ಎಂ.ಟೆಕ್‌ ಪದವೀಧರನ ಕೃಷಿ ಒಲವು; ಹೈನುಗಾರಿಕೆಯಿಂದ ಸಂತೃಪ್ತ ಜೀವನ

| Published : Apr 05 2025, 12:48 AM IST

ಎಂ.ಟೆಕ್‌ ಪದವೀಧರನ ಕೃಷಿ ಒಲವು; ಹೈನುಗಾರಿಕೆಯಿಂದ ಸಂತೃಪ್ತ ಜೀವನ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಅಭಿವೃದ್ಧಿಗೊಳಿಸಿದ ರಾಗಿ (ಕೆ.ಎಂ.ಆರ್-630), ಭತ್ತ (ಕೆ.ಎಂ.ಪಿ-220) ತಳಿಗಳನ್ನು ಬೆಳೆದು ಇತರೆ ರೈತರುಗಳಿಗೆ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಒಟ್ಟಾರೆ ವಾರ್ಷಿ ಕೃಷಿಯಿಂದ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. 2024ನೇ ಸಾಲಿನಲ್ಲಿ ಕೆ.ಆರ್‌. ನಗರ ತಾಲೂಕು ಮಟ್ಟದ ಯುವ ರೈತ ಪ್ರಶಸ್ತಿ ಪಡೆದಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಕೆ.ಆರ್.ನಗರ ತಾಲೂಕು ಬಸವರಾಜಪುರದ ಎಂ.ಮಹದೇವು ಅವರ ಪುತ್ರ ಸಂದೀಪ್‌ ರಾಜ್‌ ಎಂ.ಟೆಕ್. ಪದವೀಧರರಾಗಿದ್ದರೂ ಕೃಷಿಯ ಬಗ್ಗೆ ಅಪಾರವಾದ ಒಲವು.

ಇವರಿಗೆ 3.15 ಎಕರೆ ಜಮೀನಿನಿದ್ದು, ಭತ್ತ, ರಾಗಿ, ಜೋಳ, ಸಿರಿಧಾನ್ಯಗಳಾದ ಕೊರಲೆ, ಊದಲು, ಸಾಮೆ, ತರಕಾರಿ ಬೆಳೆಗಳಾದ ಟೊಮೇಟೋ, ಬೆಂಡೆ, ಮಿಡಿಸೌತೆ, ಸೋಲಾರ್ ಬೀನ್ಸ್‌ ಬೆಳೆಯುತ್ತಿದ್ದಾರೆ. ತೆಂಗು ಹಾಗೂ ಟೊಮೇಟೋ ಬೆಳೆಗಳೊಡನೆ ಅಂತರ ಬೆಳೆಯಾಗಿ ಚೆಂಡು ಹೂವು ಬೆಳೆಯುತ್ತಾರೆ. ರೇಷ್ಮೆ ಕೃಷಿಯನ್ನು ಮಾಡುತ್ತಿದ್ದು, ವರ್ಷಕ್ಕೆ 8 ಬೆಳೆ ಬೆಳೆಯುವುದರ ಮೂಲಕ ರು 2. ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದರು. ಆದರೆ ಈಗ ಪ್ರತಿಕೂಲ ಹವಾಮಾನ ಕಾರಣದಿಂದಾಗಿ ರೇಷ್ಮೆ ಬದಲು ಕಲ್ಲಂಗಡಿ ಬೆಳೆದಿದ್ದಾರೆ.

