸುವುದೇ ನನ್ನ ಹೋರಾಟದ ಮುಖ್ಯ ಗುರಿ. ಈ ಗುರಿ ಮುಟ್ಟುವವರೆಗೂ ನನಗೆ ಸನ್ಮಾನ ಮಾಡಬೇಡಿ. ಯಾವ ಮಾಲೆಗೂ ನಾನು ಇನ್ಮುಂದೆ ಕೊರಳು ಒಡ್ಡುವುದಿಲ್ಲ. ಇನ್ನೇನಿದ್ದರೂ ಜೋಶಿ ಅವರನ್ನು ಸೋಲಿಸಿದ ಬಳಿಕ ಮತದಾರರಿಗೆ ನಾನೇ ಮಾಲೆ ಹಾಕುತ್ತೇನೆ ಎಂದು ವೇದಿಕೆಯಲ್ಲೇ ಘೋಷಿಸಿದ್ದರು. ಆ ಬಳಿಕ ಅದರಂತೆ ನಡೆದುಕೊಂಡಿದ್ದು ಆಗಿದೆ.ಆಮೇಲೆ ಹಿರಿಯ ಶ್ರೀಗಳ ಆದೇಶಕ್ಕೆ ಮಣಿದು ನಾಮಪತ್ರ ಹಿಂಪಡೆದು ಕಣದಿಂದ ಹಿಂದೆ ಸರಿದಿದ್ದರು. ಆದರೂ ಜೋಶಿ ಅವರನ್ನು ಸೋಲಿಸುವ ಸಮರದಿಂದ ಹಿಂದೆ ಸರಿದಿರಲಿಲ್ಲ. ಭಕ್ತರ ಸಭೆಗಳನ್ನು ಮುಂದುವರಿಸಿದ್ದರು.
ಇನ್ಮೇಲೆ ಏನ್ಮಾಡ್ತಾರೆ?:ಇದೀಗ ಜೋಶಿ ಮತ್ತೆ ಗೆದ್ದಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ಅವರ ಗುರಿ ಮುಟ್ಟಲು ಈ ಚುನಾವಣೆಯಲ್ಲಂತೂ ಸಾಧ್ಯವಾಗಿಲ್ಲ. ಮುಂದೆ ಚುನಾವಣೆಯಲ್ಲಿ ಮತ್ತೆ ಪ್ರಯತ್ನಿಸಬಹುದು. ಆದರೆ ಅಲ್ಲಿವರೆಗೂ ತಮ್ಮ ಮಾತು ಮರೆತು ಸನ್ಮಾನ ಸ್ವೀಕರಿಸುತ್ತಾರೆಯೇ? ಶಾಲಿಗೆ ಭುಜ, ಮಾಲೆಗೆ ಕೊರಳೊಡ್ಡುತ್ತಾರೋ? ಅಥವಾ ತಮ್ಮ ಘೋಷಣೆಗೆ ಬದ್ಧರಾಗಿ ಸನ್ಮಾನ ಸ್ವೀಕರಿಸುವುದನ್ನು ಬಿಡುತ್ತಾರೆಯೇ? ಎಂಬುದೀಗ ಎದ್ದಿರುವ ಪ್ರಶ್ನೆ.
ಭಕ್ತರು ಮಾತ್ರ ಬುದ್ಧಿಗಳೇ ಹಾಗೆಲ್ಲ ಮಾಡಬೇಡಿ. ಏನೋ ಪ್ರಯತ್ನ ಪಟ್ಟಿದ್ದೇವೆ. ಸನ್ಮಾನ ಸ್ವೀಕರಿಸಿ ಎಂದು ಒತ್ತಾಯಿಸಲು ಸಿದ್ಧರಾಗಿದ್ದರಂತೆ. ಆದರೆ ಶ್ರೀಗಳು ಏನು ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!