ನಿವೇಶನ ಹಕ್ಕುಪತ್ರಕ್ಕೆ ಆಗ್ರಹಿಸಿ ಗ್ರಾಪಂ ಎದುರು ಅಹೋರಾತ್ರಿ ಧರಣಿ

| Published : Nov 20 2024, 12:36 AM IST

ಸಾರಾಂಶ

ನಿವೇಶನರಹಿತರಿಗೆ ಮಂಜೂರು ಮಾಡಿರುವ ಭೂಮಿ ಹದ್ದು ಬಸ್ತು ಮಾಡಿ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿ ಎದುರು ವಿವಿಧ ಗ್ರಾಮಗಳ ನಿವೇಶನ ರಹಿತರು ಅಹೋರಾತ್ರಿ ಧರಣಿ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಿವೇಶನರಹಿತರಿಗೆ ಮಂಜೂರು ಮಾಡಿರುವ ಭೂಮಿ ಹದ್ದು ಬಸ್ತು ಮಾಡಿ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿ ಎದುರು ವಿವಿಧ ಗ್ರಾಮಗಳ ನಿವೇಶನ ರಹಿತರು ಅಹೋರಾತ್ರಿ ಧರಣಿ ಆರಂಭಿಸಿದರು.

ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಹುಲಿವಾನ, ಚಾಮಲಾಪುರ, ಎಸ್‌.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮಗಳ ಜನರು ನಿವೇಶನದ ಹಕ್ಕು ಪತ್ರ ವಿತರಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹುಲಿವಾನ ಗ್ರಾಪಂ ವ್ಯಾಪ್ತಿಯಲ್ಲಿ ಸ. ನಂ. 44/ಪಿ14 ರಲ್ಲಿ 8.09 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು 8 ವರ್ಷಗಳ ಹಿಂದೆ ಮಂಜೂರು ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹುಲಿವಾನ, ಚಾಮಲಾಪುರ, ಎಸ್‌.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಸಭೆಯಲ್ಲಿ ಸುಮಾರು 285 ಜನರು ನಿವೇಶನ ಪಡೆಯಲು ಅರ್ಹರಿದ್ದಾರೆ ಎಂದು ತೀರ್ಮಾನಿಸಿ ನಿವೇಶನ ಹಂಚಿಕೆ ಮಾಡಲು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ಆದರೆ, ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೇಶನ ಹಂಚಿಕೆ ಮಾಡಲು ಮಂಜೂರಾಗಿರುವ 8.09 ಎಕರೆ ಭೂಮಿಯನ್ನು ಇದುವರೆಗೂ ಅಳತೆ ಮಾಡಿ ಹದ್ದುಬಸ್ತು ಮಾಡಿಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿಲ್ಲ. ನಿವೇಶನ ರಹಿತರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ತುರ್ತಾಗಿ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹುಲಿವಾನ ಗ್ರಾಮದ ಜನತಾ ಕಾಲೋನಿಯಲ್ಲಿ ಪರಿಶಿಷ್ಟರು ಹಾಗೂ ದಲಿತೇತರ 200 ಕುಟುಂಬ ವಾಸ ಮಾಡುತ್ತಿದ್ದು, ಆದರೆ, ಇಲ್ಲಿನ ಜನತೆಗೆ ಯಾರಾದರೂ ಸಾವನ್ನಪ್ಪಿದ್ದರೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಇಲ್ಲ. ಈಗ ಮೃತಪಟ್ಟವರನ್ನು ವಿಶ್ವೇಶ್ವರಯ್ಯ ನಾಲೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಸ್ಮಶಾನಕ್ಕೆ ಗುರುತಿಸಿದ್ದ ಜಾಗವನ್ನು ಪಟ್ಟಭದ್ರರು ಅತಿಕ್ರಮಿಸಿದ್ದು, ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣ ಇತ್ಯರ್ಥಪಡಿಸಿ ಗ್ರಾಮದ ಜನರಿಗೆ ಸ್ಮಶಾನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಆರ್ ಕೃಷ್ಣ, ತಾಲೂಕು ಅಧ್ಯಕ್ಷ ಅಂಬೂಜಿ, ಕೆ. ಎಸ್. ಶಿವಲಿಂಗಯ್ಯ, ಉಮೇಶ್, ವರಲಕ್ಷ್ಮೀ, ಶಿವಮಾದು ಭಾಗವಹಿಸಿದ್ದರು.