ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ಘೋಷ್ಸಹಿತ ಪಥಸಂಚಲನ ಗಮನ ಸೆಳೆಯಿತು. ಪಥಸಂಚಲನ ಪ್ರಯುಕ್ತ ನಗರ ಕೇಸರಿಮಯವಾಗಿತ್ತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ಘೋಷ್ಸಹಿತ ಪಥಸಂಚಲನ ಗಮನ ಸೆಳೆಯಿತು. ಪಥಸಂಚಲನ ಪ್ರಯುಕ್ತ ನಗರ ಕೇಸರಿಮಯವಾಗಿತ್ತು.ಸಂಜೆ 4 ಗಂಟೆ ವೇಳೆಗೆ ನಗರದ ಬಸವೇಶ್ವರ ಮೈದಾನದಿಂದ ಎರಡು ಪ್ರತ್ಯೇಕ ಮಾರ್ಗದ ಘೋಷ ಪಥಸಂಚಲನಗಳು ಹೊರಟವು. ಪ್ರತಿ ಮಾರ್ಗದಲ್ಲಿ ತಲಾ ಮೂರು ಘೋಷ್ ವಾಹಿನಿಗಳಿದ್ದವು. ಪಥಸಂಚಲನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ನಗರದಾದ್ಯಂತ ಕೇಸರಿ ಕಮಾನುಗಳು, ಬಂಟಿಂಗ್ಸ್, ಫ್ಲೆಕ್ಸ್ ಗಳು ಗಮನಸೆಳೆದವು. ಪಥಸಂಚಲನ ಆಗಮಿಸುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಪಥಸಂಚಲನ ಸ್ವಾಗತಿಸಿದರು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಮಿಂಚಿದರು.
ಎರಡು ಮಾರ್ಗಗಳ ಪಥಸಂಚಲನ ಮುಖಾಮುಖಿಯಾಗುವ ಸನ್ನಿವೇಶ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು. ವೃತ್ತದ ಸುತ್ತಲಿರುವ ಬೃಹತ್ ಕಟ್ಟಡಗಳುದ್ದಕ್ಕೂ ಜನರ ದಂಡು ಕಂಡು ಬಂದಿತು. ಜನ ಪಥಸಂಚಲನದ ಮಧ್ಯೆ ಬಾರದಂತೆ ತಡೆಯಲು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು.ಎಸ್ಪಿ ಸಿದ್ದಾರ್ಥ ಗೋಯಲ್, ಎಎಸ್ಪಿ ಎಂ.ಜಗದೀಶ, ಡಿವೈಎಸ್ಪಿ ಗಜಾನನ ಸುತಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಎರಡೂ ಮಾರ್ಗಗಳಲ್ಲಿ ಸಂಚರಿಸಿದ ಪಥಸಂಚಲನ: ಮಾರ್ಗ-1ರ ಪಥಸಂಚಲನ ಬವಿವ ಸಂಘದ ಮೈದಾನದಿಂದ ಆರಂಭಗೊಂಡು ಕರವೀರಮಠ, ಶಿರೂರ ಅಗಸಿ, ಕಿಣಗಿ ಕ್ರಾಸ್, ಹುಂಡೇಕಾರಗಲ್ಲಿ ಕ್ರಾಸ್, ಚರಂತಿಮಠ, ಮಾರವಾಡಿಗಲ್ಲಿ ಕ್ರಾಸ್, ಜವಳಿ ಚೌಕ್, ಶಾರದಾ ಪ್ರೆಸ್, ಕುಂಬಾರ ಮಡು, ಗಜಾನನ ಚೌಕ, ಕೊಪ್ಪ ದವಾಖಾನೆ, ಶಿವಾಜಿ ವೃತ್ತ, ಹಳೆ ಅಂಚೆ ಕಚೇರಿ, ಶ್ರೀವೆಂಕಟೇಶ್ವರ ದೇವಸ್ಥಾನ, ವಲ್ಲಭಬಾಯ ಚೌಕ್, ಎಂಜಿ ರಸ್ತೆ, ಬಸವೇಶ್ವರ ವೃತ್ತದಲ್ಲಿ ಮತ್ತೊಂದು ಮಾರ್ಗದ ಪಥಸಂಚಲನದೊಂದಿಗೆ ಸಂಗಮಗೊಂಡು ಬಸವೇಶ್ವರ ಮೈದಾನಕ್ಕೆ ಸಾಗಿತು.ಮಾರ್ಗ-2ರ ಪಥಸಂಚಲನ ಬಸವೇಶ್ವರ ಕಾಲೇಜು ಮೈದಾನ, ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ವೃತ್ತ, ಶಾಂತಿನಗರ ಕ್ರಾಸ್, ಹಳೆ ಐಬಿ, ಹರಣಶಿಖಾರಿ ಗಲ್ಲಿ, ವಾಸವಿ ಚಿತ್ರ ಮಂದಿರ, ದುರ್ಗಾ ನಗರ ಕ್ರಾಸ್, ಶಾರದಾ ಲಾಡ್ಜ್, ಹೊಳೆ ಆಂಜನೇಯ ದೇವಸ್ಥಾನ, ಬಸವೇಶ್ವರ ವೃತ್ತದ ಮೂಲಕ ಸಾಗಿ ಬಸವೇಶ್ವರ ಮೈದಾನದಲ್ಲಿ ಸಮಾವೇಶಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರ-ಬಾಗಲಕೋಟೆ ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ ಪಾಲ್ಗೊಂಡಿದ್ದರು, ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದ ಮುಖ್ಯ ವಕ್ತಾರರಾಗಿ ಮಾತನಾಡಿದರು. ಸ್ವಯಂ ಸೇವಕರು ಶಾರೀರಿಕ ಪ್ರದರ್ಶನ ನೀಡಿ ಗಮನ ಸೆಳೆದರು.ಸಂಸದರಾದ ಪಿ.ಸಿ.ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ತಿನ ಸದಸ್ಯ ಪಿ.ಎಚ್.ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ನಿಕಟಪೂರ್ವ ಜಿಲ್ಲಾ ಸಂಘಚಾಲಕ ಸಿ.ಎಸ್.ಪಾಟೀಲ ಇತರರು ಪಥಸಂಚಲನ ವೀಕ್ಷಿಸಿದರು.