ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ, ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕೆಂದು ಖ್ಯಾತ ಚಿತ್ರನಟ ಹಾಗೂ ನಿರ್ಮಾಪಕ ಸೋನು ಸೂದ್ ಮಕ್ಕಳಿಗೆ ಕರೆ ನೀಡಿದರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುನಾನಕ ಶಾಲೆಯ 50ನೇ ವರ್ಷ ಪೂರೈಸಿರುವ ಪ್ರಯುಕ್ತ ಭಾನುವಾರ ಬೆಳಿಗ್ಗೆ ಶಾಲೆಯಿಂದ ಆಯೋಜಿಸಿದ ‘ಬೀದರ ಮ್ಯಾರಥಾನ್’ಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸಂದರ್ಭದಲ್ಲಿ ಆನ್‌ಲೈನ್ ಗೇಮ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸಾಧನೆಯ ಗುರಿಯೆಡೆಗೆ ಸಾಗಬೇಕು. ಕನಸಿನ ಬೆನ್ನತ್ತಿ ಭವಿಷ್ಯ ರೂಪಿಸಿ ಕೊಳ್ಳಬೇಕೆಂದರು.ಸಾಧನೆ ಮಾಡಬೇಕು ಎನಿಸಿದರೆ ಇಂದೇ ಉತ್ಸಾಹದಿಂದ ಪ್ರಾರಂಭ ಮಾಡಬೇಕು. ನಾಳೆಯವರೆಗೆ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕೆಂದರು.ಕೋವಿಡ್ ಸಂದರ್ಭದಲ್ಲಿ ನಾವು ಮಾಡಿದ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ. ಗುರುನಾನಕ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಲಬೀರಸಿಂಗ್ ಹಾಗೂ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಅವರು ಆದೇಶ ಮಾಡಿದರೆ ನಮ್ಮ ಜನಸೇವೆ ಬೀದರ್ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿ ಇಂದಿನ ಬೀದರ್ ಮ್ಯಾರಥಾನ್‌ನಲ್ಲಿ 6 ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅತ್ಯಂತ ಉತ್ಸಾಹದಿಂದ ಯಶಸ್ವಿಯಾಗಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸೋನು ಸೂದ್ ಅವರು ಬೀದರ್ಗೆ ಬಂದಿದ್ದು ಖುಷಿ ಎನಿಸಿದೆ. ಅವರ ಸಮಾಜಮುಖಿ ಕಾರ್ಯಗಳು ಮತ್ತು ಆದರ್ಶಗಳು ಇತರರಿಗೆ ಮಾದರಿಯಾಗಿವೆ. ತನ್ನ ಹಿಂದೆ ಯಾರೋ ಇದ್ದಾರೆ ಎಂದು ಬೆಳೆಯದೆ, ಸ್ವಯಂ ಆತ್ಮವಿಶ್ವಾಸದಿಂದ ಮತ್ತು ಭರವಸೆಯಿಂದ ಸಾಧನೆ ಮಾಡಬೇಕು. ಸಾಧನೆಗೆ ಸಂಕ್ಷಿಪ್ತ ಮಾರ್ಗ ಹುಡುಕದೆ ಸತತ ಪರಿಶ್ರಮ ಮತ್ತು ಸಮಯಪಾಲನೆಯಿಂದ ಮುಂದೆ ಬರಬೇಕೆಂದು ಮಕ್ಕಳಿಗೆ ಹುರಿದುಂಬಿಸಿದರು. ಇದೇ ವೇಳೆ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಮ್ಯಾರಥಾನ್ ನಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿಜೇತರಿಗೆ ಮೆಡಲ್, ಟ್ರೋಫಿ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರದೀಪ ಗುಂಟಿ, ಪುನೀತ್ ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.