ಸಾರಾಂಶ
ಬುಧವಾರ ರಾತ್ರಿ ಘಟನೆ ನಡೆದಿದ್ದು, ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಅಲ್ಲಿಂದ ಗ್ಯಾಸ್ ಹಂಡೆ ಹಾಗೂ ಸುಮಾರು 8 ಸಾವಿರ ರು. ಮೌಲ್ಯದ ಹೊಸ ಮಿಕ್ಸಿಯನ್ನು ಕದ್ದಿದ್ದಾರೆ.
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಿಲಿಗೂಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಶಾಲೆಯ ಬೀಗ ಒಡೆದು ಬಿಸಿಯೂಟಕ್ಕೆ ಬಳಸಲಾಗುತ್ತಿದ್ದ ಮಿಕ್ಸಿ, ಗ್ಯಾಸ್ ಹಂಡೆಯನ್ನು ಕದ್ದೊಯ್ದಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು, ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಅಲ್ಲಿಂದ ಗ್ಯಾಸ್ ಹಂಡೆ ಹಾಗೂ ಸುಮಾರು 8 ಸಾವಿರ ರು. ಮೌಲ್ಯದ ಹೊಸ ಮಿಕ್ಸಿಯನ್ನು ಕದ್ದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಪಿಕ್ಕಾಸಿನಿಂದ ಮುಖ್ಯಶಿಕ್ಷಕರ ಕಚೇರಿಯನ್ನು ಒಡೆದು ಬಳಿಕ ಅಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ. ತರಗತಿಗಳಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಶಾಲಾ ಮಕ್ಕಳು ಬೀಗ ತೆರೆಯಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಉಪ್ಪಿನಂಗಡಿ ಠಾಣೆಯ ಎಸ್ಐ ಅವಿನಾಶ್ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.