ಸಾರಾಂಶ
ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಪುರಾಣ, ಪುಣ್ಯಗಳ ಕಾಲದಿಂದಲೂ ಈ ಸಂಬಂಧವನ್ನು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚಿಗೆ ವಿದ್ಯಾರ್ಥಿಗಳು ಗುರುವಂದನೆಯ ಸಲ್ಲಿಸುವ ಮೂಲಕ ಈ ಸಂಬಂಧಕ್ಕೆ ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ಸಂಗತಿ ಎಂದು ನಿವೃತ್ತ ಉಪನ್ಯಾಸಕ ಪಿ.ಆರ್. ಮಠ ಹೇಳಿದರು.
ಹಾನಗಲ್ಲ: ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಪುರಾಣ, ಪುಣ್ಯಗಳ ಕಾಲದಿಂದಲೂ ಈ ಸಂಬಂಧವನ್ನು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚಿಗೆ ವಿದ್ಯಾರ್ಥಿಗಳು ಗುರುವಂದನೆಯ ಸಲ್ಲಿಸುವ ಮೂಲಕ ಈ ಸಂಬಂಧಕ್ಕೆ ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ಸಂಗತಿ ಎಂದು ನಿವೃತ್ತ ಉಪನ್ಯಾಸಕ ಪಿ.ಆರ್. ಮಠ ಹೇಳಿದರು.ಅಕ್ಕಿಆಲೂರಿನ ಕುಮಾರ ಮಹಾಶಿವಯೋಗಿ ಕಲ್ಯಾಣ ಮಂಟಪದಲ್ಲಿ ೧೯೯೯ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸಮಾರಂಭ ಹಾಗೂ ಸ್ನೇಹ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಒಂದೆಡೆ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿದೆ ಎನ್ನುವ ನೋವಿನ ಮಧ್ಯೆಯೂ ಕೆಲ ವಿದ್ಯಾರ್ಥಿಗಳು ತಿದ್ದಿ, ತೀಡಿ ತಮ್ಮ ಬದುಕು ರೂಪಿಸಿದ ಗುರುಗಳಿಗೆ ಗುರುವಂದನೆ ಸಮಾರಂಭಗಳ ಮೂಲಕ ಗೌರವ ಸಲ್ಲಿಸುತ್ತಿರುವುದು ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಿದೆ ಎಂದು ಹೇಳಿದ ಅವರು, ಇಂಥ ಕಾರ್ಯಕ್ರಮಗಳು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯ ಉಳಿವಿಗೆ ಸಹಕಾರಿಯಾಗಲಿವೆ. ನಮ್ಮ ಬಳಿ ವಿದ್ಯೆ ಕಲಿತು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಶಿಷ್ಯರು ಗುರುವನ್ನು ಮೀರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಪ್ರಾಚಾರ್ಯ ಮಹಾವೀರ ದೊಡ್ಡಮನಿ ಮಾತನಾಡಿ, ಕಲಿಸಿದ ಗುರುವಿಗೆ ಗೌರವಿಸಿ, ಕಲಿಕೆಯ ದಿನಗಳನ್ನು ನೆನಪಿಸಿದ್ದು ಖುಷಿ ತಂದಿದೆ. ಜೀವನದಲ್ಲಿ ಉನ್ನತವಾದುದ್ದನ್ನು ಸಾಧಿಸಬೇಕಾದರೆ ತಾಳ್ಮೆ, ಪರಿಶ್ರಮ ಮುಖ್ಯ. ನೈತಿಕತೆ, ಪ್ರಾಮಾಣಿಕತೆ ಇದ್ದರೆ ಬಹುಬೇಗ ಸಾಧನೆ ಸಿದ್ಧಿಯಾಗಲಿದೆ. ಅನ್ನದಾನ ಒಂದು ಹೊತ್ತಿನ ಹಸಿವು ನೀಗಿಸಿದರೆ ವಿದ್ಯಾದಾನ ಭವಿಷ್ಯ ರೂಪಿಸಿ ಬದುಕು ಕಟ್ಟಿಕೊಡಲಿದೆ. ಇಂಥ ಗುರುವಂದನಾ ಕಾರ್ಯಕ್ರಮಗಳು ಸಂಧ್ಯಾ ಕಾಲದಲ್ಲಿರುವ ಶಿಕ್ಷಕರ ಆಯುಷ್ಯ ವೃದ್ಧಿಸಿ, ಜೀವನೋತ್ಸಾಹ ತುಂಬಲಿವೆ ಎಂದರು. ಬಾದಾಮಿ ತಾಲೂಕಿನ ಬಿಇಒ ಆರ್.ಎನ್. ಹುರುಳಿ, ನಿವೃತ್ತ ಶಿಕ್ಷಕರಾದ ಕೆ.ಎ. ಬಂಕಾಪೂರ, ಎಸ್.ಎಲ್. ಭೋಗಾರ, ಯು.ಎಫ್. ಬಾರ್ಕಿ, ಬಿ.ಐ.ಶರಣ್ಣನವರ, ಕೆ.ಐ. ಹಂಚಿನಮನಿ, ಕಸ್ತೂರಿಬಾಯಿ ಮುತ್ತಿನಕಂತಿಮಠ, ಎಂ.ಎಸ್. ಹಿರೇಮಠ, ವಸಂತ ಚಿಕ್ಕಣ್ಣನವರ, ಶಿವನಗೌಡ ಪಾಟೀಲ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.ಅರ್ಥಪೂರ್ಣ ಗುರುವಂದನಾ: ಗುರುಗಳನ್ನು ಕಡೆಗಣಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಮಾರ್ಗದರ್ಶನ ನೀಡಿದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ಸುಮಾರು ೪೦ಕ್ಕೂ ಹೆಚ್ಚು ಶಿಕ್ಷಕರು, ಉಪನ್ಯಾಸಕರನ್ನು ಆಹ್ವಾನಿಸಿ ಗುರುವಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಪ್ರೀತಿಯ ಶಿಷ್ಯ ಬಳಗ ನೆಚ್ಚಿನ ಗುರುಗಳ ಮೇಲೆ ಪುಷ್ಪವೃಷ್ಟಿ ಗರೆದು ಸಮಾರಂಭಕ್ಕೆ ಆತ್ಮೀಯ ಸ್ವಾಗತ ನೀಡಿದ್ದು ಗಮನ ಸೆಳೆಯಿತು. ಬಹಳ ವರ್ಷಗಳ ನಂತರ ತಮ್ಮ ಶಿಷ್ಯರನ್ನು ಕಂಡು ಗುರುಗಳು ಖುಷಿಪಟ್ಟರು. ಇನ್ನೊಂದೆಡೆ ಬರೋಬ್ಬರಿ ೨೫ ವರ್ಷಗಳ ನಂತರ ದೇಶ, ವಿಶೇಷಗಳಲ್ಲಿ ನೆಲೆಸಿದ್ದ ಗೆಳೆಯರೆಲ್ಲ ಸೇರಿ, ಸವಿ ನೆನಪುಗಳನ್ನು ಮೆಲಕು ಹಾಕಿದರು.