ಎಚ್‌ಡಿಕೆಯಿಂದ ಭಾವನಾತ್ಮಕ ಅಸ್ತ್ರ

| Published : Nov 11 2024, 12:47 AM IST

ಸಾರಾಂಶ

ಚನ್ನಪಟ್ಟಣ: ಕುಮಾರಸ್ವಾಮಿ ಕಳೆದ ಎರಡು ಚುನಾವಣೆಯಲ್ಲಿ ಪ್ರಯೋಗಿಸಿದ ಭಾವನಾತ್ಮಕ ಅಸ್ತ್ರವನ್ನು ಈ ಬಾರಿಯು ಪ್ರಯೋಗಿಸುತ್ತಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದ ಜನ ನನ್ನ ಕೈಹಿಡಿಯಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಕುಮಾರಸ್ವಾಮಿ ಕಳೆದ ಎರಡು ಚುನಾವಣೆಯಲ್ಲಿ ಪ್ರಯೋಗಿಸಿದ ಭಾವನಾತ್ಮಕ ಅಸ್ತ್ರವನ್ನು ಈ ಬಾರಿಯು ಪ್ರಯೋಗಿಸುತ್ತಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದ ಜನ ನನ್ನ ಕೈಹಿಡಿಯಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ನಾನು ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಜನ ತೋರುತ್ತಿರುವ ಉತ್ಸಾಹ, ಪ್ರೀತಿ, ವಿಶ್ವಾಸ ಕಂಡು ಮೂಕ ವಿಸ್ಮಿತನಾಗಿದ್ದು, ಇದನ್ನು ಯಾವ ಭಾವನಾತ್ಮಕ ಅಸ್ತ್ರವು ತಡೆಯಲು ಸಾಧ್ಯವಿಲ್ಲ ಎಂದರು. ರಾಜ್ಯ ಸರ್ಕಾರ ಬಡವರ, ದೀನದಲಿತರ, ರೈತರ, ಮಹಿಳೆಯರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜತೆಗೆ ತಾಲೂಕಿನ ಅಭಿವದ್ಧಿಗೆ ೫೦೦ ಕೋಟಿ ಅನುದಾನ ನೀಡಿದೆ. ಇದೆಲ್ಲವನ್ನು ಮನಗಂಡಿರುವ ತಾಲೂಕಿನ ಸ್ವಾಭಿಮಾನಿ ಮತದಾರರು ಆಡುತ್ತಿರುವ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡುತ್ತಿದೆ ಎಂದರು.

ಪಕ್ಷಾಂತರ ಸ್ವಾರ್ಥಕ್ಕಲ್ಲ:

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿರುವ ವಿರೋಧ ಪಕ್ಷದವರು ಸುಳ್ಳು ಆರೋಪಗಳ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಪಕ್ಷಾಂತರಿ ಎಂದು ಟೀಕಿಸುತ್ತಿದ್ದಾರೆ, ನಾನು ಪಕ್ಷಾಂತರ ಮಾಡದಿದ್ದರೆ ಇಂದು ನೀವೆಲ್ಲಾ ಮತ ಕೇಳಲು ಬರುವ ನನಗೆ ಖಾಲಿ ಕೊಡಗಳನ್ನು ತೋರಿಸುತ್ತಿದ್ದಿರಿ ಎಂದರು.

ಬರದಿಂದ ಕಂಗೆಟ್ಟಿದ್ದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಕೃಷಿ ಕೆಲಸಗಳಿಗೆ ನೀರಿಲ್ಲದೆ ಜಮೀನು ಒಣಗಿದ್ದವು. ಇದೆಲ್ಲವನ್ನು ಕಂಡು ತಾಲೂಕಿನ ಹಸಿರುಗೊಳಿಸುವ ಉದ್ದೇಶದಿಂದ ನಾನು ಪಕ್ಷಾಂತರ ಮಾಡಿದೆನೆ ಹೊರತು ಸ್ವಾರ್ಥ, ಅಧಿಕಾರದ ದಾಹದಿಂದಲ್ಲ ಎಂದರು.

ಕುಮಾರಸ್ವಾಮಿ ಕೊಡುಗೆ ಏನಿದೆ:

ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆಗಳು ಖಾಲಿಯಾಗಿದ್ದು, ರಸ್ತೆಗಳು ಸರಿಯಿಲ್ಲ. ಇನ್ನೂ ನಗರದಲ್ಲಿ ಯುಜಿಡಿ ಸಮಸ್ಯೆ, ಕಸದ ಸಮಸ್ಯೆ ಕಗ್ಗಂಟಾಗಿದೆ. ಇದೆಲ್ಲವನ್ನು ಸರಿಪಡಿಸಬೇಕಾಗಿದ್ದವರು ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿಯವರೇ ಹೊರತು ನಾನಲ್ಲ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಅವರು ವಿಫಲರಾಗಿದ್ದಾರೆ. ನನ್ನನ್ನು ಸೋಲಿಸಲೇಬೇಕೆಂಬ ಏಕೈಕ ಉದ್ದೇಶದೊಂದಿಗೆ ಕುಮಾರಸ್ವಾಮಿ ಎರಡು ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧಿಸಿದರು. ಈಗ ತಮ್ಮ ರಾಜಕೀಯ ಪುನರ್ಜನ್ಮಕ್ಕೆ ಮಂಡ್ಯಕ್ಕೆ ಹೋಗಿದ್ದದಾರೆ. ಅವರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಎಷ್ಟಾಗಿದೆ ಹೇಳಲಿ, ನಾನು ತಂದಂತಹ ಹಲವಾರು ಕೆಲಸಕಾರ್ಯಗಳನ್ನು ತಮ್ಮದೆಂದು ಹೇಳಿಕೊಂಡವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಿದ್ದು, ಸಾಕಷ್ಟು ಜನಪರ ಕೆಲಸಗಳನ್ನು ಮಾಡುತ್ತಿದೆ, ತಾಲೂಕಿನ ಕೆರೆಗಳನ್ನು ತುಂಬಿಸಲು, ಅಭಿವೃದ್ಧಿಗೆ ವೇಗ ನೀಡಲು ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಇದೇ ವೇಳೆ ಹನುಮಂತನಗರದ ಬಳಿ ಇರುವ ಅಪೇರಲ್ ಗಾರ್ಮೇಂಟ್ಸ್‌ಗೆ ಭೇಟಿ ನೀಡಿದ ಯೋಗೇಶ್ವರ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ,ರೇವಣ್ಣ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಇತರರಿದ್ದರು.