ಪ್ರತಿಭೆ ಪ್ರೋತ್ಸಾಹಿಸುವ ಸಂತ್ಸಪ್ರದಾಯ ಹೆಚ್ಚಳ ಸ್ವಾಗತಾರ್ಹ

| Published : Jun 17 2024, 01:37 AM IST

ಸಾರಾಂಶ

ಪ್ರತಿಭಾವಂತ ವಿದ್ಯಾರ್ಥಿ, ಯುವಜನರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಹಿಂದೆಲ್ಲಾ ತುಂಬಾ ಕಡಿಮೆ ಇತ್ತು. ಈಗ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಂತ್ಸಪ್ರದಾಯ ಹೆಚ್ಚುತ್ತಿದೆ. ಇಂತಹ ಅವಕಾಶ ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮೆರೆಯಬೇಕು ಎಂದು ಹಿರಿಯ ಚುಟುಕು ಕವಿ ಎಚ್.ಡುಂಡಿರಾಜ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದೈವಜ್ಞ ಬ್ರಾಹ್ಮಣ ಸಮಾಜದಿಂದ ಶಾರದಾ ಪುರಸ್ಕಾರ, ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಚುಟುಕು ಕವಿ ಎಚ್‌.ಡುಂಡಿರಾಜ್‌

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿಭಾವಂತ ವಿದ್ಯಾರ್ಥಿ, ಯುವಜನರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಹಿಂದೆಲ್ಲಾ ತುಂಬಾ ಕಡಿಮೆ ಇತ್ತು. ಈಗ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಂತ್ಸಪ್ರದಾಯ ಹೆಚ್ಚುತ್ತಿದೆ. ಇಂತಹ ಅವಕಾಶ ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮೆರೆಯಬೇಕು ಎಂದು ಹಿರಿಯ ಚುಟುಕು ಕವಿ ಎಚ್.ಡುಂಡಿರಾಜ್ ಹೇಳಿದರು.

ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಟಾನದಿಂದ 2023- 2024ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಶಾರದಾ ಪುರಸ್ಕಾರ, ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಹೊಂದಿದಲ್ಲಿ ಜೀವನದಲ್ಲಿ ಯಶಸ್ಸು, ಸಾಧನೆ ಸಾಧ್ಯವಾಗಲಿದೆ ಎಂದರು.

ಪುರುಷರಿಗಿಂತಲೂ ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಪುರುಷರಿಗೆ ಸಮಾನ ಸ್ಥಾನಮಾನ, ಅವಕಾಶವನ್ನು ಹೆಣ್ಣುಮಕ್ಕಳೂ ಪಡೆಯುತ್ತಿರುವುದು ಸಮಾಜದ ಬದಲಾವಣೆಯ ಪ್ರತೀಕವಾಗಿದೆ. ಮಹಿಳಾ ಮೀಸಲಾತಿ ಸಿಗದಿದ್ದರೂ ಮಹಿಳೆಯರು ಸಾಧನೆ ಹಾದಿಯಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದು ಶ್ಲಾಘಿಸಿದರು.

ದೈವಜ್ಞ ಬ್ರಾಹ್ಮಣ ಸಮಾಜವೆಂದರೆ ಬಂಗಾರದ ಮನುಷ್ಯರಿದ್ದಂತೆ. ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ರೇವಣಕರ್ ಪ್ರತಿಷ್ಠಾನ ಪ್ರತಿವರ್ಷ ಅಚ್ಚುಕಟ್ಟಾಗಿ ರಾಜ್ಯಮಟ್ಟದ ಶಾರದಾ ಪುರಸ್ಕಾರ ಸಮಾರಂಭ ನಡೆಸುತ್ತಿದೆ. ಇದು ಉತ್ತಮ ಸೇವೆಯಾಗಿದೆ. ದಾವಣಗೆರೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡಿ ರಾಜ್ಯದ ಇತರೆ ಭಾಗದಲ್ಲೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸುವಂತಾಗಿರುವುದು ಉತ್ತಮ ಬೆಳವಣಿಗೆ ಎಂದು ಡುಂಡಿರಾಜ್ ಹೇಳಿದರು.

ಪ್ರತಿಷ್ಠಾನದ ಸಂಸ್ಥಾಪಕ ಡಾ.ನಲ್ಲೂರು ಅರುಣಾಚಲ ಎನ್.ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ದೈವಜ್ಞ ಸಮಾಜದ ಅಧ್ಯಕ್ಷ ದಯಾನಂದ ಜಿ.ನೇತಲ್ಕರ್, ಪ್ರತಿಷ್ಠಾನದ ಅಧ್ಯಕ್ಷೆ ಪ್ರೇಮಾ ಅರುಣಾಚಲ ಎನ್. ರೇವಣಕರ್, ಸರಾಫ್ ಜ್ಯೂಯಲರ್ಸ್ ಅಸೋಸಿಯೇಷನ್‌ನ ನಲ್ಲೂರು ರಾಜ್‌ಕುಮಾರ, ನಲ್ಲೂರು ಲಕ್ಷ್ಮಣರಾವ್, ಪ್ರತಿಷ್ಠಾನದ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಇತರರು ಇದ್ದರು.

ಶಾರದಾ ಪುರಸ್ಕಾರಕ್ಕೆ ಆಯ್ಕೆಯಾದ ಮಕ್ಕಳಿಗೆ ಅತಿಥಿಗಳ ಜತೆಗೆ ಪೂರ್ಣಕುಂಭ ಸ್ವಾಗತ, ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತಂದಿದ್ದು ವಿಶೇಷವಾಗಿತ್ತು.

- - -

ಬಾಕ್ಸ್

ಶಿಕ್ಷಣದಿಂದ ನಾಡು, ನುಡಿ ಬೆಳಗಿ: ಬಿಆರ್‌ಎಲ್‌

ಹಿರಿಯ ಕವಿ ಡಾ. ಬಿ.ಆರ್‌. ಲಕ್ಷ್ಮಣ ರಾವ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ಮುಂದಿನ ದಿನಗಳಲ್ಲಿ ನಾಡು, ನುಡಿಗೆ ಸೇವೆ ಸಲ್ಲಿಸುವ ಮೂಲಕ ತಾವು ಪಡೆದ ಶಿಕ್ಷಣ ಸಾರ್ಥಕ ಪಡಿಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ಇಷ್ಟೊಂದು ಅಂಕ ಪಡೆಯುವವರ ಸಂಖ್ಯೆ ತೀರಾ ವಿರಳವಾಗಿತ್ತು. ಈಗ ಸಾಕಷ್ಟು ಸೌಲಭ್ಯ, ಅವಕಾಶ, ಹೆತ್ತವರ ಪ್ರೋತ್ಸಾಹ, ಸಹಕಾರ ಸಿಗುತ್ತಿದೆ. ಹಾಗಾಗಿ, ಶೇ.90 ಅಲ್ಲ, ಶೇ.100 ಅಂಕ ಪಡೆದರೂ ಸಾಮಾನ್ಯ ಎಂಬಂತಾಗಿದೆ ಎಂದರು. ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸುತ್ತಿರುವುದನ್ನು ನೋಡಿದರೆ ಈಗಿನ ಮಕ್ಕಳೇ ಭಾಗ್ಯವಂತರು ಎನಿಸುತ್ತದೆ. ಅಷ್ಟೇ ಅಂಕ ಪಡೆದರೂ ವಿದ್ಯಾರ್ಥಿಗಳು ಜೀವನದ ಗುರಿ ಮುಟ್ಟುವ ಕೆಲಸ ಮಾಡಬೇಕು. ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುವಿಗೂ ಕೀರ್ತಿ ತರುವ ಕೆಲಸ ಆಗಬೇಕು. ನಾಡು, ನುಡಿ, ಸಂಸ್ಕೃತಿಗೆ ನಿಮ್ಮ ಕೊಡುಗೆಯನ್ನು ನೀಡಬೇಕು. ಉನ್ನತ ಸಾಧನೆ ನಿಮ್ಮ ಗುರಿಯಾಗಬೇಕು ಎಂದು ತಿಳಿಸಿದರು.

- - -

-16ಕೆಡಿವಿಜಿ3, 4:

ದಾವಣಗೆರೆಯಲ್ಲಿ ಭಾನುವಾರ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನದಿಂದ ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಶಾರದಾ ಪುರಸ್ಕಾರ, ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕವಿ ಡಾ. ಬಿ.ಆರ್‌. ಲಕ್ಷ್ಮಣ ರಾವ್, ಚುಟುಕು ಕವಿ ಎಚ್.ಡುಂಡಿರಾಜ ಇತರರು ಪಾಲ್ಗೊಂಡಿದ್ದರು.