ಸಾರಾಂಶ
ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ । ತಹಸೀಲ್ದಾರ್ ಗೆ ಮನವಿ
ಕನ್ನಡಪ್ರಭವಾರ್ತೆ, ನರಸಿಂಹರಾಜಪುರಶಿವಮೊಗ್ಗ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಇಡೀ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನವಾಗಿದ್ದು ಇದನ್ನು ಬ್ರಾಹ್ಮಣ ಮಹಾ ಸಭಾ ಖಂಡಿಸುತ್ತದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಅನಂತಪದ್ಮನಾಭ ತಿಳಿಸಿದರು.
ಬುಧವಾರ ತಾಲೂಕು ಕಚೇರಿ ಎದುರು ತಾಲೂಕು ಬ್ರಾಹ್ಮಣ ಮಹಾ ಸಭಾ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬ್ರಾಹ್ಮಣರು ವೇದಗಳ ಕಾಲದಿಂದಲೂ ಸಂಸ್ಕೃತಿ, ಸಂಸ್ಕಾರ ನಡೆಸಿಕೊಂಡು ಬಂದಿದ್ದಾರೆ. ಪ್ರಧಾನವಾಗಿ ಗಾಯಿತ್ರಿ ದೇವಿ ಉಪಾಸನೆ ಮಾಡುತ್ತಿದ್ದಾರೆ. ವಟುವಿಗೆ ಉಪನಯನ ಸಂದರ್ಭದಲ್ಲಿ ಗಾಯಿತ್ರಿಮಂತ್ರ ಉಪದೇಶ ಮಾಡಿ ಜನಿವಾರ ಹಾಕಲಾಗುತ್ತದೆ. ಜನಿವಾರ ತೆಗೆಯಲು ಯಾರಿಗೂ ಅಧಿಕಾರವಿಲ್ಲ. ಜೀವನ ಶೈಲಿಯಲ್ಲೇ ಬ್ರಾಹ್ಮಣರು ಅಗ್ರ ಪಂಕ್ತಿ ಯಲ್ಲಿ ಗುರುತಿಸಿಕೊಂಡಿದ್ದಾರೆ. ಯಾರನ್ನೋ ಖುಷಿ ಪಡಿಸಲು ಜನಿವಾರ ತೆಗಿಸಲಾಗಿದೆ. ಇದನ್ನು ಬ್ರಾಹ್ಮಣ ಸಮಾಜ ಖಂಡಿಸುತ್ತದೆ. ಈ ಪ್ರಕರಣದಲ್ಲಿ ಸರ್ಕಾರ ಕೆಲವರನ್ನು ಅಮಾನತ್ತು ಪಡಿಸಿದ್ದಾರೆ. ಆದರೆ, ಇದರ ಮೂಲ ಎಲ್ಲಿ ಎಂದು ಹುಡುಕಿ ತನಿಖೆ ಮಾಡಬೇಕು. ಇಡೀ ರೀತಿ ಪ್ರಕರಣ ಮುಂದುವರಿದರೆ ಬ್ರಾಹ್ಮಣರ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ಹಿಂದೂ ಧರ್ಮದಲ್ಲಿ 16 ಸಂಸ್ಕಾರವಿದ್ದು ಇದರಲ್ಲಿ ಜನಿವಾರವೂ ಒಂದಾಗಿದೆ.ಲೋಕದ ಉದ್ದಾರಕ್ಕಾಗಿ ಬ್ರಾಹ್ಮಣರು ಜಪ ಮಾಡುತ್ತಾರೆ. ಜಪ ಮಾಡಲು ಜನಿವಾರವೇ ಪವಿತ್ರ ಸಾಧನವಾಗಿದೆ.ಇದನ್ನು ಮುಟ್ಟುವ ಅಧಿಕಾರ ಯಾರಿಗೂ ಇಲ್ಲ.ಇದೊಂದು ದುರ್ಘಟನೆ ಎಂದರು.
ತಾಲೂಕು ಬ್ರಾಹ್ಮಣ ಸಭಾದ ಉಪಾಧ್ಯಕ್ಷೆ ಅನ್ನಪೂರ್ಣ ಮಾತನಾಡಿ, ಸಮಾಜ ನಂಬಿಕೆ ಆಧಾರದ ಮೇಲೆ ನಿಂತಿದೆ. ಬ್ರಾಹ್ಮಣರಿಗೆ ಜನಿವಾರದ ಮೇಲೆ ನಂಬಿಕೆ ಇದೆ. ಹಿಂದೂ ಧರ್ಮ ಉಳಿಯಬೇಕಾದರೆ ಬ್ರಾಹ್ಮಣರ ಸಂಸ್ಕಾರ, ಸಂಪ್ರದಾಯ ಉಳಿಯಬೇಕು ಎಂದರು.ತಾಲೂಕು ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಎಂ.ವಿ.ರಾಜೇಂದ್ರ ಕುಮಾರ್ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರು 27 ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಬ್ರಾಹ್ಮಣ ಮಹಾ ಸಭಾದಿಂದ ಖಂಡಿಸುತ್ತೇವೆ. ಈಗ ಕಾಶ್ಮೀರದಲ್ಲಿ ಆಗಿರುವ ಘಟನೆ ಮುಂದೆ ಪಶ್ಚಿಮ ಬಂಗಾಳದಲ್ಲೂ ನಡೆಯಬಹುದು. ಉಗ್ರರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದರು.
ಜನಿವಾರ ತೆಗೆಸಿದ ಸಿಬ್ಬಂದಿಗೆ ದಿಕ್ಕಾರ ಕೂಗುತ್ತಾ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸುರೇಶ್, ಖಜಾಂಚಿ ಅಭಿಷೇಕ್, ಬ್ರಾಹ್ಮಣ ಸಮಾಜದ ಮುಖಂಡರಾದ ವಕೀಲ ವೆಂಕಟೇಶ ಮೂರ್ತಿ, ದಕ್ಷಿಣ ಮೂರ್ತಿ,ಯಡಗೆರೆ ಚರಣ ಹೆಬ್ಬಾರ, ಸೀತೂರು ಉಪೇಂದ್ರ, ಭಾಗ್ಯ ನಂಜುಂಡ ಸ್ವಾಮಿ, ಮಂಜುಳಾ, ರಮೇಶ್, ಎಸ್.ರಾಮಚಂದ್ರ ಮತ್ತಿತರರು ಇದ್ದರು.