ಸಾರಾಂಶ
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಕೀಲ ಜಿ.ಶ್ರೀನಿವಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಬಾಂಗ್ಲಾದೇಶದ ಮೂಲದ ಸಲಾವುದ್ದೀನ್ ಶೋಯೇಬ್ ಚೌಧರಿ ಮತ್ತು ಅದಿತಿ ಘೋಷ್ ಎಂಬುವವರ ವಿರುದ್ಧ ಧರ್ಮಗಳ ನಡುವೆ ದ್ವೇಷ ಬಿತ್ತುವುದು, ಅಪಪ್ರಚಾರ, ಧರ್ಮಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?:
ವಕೀಲ ಜಿ.ಶ್ರೀನಿವಾಸ್ ನೀಡಿದ ದೂರಿನಲ್ಲಿ, ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಬಾಂಗ್ಲಾ ಮೂಲದ ಸಲಾವುದ್ದೀನ್ ಶೋಯೇಬ್ ಚೌಧರಿ ತಮ್ಮ ಖಾತೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕುರಿತು ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಅಂತರ್ ಧರ್ಮದ ಮದುವೆಯಾಗಿ ಭಾರತದ ಪೌರತ್ವ ಹೊಂದಿದ್ದಾರೆ. ಆದರೂ ಅವರು ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದಾರೆ. ಅಂತಯೇ ಸೋನಿಯಾ ಗಾಂಧಿ ಅವರನ್ನು ಪಾಕಿಸ್ತಾನದ ಐಎಸ್‌ಐ ಏಜೆಂಟ್ ರೀತಿ ಬಿಂಬಿಸಿ ಟ್ವಿಟ್ ಮಾಡಿದ್ದಾರೆ’ ಎಂದು ದೂರನಲ್ಲಿ ಆರೋಪಿಸಲಾಗಿದೆ.
ರಾಹುಲ್‌ನಿಂದ ಮಹಿಳೆ ಮೇಲೆ ಅತ್ಯಾಚಾರ:
ಮುಂದುವರೆದು, ‘ರಾಹುಲ್ ಗಾಂಧಿ ಅವರು ಅವರ ವಿದೇಶಿ ಸ್ನೇಹಿತರ ಜತೆಗೆ ಸೇರಿಕೊಂಡು ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೌರವಕ್ಕೆ ಧಕ್ಕೆಯಾಗುವ ರೀತಿ, ಸಮಾಜದ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಸಮಾಜದ ಶಾಂತಿ-ಸುವ್ಯವಸ್ಥೆ ಕದಡುವ ರೀತಿ ಟ್ವೀಟ್ ಮಾಡಿದ್ದಾರೆ’.
‘ಈ ಟ್ವಿಟನ್ನು ಅದಿತಿ ಘೋಷ್ ಎಂಬುವವರು ದಿ ಜೈಪುರ್ ಡಯಲಾಗ್ಸ್ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ತಲುಪುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ. ಹೀಗಾಗಿ ಈ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.