ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಓಂಕಾರ್ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಕಾಡಿನಿಂದ ಹೊರ ಬಂದಿದ್ದ ಸಲಗವೊಂದು ಅರಣ್ಯದಂಚಿನ ಪ್ರದೇಶದಲ್ಲಿ ಕಂದಕಕ್ಕೆ ಉರುಳಿಬಿದ್ದು, ಮೃತಪಟ್ಟಿರುವ ಘಟನೆ ತಾಲೂಕಿನ ಕೆಲ್ಲೂಪುರ ಸಮೀಪ ನಡೆದಿದೆ.ತಾಲೂಕಿನ ಕೆಲ್ಲೂಪುರ ಗ್ರಾಮದ ಹೊರ ವಲಯದಲ್ಲಿ ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆಯವರು ನಿರ್ಮಿಸಿರುವ ಬೃಹತ್ ಕಂದಕದಲ್ಲಿ ಗುರುವಾರ ಬೆಳಗ್ಗೆ ಆನೆಯೊಂದು ಉರುಳಿ ಬಿದ್ದು ಹೊರಬರಲಾರದೆ ಪರದಾಡುತ್ತಿರುವುದನ್ನು ಸ್ಥಳೀಯ ಗ್ರಾಮಸ್ಥರು ಗಮನಿಸಿ, ಈ ಬಗ್ಗೆ ಓಂಕಾರ್ ಅರಣ್ಯ ಪ್ರದೇಶದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದರಾದರೂ ಅಷ್ಟರಲ್ಲಾಗಲೇ ತೀವ್ರ ನಿತ್ರಾಣಗೊಂಡಿದ್ದ ಆನೆ ಮೃತಪಟ್ಟಿದೆ ಎನ್ನಲಾಗಿದೆ.ನಂತರ ಸ್ಥಳದಲ್ಲೇ ಅರಣ್ಯ ಇಲಾಖೆ ವೈದ್ಯಾಧಿಕಾರಿಗಳ ತಂಡದಿಂದ ಆನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಬಳಿಕ ಅಂತ್ಯಸಂಸ್ಕಾರ ನಡೆಯಿತು. ಇನ್ನು ಮೃತ ಗಂಡಾನೆ ಅಂದಾಜು 40 ವರ್ಷ ವಯಸ್ಸಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಲಭ್ಯವಾದ ಬಳಿಕ ಆನೆಯ ಸಾವಿಗೆ ಕಾರಣವಾಗಿರುವ ನಿಖರ ಮಾಹಿತಿಯನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.ಅರಣ್ಯ ಇಲಾಖೆ ಎಸಿಎಫ್ ಪ್ರಭಾಕರ್, ಆರ್.ಎಫ್.ಓ. ನಿತಿನ್ ಕುಮಾರ್ ಸೇರಿದಂತೆ ಓಂಕಾರ್ ಅರಣ್ಯ ವ್ಯಾಪ್ತಿಯ ಅಧಿಕಾರಿಗಳು ಇದ್ದರು.