ಕಾವೇರಿ ನೀರಿನ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಮ್ಮ ಕಾವೇರಿ ಭಾಗದ ರೈತರಿಗೆ ಬೆಳೆ ಹಾಕದಂತೆ ಸೂಚಿಸಿ ನೆರೆ ರಾಜ್ಯದ ರೈತರ ಬೆಳೆಗಳಿಗೆ ನೀರುಣಿಸುತ್ತಿರುವ ಸರ್ಕಾರದ ನಿಲುವನ್ನು ನೋಡಿದರೆ ಕಣ್ಣೀರು ಬರುತ್ತದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಹಿಳೆಯರ ಮಾನ ಉಳಿಸಿದರೆ ಸಾಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಖಜಾನೆಯನ್ನು ಬರಿದು ಮಾಡಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರದಿಂದ ಪ್ರಗತಿ ಎಂದಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ ಮತ್ತೆ ಅಭಿವೃದ್ಧಿಯ ಪರ್ವ ಆರಂಭವಾಗಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸಂತೆಕಸಲಗೆರೆಯ ಶ್ರೀಭೂಮಿಸಿದ್ದೇಶ್ವರಸ್ವಾಮಿ ದೇಗುಲದ ಬಳಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಿಜೆಪಿ ಮುಖಂಡ ಎಸ್.ಸಚ್ಚಿದಾನದಂದ ಆಯೋಜಿಸಿದ್ದ ಮಹಿಳೆಯರಿಗೆ ಬಾಗಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಆರ್ಥಿಕ ಸಂಪನ್ಮೂಲ ಖಾಲಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಪ್ರಗತಿದಾಯಕ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಸರ್ಕಾರ ಕೊಡುವ ೨ ಸಾವಿರ ರು. ಗ್ಯಾರಂಟಿ ಹಣದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದರು.

ಕಾವೇರಿ ನೀರಿನ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಮ್ಮ ಕಾವೇರಿ ಭಾಗದ ರೈತರಿಗೆ ಬೆಳೆ ಹಾಕದಂತೆ ಸೂಚಿಸಿ ನೆರೆ ರಾಜ್ಯದ ರೈತರ ಬೆಳೆಗಳಿಗೆ ನೀರುಣಿಸುತ್ತಿರುವ ಸರ್ಕಾರದ ನಿಲುವನ್ನು ನೋಡಿದರೆ ಕಣ್ಣೀರು ಬರುತ್ತದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಹಿಳೆಯರ ಮಾನ ಉಳಿಸಿದರೆ ಸಾಕಾಗಿದೆ. ಸುಲಿಗೆ, ಭ್ರಷ್ಟಾಚಾರ ಹೆಚ್ಚಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿರುವುದಾಗಿ ಟೀಕಿಸಿದರು.

ರಾಜ್ಯ ರಾಜಕಾರಣದಲ್ಲಿ ಮಂಡ್ಯ ಜಿಲ್ಲೆಯ ಪಾತ್ರ ಬಹಳ ಮುಖ್ಯ. ಇಲ್ಲಿನ ಫಲಿತಾಂಶ ದೇಶದ ರಾಜಕಾರಣವನ್ನು ನಿರ್ಧರಿಸುತ್ತದೆ. ಜಿಲ್ಲೆಯ ಜನರು ನನಗೆ ಪ್ರೀತಿ ತೋರಿಸಿದ್ದಾರೆ. ನನಗೂ ಮಂಡ್ಯ ಜಿಲ್ಲೆ ಬಗ್ಗೆ ಅತ್ಯಂತ ಪ್ರೀತಿ ಇದೆ. ಕಾನೂನಾತ್ಮಕ ಅಡೆತಡೆಗಳಿದ್ದರೂ ಕೆಆರ್‌ಎಸ್‌ನ ೧೩೬ ಗೇಟ್‌ಗಳನ್ನು ಬದಲಾವಣೆ ಮಾಡಿದೆ. ಅದು ನನ್ನ ಸೌಭಾಗ್ಯ ಎಂದರು.

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣ ೩ ತಿಂಗಳಿಂದ ಬಂದಿಲ್ಲ, ಪಿಂಚಣಿ ಕೊಟ್ಟು ಐದು ತಿಂಗಳಾಗಿದೆ. ಇದು ಅಭಿವೃದ್ಧಿಯೇ. ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಜನರೆದುರು ಬೂಟಾಟಿಕೆ ಆಡುತ್ತಿದೆ. ಜಾಹೀರಾತುಗಳನ್ನು ಕೊಟ್ಟು ಪ್ರಚಾರ ಪಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸದೆ ಕೇವಲ ಗ್ಯಾರಂಟಿಗಳನ್ನೇ ಜಪ ಮಾಡುತ್ತಾ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ಮಂಡ್ಯ ಕರ್ನಾಟಕಕ್ಕೆ ಸಿಹಿ ಕೊಡುವ ಜಿಲ್ಲೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಇಂಡುವಾಳು ಸಚ್ಚಿದಾನಂದ ಗೆಲ್ಲಬೇಕು. ಕಳೆದ ಬಾರಿ ಸೋತ ನಂತರವೂ ಅವರು ನಿಮ್ಮ ಜೊತೆ ಇದ್ದಾರೆ. ನಿಮ್ಮ ಆಶೀರ್ವಾದ ಸಚ್ಚಿದಾನಂದಗೆ ಸಿಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರಿಗೆ ಬಾಗಿನ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಹತ್ತು ಮಂದಿ ಮಹಿಳೆಯರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಬಾಗಿನ ಸಮರ್ಪಿಸಿದರು.

ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮೈಸೂರು ಸಂಸದ ಯದುವೀರ್, ಚಿಕ್ಕಮಗಳೂರು ಗೌರಿಗದ್ದೆಯ ವಿನಯ್ ಗುರೂಜಿ, ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ರಾಜುಗೌಡ, ಶಾಸಕ ಸತೀಶ್‌ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ತಾರಾ, ಇಂಡುವಾಳು ಸಚ್ಚಿದಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಯಮದೂರು ಸಿದ್ದರಾಜು, ಮಂಗಳಾ, ಬೇವಿನಹಳ್ಳಿ ಮಹೇಶ್, ರಾಮಚಂದ್ರ, ಸತೀಶ್, ರಮೇಶ್, ಚೇತನ್ ಹೇಮಾವತಿ ಇತರರಿದ್ದರು.ಕಾಂಗ್ರೆಸ್ ಜನರಿಗೆ ಗ್ಯಾರಂಟಿಗಳ ಭೂತ ಹಿಡಿಸಿದೆ: ಸಚ್ಚಿದಾನಂದ

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿಗಳ ಭೂತ ಹಿಡಿಸಿರುವುದನ್ನು ಬಿಟ್ಟರೆ ಇನ್ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಎಸ್.ಸಚ್ಚಿದಾನಂದ ದೂಷಿದಿರು.

ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಸಂತೆಕಸಲಗೆರೆ ಶ್ರೀ ಭೂಮಿಸಿದ್ದೇಶ್ವರ ದೇವಸ್ಥಾನದ ಬಳಿ ನಡೆದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಮೋಸ ಹೋಗಬೇಡಿ. ಗೃಹಲಕ್ಷ್ಮಿ ಹಣ ನಿಂತು ಮೂರು ತಿಂಗಳಾಗಿದೆ. ಜನರ ತೆರಿಗೆ ಹಣದಿಂದಲೇ ಗ್ಯಾರಂಟಿಗಳನ್ನು ಕೊಟ್ಟು ಜನರನ್ನೇ ವಂಚಿಸುತ್ತಿದ್ದಾರೆ. ಸರ್ಕಾರದ ಬಳಿ ದೂರದಷ್ಟಿ ಯೋಜನೆಗಳಿಲ್ಲ, ಖಜಾನೆಯಲ್ಲಿ ಹಣವಿಲ್ಲ, ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಗ್ಯಾರಂಟಿಗಳನ್ನು ನಿಗದಿತ ಸಮಯಕ್ಕೆ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸೋತಿದ್ದರೂ ಸಹ ಜನರ ಸೇವೆ ಮಾಡುವುದನ್ನು ನಿಲ್ಲಿಸಿಲ್ಲ. ನಿರಂತರವಾಗಿ ಸೇವೆ ಮಾಡುತ್ತಲೇ ಬಂದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ರೈತರು ಬೆಳೆದ ಹಣ್ಣು ತರಕಾರಿಗಳು ಹಾಳಾಗುತ್ತಿತ್ತು. ಅವರಿಗೆ ನಷ್ಟವಾಗುವುದನ್ನು ತಪ್ಪಿಸಲು ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ಉಚಿತವಾಗಿ ಜನರಿಗೆ ಹಂಚಿಕೆ ಮಾಡಿದ್ದೆ. ಅದೇ ರೀತಿ ಯುವಜನರಿಗೆ ದ್ವಿಚಕ್ರ ವಾಹನ ಪರವಾನಗಿ ಕೊಡಿಸಿದ್ದೇನೆ. ಅವರ ಜೀವ ರಕ್ಷಣೆಗಾಗಿ ಸಾವಿರಾರು ಮಂದಿಗೆ ಹೆಲ್ಮೆಟ್ ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.

ಬಿಜೆಪಿ ಕಾರ್ಯಕರ್ತರೊಂದಿಗೆ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕಾಯಿತು. ದಲಿತರಿಗೆ ಮೀಸಲಾಗಿದ್ದ ೧೮೭ ಕೋಟಿಗಳನ್ನು ನಾಗೇಂದ್ರ ಮತ್ತು ಅವರ ತಂಡ ಲೂಟಿ ಮಾಡಿದೆ. ಇದೇ ಆರೋಪದಲ್ಲಿ ಅವರು ಜೈಲು ಸೇರಿದ್ದನ್ನು ಯಾರೂ ಮರೆತಿಲ್ಲ. ಇಂತಹ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಜನರು ಬೆಂಬಲಿಸಬಾರದು ಎಂದರು.