ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಸ್ಫೋಟ

| Published : Mar 23 2024, 01:00 AM IST

ಸಾರಾಂಶ

ರಾಮನಗರ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪ್ರಾಧಿಕಾರಗಳ ನೇಮಕದಲ್ಲಿ ಆಗಿರುವ ಅನ್ಯಾಯದ ವಿರುದ್ಧ ದಲಿತ ಮುಖಂಡರು ಅಪಸ್ವರ ಎತ್ತುವ ಮೂಲಕ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ.

ರಾಮನಗರ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪ್ರಾಧಿಕಾರಗಳ ನೇಮಕದಲ್ಲಿ ಆಗಿರುವ ಅನ್ಯಾಯದ ವಿರುದ್ಧ ದಲಿತ ಮುಖಂಡರು ಅಪಸ್ವರ ಎತ್ತುವ ಮೂಲಕ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕೆಲ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಸಭೆ ನಡೆಸುವ ಮೂಲಕ ಪ್ರಾಧಿಕಾರಗಳ ಅಧಿಕಾರ ಹಂಚಿಕೆಯಲ್ಲಿ ಆಗಿರುವ ತಾರತಮ್ಯದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ. ಸುರೇಶ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಚ್‌.ಎ. ಇಕ್ಬಾಲ್ ಹುಸೇನ್ ಮತ್ತು ಎಚ್‌.ಸಿ.ಬಾಲಕೃಷ್ಣ ವಿರುದ್ಧವೂ ಕಿರಿಕಾರಿರುವ ದಲಿತ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯದಿಂದ ದೂರ ಉಳಿಯುವ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಅಹಿಂದ ವರ್ಗ ಹಿಂದಿನಿಂದಲೂ ಕಾಂಗ್ರೆಸ್‌ಗೆ ಜೊತೆ ಗಟ್ಟಿಯಾಗಿ ನಿಂತಿದೆ. ರಾಮನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಇಕ್ಬಾಲ್ ಹುಸೇನ್ ಅವರನ್ನು ಗೆಲವಿಗೆ ಈ ಸಮುದಾಯಗಳ ಕೊಡುಗೆ ದೊಡ್ಡದು. ಆದರೆ, ಪಕ್ಷದೊಳಗೆ ಸ್ಥಾನಮಾನ ಹಾಗೂ ಅಧಿಕಾರ ಹಂಚಿಕೆ ಮಾಡುವಾಗ ನಮ್ಮನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ.

ಮೂರು ಬಾರಿ ಸಂಸದರಾದರೂ ಡಿ.ಕೆ.ಸುರೇಶ್ ಅವರು ಪರಿಶಿಷ್ಟರ ಕಷ್ಟ-ಸುಖ ಆಲಿಸುವ ಪ್ರಯತ್ನ ಮಾಡಲಿಲ್ಲ. ಚುನಾವಣೆ ಬಂದಾಗ ದಲಿತರಿಗೆ ಹಣ ಬಿಸಾಕಿದರೆ ಕೆಲಸ ಮಾಡುತ್ತಾರೆ ಎಂಬ ಗುಲಾಮಿ ಮನಸ್ಥಿತಿಯಿಂದ ನಮ್ಮನ್ನು ನೋಡುತ್ತಾರೆ. ಪಡೆದ ಹಣಕ್ಕೆ ತಕ್ಕಂತೆ ಇವರಿಗೆ ಮತ ಹಾಕಿಸಿ ಗೆಲ್ಲಿಸಿದ್ದೇವೆ. ಆದರೆ, ಇವರು ಸೌಜನ್ಯಕ್ಕಾದರೂ ಒಂದು ಸ್ಥಾನಮಾನವನ್ನಾದರೂ ಕೊಡಬೇಡವೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ನಾವು ಸಾಮಾಜಿಕ ನ್ಯಾಯವನ್ನು ನಿರೀಕ್ಷೆ ಮಾಡಬಹುದು. ಅದೇ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಕೇಳಲು ಸಾಧ್ಯವೇ? ಸಾಮಾಜಿಕ ನ್ಯಾಯದ ಮಂತ್ರ ಜಪಿಸುವ ಕಾಂಗ್ರೆಸ್‌ನವರು, ತಮ್ಮನ್ನು ಅಧಿಕಾರಕ್ಕೆ ತಂದು ಕೂರಿಸಿದ ಸಮುದಾಯಗಳನ್ನು ಈ ಪರಿ ಕಡೆಗಣಿಸಿರುವುದು ಸರಿಯಲ್ಲ. ಈ ತಾರತಮ್ಯಕ್ಕೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲು ದಲಿತ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.22ಕೆಆರ್ ಎಂಎನ್ 11.ಜೆಪಿಜಿ

ರಾಮನಗರದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ನಲ್ಲಿನ ಪರಿಶಿಷ್ಟ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು