ಭಾರತ ವಿಕಾಸ ಪರಿಷತ್ತಿನ ಪ್ರಾಂತ ಅಧ್ಯಕ್ಷ ಗುರುಮಾದಯ್ಯ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದಸರಾ ಹಬ್ಬದ ಪ್ರಯುಕ್ತ ಸಾಹಿತಿ ಡಾ. ರಾಜಶ್ರೀ ಅವರ ಸುಣ್ಣಘಟ್ಟ ಗ್ರಾಮದ ಬಳಿಯ ಗೌರಿಧಾಮ ನಿವಾಸದಲ್ಲಿ ಆಯೋಜಿಸಿದ್ದ ಗೊಂಬೆಗಳ ಪ್ರದರ್ಶನ ಗಮನ ಸೆಳೆಯಿತು.

ದೇವಾನುದೇವತೆಗಳ ಮೂರ್ತಿಗಳು, ಪೌರಾಣಿಕ ಸನ್ನಿವೇಶಗಳು ಹಾಗೂ ಸಾಂಪ್ರದಾಯಿಕ ಗೊಂಬೆಗಳನ್ನು ಸುಂದರವಾಗಿ ಜೋಡಿಸಿ ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಸಾಂಸ್ಕೃತಿಕ ಆಸಕ್ತರು ಗೊಂಬೆಗಳ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ರಾಜಶ್ರೀ ಮಾತನಾಡಿ, ದಸರಾ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸುವುದು ನಮ್ಮ ನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆ. ಗೊಂಬೆಗಳ ಪ್ರದರ್ಶನದಲ್ಲಿ ಪೌರಾಣಿಕ ಕಥೆಗಳು, ದೇವಾನುದೇವತೆಗಳ ಮಹಿಮೆ ಹಾಗೂ ನಮ್ಮ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬಹುದು. ಪ್ರತಿವರ್ಷ ತಮ್ಮ ಮನೆಯಲ್ಲಿ ಗೊಂಬೆಗಳ ಪ್ರದರ್ಶನ ಆಯೋಜಿಸಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಗೊಂಬೆಗಳ ಪ್ರದರ್ಶನ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಇಂತಹ ಆಚರಣೆಗಳು ಸಮಾಜದಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುತ್ತವೆ ಎಂದರು.

ಭಾರತ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಗೊಂಬೆಗಳ ಪ್ರದರ್ಶನ ನಮ್ಮ ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆ ಪ್ರತಿಬಿಂಬಿಸುತ್ತದೆ. ಇಂತಹ ಕಾರ್ಯಕ್ರಮಗಳು ಸಾಂಸ್ಕೃತಿಕ ಅಭಿರುಚಿ ಮತ್ತು ಕಲಾಸಕ್ತಿಯನ್ನು ಬೆಳೆಸುತ್ತವೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಭಾರತ ವಿಕಾಸ ಪರಿಷತ್ತಿನ ಪ್ರಾಂತ ಅಧ್ಯಕ್ಷ ಗುರುಮಾದಯ್ಯ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ರಾಜಶ್ರೀ ಪತಿ ಗೋಪಾಲಕೃಷ್ಣ, ಟಿ. ಚೆನ್ನಪ್ಪ, ಕರಿಯಪ್ಪ, ಮಮತಾ, ಯೋಗಾನಂದ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಚ.ಶಿ. ವೆಂಕಟೇಗೌಡ, ಕನಕನಗರ ಬಸವರಾಜು, ಕೂರಣಗೆರೆ ಕೃಷ್ಣಪ್ಪ, ಪೊಲೀಸ್ ರಾಮೇಗೌಡ, ಶ್ರೀನಿವಾಸ್, ಮಾಲತಿ ಸುರೇಶ್, ಎಂ.ಎಸ್ ಆಶಾಲತಾ, ಸೌಭಾಗ್ಯಮ್ಮ ಉಪಸ್ಥಿತರಿದ್ದರು.

ಪೊಟೋ೧೮ಸಿಪಿಟಿ೧: ಚನ್ನಪಟ್ಟಣದ ಸಾಹಿತಿ ಡಾ. ರಾಜಶ್ರೀ ಗೌರಿಧಾಮ ನಿವಾಸದಲ್ಲಿ ದಸರಾ ಹಬ್ಬದ ಪ್ರಯುಕ್ತ ಗೊಂಬೆಗಳ ಪ್ರದರ್ಶನ ಆಯೋಜಿಸಲಾಗಿತ್ತು.