ಸಾರಾಂಶ
ವಸತಿ ರಹಿತರ ಮಾಹಿತಿ ಕಾರ್ಯಾಗಾರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಶಾಶ್ವತ ಸೂರು ಇಲ್ಲವಾಗಿದ್ದು, ಜನರು ಸಂಘಟಿತ ಹೋರಾಟ ನಡೆಸದಿದ್ದರೆ ಇನ್ನೂ ನೂರು ವರ್ಷ ಕಳೆದರೂ ಶಾಶ್ವತ ಸೂರು ಎಂಬುದು ಕನಸಾಗಿಯೇ ಉಳಿಯಲಿದೆ ಎಂದು ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ ಎಚ್ಚರಿಸಿದ್ದಾರೆ.
ನಗರದ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಭಾನುವಾರ ವಸತಿ ರಹಿತರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ನಿವೇಶನ, ವಸತಿ ಕೋರಿ 26.31 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ, ದಾವಣಗೆರೆಯಲ್ಲೇ ಮನೆ ಇಲ್ಲದ 64.89 ಸಾವಿರ ಅರ್ಜಿ, 27.54 ಸಾವಿರ ಜನರು ಸೇರಿ 92.43 ಸಾವಿರ ಜನರು ಮನೆ, ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಒಟ್ಟು 41 ಎಕರೆ ಜಮೀನು ವಸತಿಗೆ ಲಭ್ಯವಿದೆ. ಆದರೆ, ಸರ್ಕಾರದಿಂದ ಬಡವರಿಗೆ ಈವರೆಗೆ ಭರವಸೆ ಸಿಕ್ಕಿದೆಯೇ ಹೊರತು ನಿವೇಶನವಾಗಲೀ, ಮನೆಯಾಗಲೀ ಸಿಕ್ಕಿಲ್ಲ ಎಂದು ವಿಷಾದಿಸಿದರು.ವಸತಿ ಹಾಗೂ ನಿವೇಶನದ ಸಮಸ್ಯೆ ಅರ್ಥ ಮಾಡಿಕೊಂಡು, ನಿರ್ಗತಿಕರು, ವಸತಿ ರಹಿತರು ಚಳವಳಿಯನ್ನು ಕಟ್ಟಬೇಕಿದೆ. ಸಾರ್ವಜನಿಕರಿಗೆ ನಿವೇಶನ, ಮನೆ ಸೌಲಭ್ಯ ಕಲ್ಪಿಸಲು ಕಂದಾಯ, ವಸತಿ, ಗ್ರಾಮೀಣಾಭಿವೃದ್ಧಿ ಸೇರಿ ಸಂಬಂಧಿಸಿದ ಇಲಾಖೆಗಳು ಒಂದೇ ವೇದಿಕೆಯಲ್ಲಿ ಸೇರಿ, ಸಮಸ್ಯೆ ಪರಿಹರಿಸಬೇಕು. ನಿರ್ಗತಿಕರಿಗೆ ನಿವೇಶನ, ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸಿಪಿಐ ಪಕ್ಷವು ಪ್ರಜ್ಞಾಪೂರ್ವಕ ಹೋರಾಟ ನಡೆಸುತ್ತಾ ಬರುತ್ತಿದೆ ಎಂದರು.
ಸೂರಿಗಾಗಿ ಸಮರ ಹೆಸರಿನಲ್ಲಿ 2020ರಲ್ಲಿ ಸಿಪಿಐ ರಾಜ್ಯಾದ್ಯಂತ ಚಳವಳಿ ಆರಂಭಿಸಿತ್ತು. ಸೂರಿಗಾಗಿ ಕೋಟಿ ಹೆಜ್ಜೆ ಹಾಕಲು ನಿರ್ಧರಿಸಲಾಗಿತ್ತು. ತುಮಕೂರಿಗೆ ಹೋದ ಸಂದರ್ಭ ಲಾಕ್ ಡೌನ್ ಘೋಷಣೆಯಾಗಿ ಚಳವಳಿ ಸ್ಥಗಿತವಾಗಿತ್ತು. ಲಾಕ್ ಡೌನ್ ಬಳಿಕ ಸ್ಥಗಿತಗೊಂಡ ಸ್ಥಳದಿಂದಲೇ ಪ್ರತಿಭಟನೆ ಪುನಾರಂಭಿಸಿ, ಆಗಿನ ವಸತಿ ಸಚಿವರಾಗಿದ್ದ ವಿ.ಸೋಮಣ್ಣರಿಗೆ ಮನವಿ ಅರ್ಪಿಸಲಾಗಿತ್ತು ಎಂದು ಸಾತಿ ಸುಂದರೇಶ ಮಾಹಿತಿ ನೀಡಿದರು.ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ವಸತಿ ಯೋಜನೆಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಜಿಲ್ಲಾ ಖಜಾಂಚಿ ಆನಂದರಾಜ, ಸಹ ಕಾರ್ಯದರ್ಶಿಗಳಾದ ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ವಾಸು, ಇಪ್ಟಾದ ಐರಣಿ ಚಂದ್ರು, ಪಲವನಹಳ್ಳಿ ಪ್ರಸನ್ನಕುಮಾರ, ಎಂ.ಬಿ.ಶಾರದಮ್ಮ, ಮಹಮ್ಮದ್ ಬಾಷಾ, ಟಿ.ಎಚ್. ನಾಗರಾಜ, ಮಹಮ್ಮದ್ ರಫೀಕ್, ಜಿ.ಯಲ್ಲಪ್ಪ ಇತರರು ಇದ್ದರು.....................
ರಾಜ್ಯದಲ್ಲಿ 17 ಲಕ್ಷ ಎಕರೆ ಗೋಮಾಳ ಭೂಮಿ ಮಠಗಳಿಗೆ ಪರಭಾರೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಸಿಪಿಐ ಹೋರಾಡಿ, ಅಷ್ಟೂ ಜಾಗವನ್ನು ಉಳಿಸುವಲ್ಲಿ ಯಶಸ್ವಿಯಾಯಿತು. ರಾಜ್ಯದ ವಸತಿ ರಹಿತರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಲು 5 ಲಕ್ಷ ಎಕರೆ ಭೂಮಿ ಅಗತ್ಯವಿರುವುದನ್ನು ಸರ್ಕಾರ ಕಾಯ್ದಿರಿಸಲಿ.ಸಾತಿ ಸುಂದರೇಶ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