ಸಾರಾಂಶ
ದೊಡ್ಡಬಳ್ಳಾಪುರದ ನಾಗರೆಕೆರೆ ಏರಿಯ ಮೇಲಿನ ಆಚೆಗುಡಿ ಶ್ರೀ ಆಂಜನೇಯಸ್ವಾ,ಮಿ ದೇವಾಲಯದ ಅಂಗಳದಲ್ಲಿ ಮಕ್ಕಳ ಕೈಯಲ್ಲಿ ಹದವಾದ ಜೇಡಿಮಣ್ಣು. ಪುಟಾಣಿ ಕೈಗಳಲ್ಲಿ ಗಣಪ ಮೂರ್ತಿಯ ತರಾವರಿ ಆಕೃತಿಗಳು ರೂಪ ತಳೆಯುವ ಧಾವಂತ ಗಮನ ಸೆಳೆದಿತ್ತು.
ಕೆ.ಆರ್.ರವಿಕಿರಣ್ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದ ನಾಗರೆಕೆರೆ ಏರಿಯ ಮೇಲಿನ ಆಚೆಗುಡಿ ಶ್ರೀ ಆಂಜನೇಯಸ್ವಾ,ಮಿ ದೇವಾಲಯದ ಅಂಗಳ ಮಕ್ಕಳಿಂದ ಕಿಕ್ಕಿರಿದು ತುಂಬಿತ್ತು. ಮಕ್ಕಳ ಕೈಯಲ್ಲಿ ಹದವಾದ ಜೇಡಿಮಣ್ಣು. ಪುಟಾಣಿ ಕೈಗಳಲ್ಲಿ ಗಣಪ ಮೂರ್ತಿಯ ತರಾವರಿ ಆಕೃತಿಗಳು ರೂಪ ತಳೆಯುವ ಧಾವಂತ ಗಮನ ಸೆಳೆದಿತ್ತು.ಇಲ್ಲಿನ ಯುವ ಸಂಚಲನ , ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ನಗರಸಭೆ ದೊಡ್ಡಬಳ್ಳಾಪುರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗಾಗಿ ಪರಿಸರ ಸ್ನೇಹಿ ಜೀವಗಣೇಶ ಮೂರ್ತಿ ತಯಾರಿಸುವ ಶಿಬಿರದಲ್ಲಿ ಕಂಡು ಬಂದ ಈ ದೃಶ್ಯ ವಿಶೇಷವಾಗಿತ್ತು. ಸುಮಾರು 75ಕ್ಕೂ ಹೆಚ್ಚು ಮಕ್ಕಳು ತಮ್ಮ ಪೋಷಕರೊಂದಿಗೆ ಬಂದು ಉತ್ಸಾಹದಿಂದ ಭಾಗಿಯಾಗಿದ್ದರು.
75ಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ತಮ್ಮದೇ ಆದಂತಹ ವಿಭಿನ್ನ ರೀತಿಯ ಗಣಪತಿಗಳನ್ನು ತಯಾರಿಸಿ ಮೂರ್ತಿಯೊಳಗಡೆಗೆ ಹಣ್ಣಿನ ಬೀಜಗಳನ್ನು ಇಟ್ಟು ಜೀವ ಗಣಪತಿಯನ್ನಾಗಿ ಮಾಡಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು. ಗಣಪ ಮೂರ್ತಿ ತಯಾರಿಕೆ ಜತೆಗೆ ಹಾಡು, ಪರಿಸರ ಜಾಗೃತಿ, ಜಲಮೂಲಗಳ ಸಂರಕ್ಷಣೆ ಮತ್ತು ರಾಸಾಯನಿಕ, ಕೃತಕ ಬಣ್ಣಗಳ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಿತು.ದೇವನಹಳ್ಳಿ ಕಲಾ ಶಾಲೆಯ ಹೇಮಂತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿ ಮಕ್ಕಳಿಗೆ ಗಣಪ ಮೂರ್ತಿಗಳನ್ನು ತಯಾರಿಸಲು ಮಾರ್ಗದರ್ಶನ ನೀಡಿದರು.
ನಗರಸಭೆಯ ಪೌರಾಯುಕ್ತ ಕಾರ್ತಿಕೇಶ್ವರ್, ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ, ಪತ್ರಕರ್ತ ಕೆ ವೆಂಕಟೇಶ್, ನಾಗದಳ ತಂಡದ ಸಿ ನಟರಾಜ್, ವೆಂಕಟೇಶ್ ಆದಿನಾರಾಯಣ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ವೆಂಕಟರಾಜು, ಯುವ ಸಂಚಲನ ತಂಡದ ಅಧ್ಯಕ್ಷರಾದ ಚಿದಾನಂದ ಮೂರ್ತಿ, ನವೀನ್, ಸುಹಾಸ್, ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು, ಸಾರ್ವಜನಿಕರು ಭಾಗವಹಿಸಿದ್ದರು.