ಜನಪದ ಕಲೆಯನ್ನು ಬದುಕಾಗಿಸಿಕೊಂಡು, ಡೋಲಕ್ ವಾದನ ಹಾಗೂ ಚರ್ಮವಾದ್ಯ ತಯಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿಗ್ಗಾಂವಿಯ ಖ್ಯಾತ ಜಾನಪದ ಕಲಾವಿದ ಕಲ್ಲಪ್ಪ ಬಗರಿಕಾರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿರುವುದು ಕಲಾವಲಯದಲ್ಲಿ ಸಂತಸ ಮೂಡಿಸಿದೆ.

ಬಸವರಾಜ ಹಡಪದ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಜನಪದ ಕಲೆಯನ್ನು ಬದುಕಾಗಿಸಿಕೊಂಡು, ಡೋಲಕ್ ವಾದನ ಹಾಗೂ ಚರ್ಮವಾದ್ಯ ತಯಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿಗ್ಗಾಂವಿಯ ಖ್ಯಾತ ಜಾನಪದ ಕಲಾವಿದ ಕಲ್ಲಪ್ಪ ಬಗರಿಕಾರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿರುವುದು ಕಲಾವಲಯದಲ್ಲಿ ಸಂತಸ ಮೂಡಿಸಿದೆ.

ಇಂದಿನ ದಿನಮಾನಗಳಲ್ಲಿ ಅನೇಕ ಪ್ರಶಸ್ತಿಗಳು ಶಿಫಾರಸು, ರಾಜಕೀಯ ಪ್ರಭಾವ, ಜಾತಿ ಮಾನದಂಡ ಹಾಗೂ ಹಣದ ಪ್ರಭಾವಕ್ಕೆ ಒಳಗಾಗುತ್ತಿವೆ ಎಂಬ ಟೀಕೆಗಳ ನಡುವೆ, ಯಾವುದೇ ವಸೂಲಿ ಅಥವಾ ಪ್ರಭಾವಿ ಶಿಫಾರಸುಗಳಿಲ್ಲದೆ ನೈಜ ಕಲಾವಿದನೊಬ್ಬನ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಸಾಮಾಜಿಕವಾಗಿ ಹಿಂದುಳಿದ, ಅಲೆಮಾರಿ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಕಲ್ಲಪ್ಪ ಬಗರಿಕಾರ ಅವರು ತಮ್ಮ ಕಲಾ ಕೌಶಲ್ಯ, ನಿರಂತರ ಪರಿಶ್ರಮ ಹಾಗೂ ಜನಪದ ಕಲೆಯ ಮೇಲಿನ ಅಪಾರ ಪ್ರೀತಿಯಿಂದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಪರಿಚಯ ಪತ್ರದಲ್ಲಿನ ಕಲಾ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು, ನೈಜ ಪ್ರತಿಭೆ ಮತ್ತು ಕಲಾಸೇವೆಗೆ ಇಂದಿಗೂ ಮನ್ನಣೆ ದೊರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಡೋಲಕ್ ವಾದನದ ಮೂಲಕ ಜನಪದ ಪರಂಪರೆಯನ್ನು ಜೀವಂತವಾಗಿರಿಸುವ ಜತೆಗೆ, ಚರ್ಮವಾದ್ಯಗಳ ತಯಾರಿಕೆಯಲ್ಲಿಯೂ ಪರಿಣತಿ ಹೊಂದಿರುವ ಕಲ್ಲಪ್ಪ ಬಗರಿಕಾರ ಅವರ ಸಾಧನೆ ಗ್ರಾಮೀಣ ಕಲಾವಿದರಿಗೆ ಪ್ರೇರಣೆಯಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ತಮ್ಮ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಅವರ ಪರಿಶ್ರಮಕ್ಕೆ ರಾಜ್ಯಮಟ್ಟದ ಗೌರವ ಸಂದಿರುವುದು ಹೆಮ್ಮೆಯ ಸಂಗತಿಯಾಗಿದೆ.ನೈಜ ಕಲಾವಿದನ ಗುರುತಿಸುವಿಕೆಗೆ ಮೆಚ್ಚುಗೆ: ಕಲ್ಲಪ್ಪ ಬಗರಿಕಾರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಅಕಾಡೆಮಿಯ ಎಲ್ಲ ಸದಸ್ಯರಿಗೆ ತಾಲೂಕಿನ ಕಲಾವಿಧ ಬಳಗ ಹಾಗೂ ಕಲಾಭಿಮಾನಿಗಳು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಕಲ್ಲಪ್ಪ ಬಗರಿಕಾರ ಅವರ ಕಲಾ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಶಿಫಾರಸು ಮಾಡಿದ ಕಲಾವಿದ ಗದಿಗಯ್ಯ ಹಿರೇಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಸನಗೌಡ ಪಾಟೀಲ ಹಾಗೂ ಅಕಾಡೆಮಿ ಸದಸ್ಯ ಶಂಕ್ರಣ್ಣ ಕೊತಬಾಳ ಅವರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಶಸ್ತಿ ಎಂದರೆ ಕೇವಲ ಸನ್ಮಾನವಲ್ಲ, ಅದು ಕಲಾವಿದನ ಬದುಕಿನ ಹೋರಾಟ, ಪರಿಶ್ರಮ ಮತ್ತು ಕಲಾಸೇವೆಗೆ ದೊರೆಯುವ ಮಾನ್ಯತೆ, ಈ ನಿಟ್ಟಿನಲ್ಲಿ ಕಲ್ಲಪ್ಪ ಬಗರಿಕಾರ ಅವರಿಗೆ ಸಂದಿರುವ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯು ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರಿಗೆ ಹೊಸ ಭರವಸೆ ಮೂಡಿಸಿದ್ದು, ಜನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.

