ದಾಬಸ್‍ಪೇಟೆ: ಆದಿಚುಂಚನಗಿರಿ ಮಠಕ್ಕೂ ನೆಲಮಂಗಲ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ಈ ಭಾಗದ ಭಕ್ತರು ಶ್ರೀ ಮಠಕ್ಕೆ ಅಪಾರ ಕೊಡುಗೆ ನೀಡಿ, ಮಠದ ಸೇವಾ ಕಾರ್ಯದಲ್ಲಿ ಸಹಕರಿಸುತ್ತಿರುವುದು ಸಂತೋಷದ ಸಂಗತಿ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು

ದಾಬಸ್‍ಪೇಟೆ: ಆದಿಚುಂಚನಗಿರಿ ಮಠಕ್ಕೂ ನೆಲಮಂಗಲ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ಈ ಭಾಗದ ಭಕ್ತರು ಶ್ರೀ ಮಠಕ್ಕೆ ಅಪಾರ ಕೊಡುಗೆ ನೀಡಿ, ಮಠದ ಸೇವಾ ಕಾರ್ಯದಲ್ಲಿ ಸಹಕರಿಸುತ್ತಿರುವುದು ಸಂತೋಷದ ಸಂಗತಿ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯಲ್ಲಿ ಆದಿಚುಂಚನಗಿರಿ ಮಠ ಹಮ್ಮಿಕೊಂಡಿರುವ ಗುರುವಂದನೆ, ಭಕ್ತರ ಮನೆಗಳ ಭೇಟಿ ಮತ್ತು ಸಾಮೂಹಿಕ ಸತ್ಸಂಗದ ಅಂಗವಾಗಿ ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಯುವ ಜನತೆಗೆ ಸಂಸ್ಕಾರದ ಅರಿವು ಮೂಡಿಸುವುದು ಅನಿವಾರ್ಯ. ಶ್ರದ್ಧೆಯಿಂದ ಭಕ್ತಿ, ಜ್ಞಾನ ಸಂಪಾದನೆ ಪಡೆಯಬಹುದು. ಇಂದಿನ ಆಧುನಿಕ ಜೀವನ ಶೈಲಿ ನಮ್ಮ ಸಂಸ್ಕಾರವನ್ನು ಮರೆಸುವಂತಿದೆ. ರಾಮಾಯಣದಲ್ಲಿ ಆಂಜನೇಯ ರಾಮನ ಜಪದೊಂದಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯಿಂದ ಸಾಧನೆಗೈದು ಇಂದು ಪ್ರತಿ ಗ್ರಾಮದಲ್ಲಿಯೂ ನೆಲೆಸುವಂತ ವ್ಯಕ್ತಿತ್ವವಾಗಿದೆ. ಇಂದಿನ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳಿಸುವ ಮೊದಲೇ ಶ್ರದ್ಧಾಭಕ್ತಿಯ ಅರಿವು ಮೂಡಿಸಬೇಕು ಎಂದರು.

ಕಳೆದ 2008ರಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದಲ್ಲಿದ್ದ ವೇಳೆ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಭಾಗಕ್ಕೆ ಬಂದು ಶ್ರೀಮಠಕ್ಕೆ ಕಾಣಿಕೆ, ದವಸ ಧಾನ್ಯ ಸೇರಿದಂತೆ ದಾನದ ರೂಪದಲ್ಲಿ ಕೆಲ ವಸ್ತುಗಳನ್ನು ಪಡೆಯಲಾಗುತ್ತಿತ್ತು ಎಂದು ಹೇಳಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ನಾಡನ್ನು ಕಟ್ಟಿದ್ದ ದೊರೆ ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸಿಮೀತವಲ್ಲ. ಬೆಂಗಳೂರು ನಿರ್ಮಾಣ ಮಾಡಿ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತೆ 64 ಪೇಟೆಗಳು ನಿರ್ಮಾಣ ಮಾಡಿದ್ದಾರೆ. ಶ್ರೀಮಠವೂ ಸಾಕಷ್ಟು ವಿಶಾಲವಾಗಿ ಬೆಳೆದಿದ್ದು ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ನೆಲಮಂಗಲ ಸಮೀಪದ ನಗರೂರಲ್ಲಿ ಆದಿಚುಂಚನಗಿರಿ ಮಠ ಶಾಲಾ ಕಾಲೇಜು, ವಿದ್ಯಾರ್ಥಿನಿಲಯ, ಆಯುರ್ವೇದ, ಮೆಡಿಕಲ್ ಕಾಲೇಜು ಸೇರಿದಂತೆ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ತ್ಯಾಮಗೊಂಡ್ಲುವಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀಗಳಿಗೆ ಪಾದಪೂಜೆ ಹಾಗೂ ಗುರು ಕಾಣಿಕೆ ನೀಡಲಾಯಿತು. ತೋಟನಹಳ್ಳಿ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ, ತ್ಯಾಮಗೊಂಡ್ಲುವಿನ ಆಂಜನೇಯಸ್ವಾಮಿ ದೇವಾಲಯ, ಬಳ್ಳಗೆರೆ, ಹನುಮಂತೇಗೌಡಪಾಳ್ಯದ ಅಂಜನೇಯಸ್ವಾಮಿ ದೇವಾಲಯ ಹಾಗೂ ಮುಖಂಡರ ಮನೆಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಎನ್‌ಡಿಎ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ಬೀರಗೊಂಡನಹಳ್ಳಿ ಬೈರೇಶ್, ಕರವೇ ಅಧ್ಯಕ್ಷ ವೀರಸಾಗರ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಶ್, ಕಾರೇಹಳ್ಳಿ ಗುರುಪ್ರಕಾಶ್, ನರಸೀಪುರ ನಾಗರಾಜು, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ಸಿದ್ದರಾಜು, ಚಂದ್ರಪ್ಪ, ಹನುಮಂತರಾಯಪ್ಪ, ಅಶ್ವಥ್ ಗೌಡ, ನವೀನ್, ಕಾರೇಹಳ್ಳಿ ಗುರುಪ್ರಕಾಶ್, ರಂಗಸ್ವಾಮಿ, ಮುನಿರಾಜು ಇತರರು ಉಪಸ್ಥಿತರಿದ್ದರು.

ಪೋಟೋ 4 :

ತ್ಯಾಮಗೊಂಡ್ಲು ಪಟ್ಟಣದಲ್ಲಿ ಆದಿಚುಂಚನಗಿರಿ ಮಠ ಹಮ್ಮಿಕೊಂಡಿದ್ದ ಗುರುವಂದನೆ, ಭಕ್ತರ ಮನೆಗಳಿಗೆ ಭೇಟಿ ಮತ್ತು ಸಾಮೂಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಿದ್ದರು.