ತಬ್ಬಲಿ ಕಲಾವಿದನಿಗೆ ನನ್ನ ಅಧಿಕಾರ ಅವಧಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದು ನನಗೆ ಅತ್ಯಂತ ಸಂತಸವೆನಿಸಿದೆ. ಜನಪದ ಆಲಿಸಿ ಆನಂದಿಸುವುದು ಒಂದೆಡೆಯಾದರೆ ಆ ಜನಪದ ಆನಂದಕ್ಕೆ ಕಾರಣವಾದವರನ್ನು ಗುರುತಿಸುವುದು ಸವಾಲಿನ ಕಾರ್ಯ, ಅಂತಹ ತೆರೆಮರೆಯ ಕಲಾವಿದನಾಗಿ ತಬ್ಬಲಿ ಕಲಾವಿದನನ್ನು ಗೌರವಿಸಿರುವುದು ನನ್ನ ಸೌಭಾಗ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಹೇಳಿದರು.

ಅಪರೂಪದ ಬಡ ಕಲಾವಿದನಾಗಿರುವ ಕಲ್ಲಪ್ಪ ಬಗರಿಕಾರ ಬಡವನಾದರೂ ತನ್ನ ಕಲಾಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ವ್ಯಕ್ತಿ, ನಿಸ್ವಾರ್ಥ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಸೇವೆ ಮಾಡುವ ಪ್ರಾಮಾಣಿಕ ಬಡ ಕಲಾವಿದನಾಗಿದ್ದಾನೆ, ಸರ್ಕಾರ ಇಂತಹ ತೆರೆಮರೆಯ ಕಲಾವಿದರನ್ನು ಇನ್ನು ಹೆಚ್ಚು ಗುರುತಿಸುವ ಕಾರ್ಯ ಮಾಡಬೇಕು ಎಂದು 2020ರ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದ ಬಸವರಾಜ ಶಿಗ್ಗಾಂವಿ ಹೇಳಿದರು.