ತೋಟಗಾರಿಕೆ+ ಅರಣ್ಯ ಬೆಳೆ ಪದ್ಧತಿ ಅನುಸರಿಸುತ್ತಿದ್ದು, ಹೊಂಗೆಮರ (5), ನೀಲಗಿರಿ (5), ಮಾವು (4), ಸಿಲ್ವರ್ (4), ಬಿದಿರು (3), ನೇರಳೆ (2), ಬೋಗೆ (2), ಹಲಸು (5) ಹಾಗೂ ತೇಗ (4) ಮರಗಳನ್ನು ಬೆಳೆಸಿದ್ದಾರೆ. ಇದರಿಂದ ಮಣ್ಣಿನ ಸವಕಳಿಯನ್ನು ತಪ್ಪಿಸಲು ಸಹಕಾರಿಯಾಗಿದೆ. ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ವಾರ್ಷಿಕವಾಗಿ ರು. 3.04 ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದಾರೆ. ರಾಸುಗಳಿಗೆ ಹಸಿರು ಹಾಗೂ ಕೆಂಪು ನೇಪಿಯಾರ್, ಮೇವಿನ ಅಲಸಂದೆ, ಕೆಂಪುಕಡ್ಡಿ ಹುಲ್ಲು ಹಾಗೂ ಮೆಕ್ಕೆಜೋಳವನ್ನು ತಮ್ಮ ಜಮೀನಿನಲ್ಲಿಯೇ ಬೆಳೆಯುವುದಲ್ಲದೆ 30 ಟನ್ ಸೈಲೇಜ್ ಉತ್ಪಾದಿಸುತ್ತಾಾರೆ. ಬಂಡೂರು ಕುರಿಗಳು, ನಾಟಿ ಮೇಕೆ, ನಾಟಿ ಕೋಳಿ, ಹಾಗೂ ಗಿರಿರಾಜ ಕೋಳಿ ಸಾಕಾಣಿಕೆ ಮಾಡಿ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಗಮನಹರಿಸಿದ್ದಾರೆ. ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯಲ್ಲಿ ಅಣಬೆ ಕೃಷಿ ಬಗ್ಗೆ ತರಬೇತಿ ಪಡೆದು ಅಣಬೆ ಬೇಸಾಯ ಮಾಡಿ ಸ್ಥಳೀಯ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ತಮ್ಮ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್‌ ಹಾಗೂ ಜೀವಾಮೃತ ಬಳಕೆ ಮಾಡುತ್ತಿದ್ದಾರೆ. ಬೆಳೆಗಳಲ್ಲಿ ಸಮಗ್ರ ರೋಗಗಳ ನಿರ್ವಹಣೆಯಲ್ಲಿ ಬೀಜೋಪಚಾರದ ಉಪಯೋಗಗಳನ್ನು ಅರಿತು ಟ್ರೈಕೋಡರ್ಮ, ಬಳಸಿ ಬೀಜೋಪಚಾರ ಮಾಡುತ್ತಿದ್ದಾರೆ. ಕೀಟಗಳ ನಿರ್ವಹಣೆಗಾಗಿ ಜೈವಿಕ ಕೀಟನಾಶಕಗಳಾದ ಬಿವೇರಿಯಾ, ಮೆಟಾರೈಜಿಯಂ ಬಳಕೆಯ ಬಗ್ಗೆ ಜ್ಞಾಾನವಿದೆ. ಕೃಷಿ ಇಲಾಖೆ, ವಿಸ್ತರಣಾ ಶಿಕ್ಷಣ ಘಟಕ ನಾಗನಹಳ್ಳಿ ವತಿಯಿಂದ ಜರುಗುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ತಮ್ಮ ಜಮೀನಿನಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವುದರ ಮೂಲಕ ನೂತನ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮಾದರಿ ಯುವ ರೈತರೆನಿಸಿಕೊಂಡಿದ್ದಾರೆ. ಹೊಸದಾಗಿ ಅಭಿವೃದ್ಧಿಗೊಳಿಸಿದ ರಾಗಿ (ಕೆ.ಎಂ.ಆರ್-630), ಭತ್ತ (ಕೆ.ಎಂ.ಪಿ-220) ತಳಿಗಳನ್ನು ಬೆಳೆದು ಇತರೆ ರೈತರುಗಳಿಗೆ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಒಟ್ಟಾರೆ ವಾರ್ಷಿ ಕೃಷಿಯಿಂದ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. 2024ನೇ ಸಾಲಿನಲ್ಲಿ ಕೆ.ಆರ್‌. ನಗರ ತಾಲೂಕು ಮಟ್ಟದ ಯುವ ರೈತ ಪ್ರಶಸ್ತಿ ಪಡೆದಿದ್ದಾರೆ.

ಸಂಪರ್ಕ ವಿಳಾಸಃ ಸಂದೀಪ್ ರಾಜು ಬಿನ್ ಎಂ. ಮಹದೇವು,

ಬಸವರಾಜಪುರ ಗ್ರಾಮ, ಕಸಬಾ ಹೋಬಳಿ,

ಕೆ. ಆರ್. ನಗರ ತಾಲೂಕು, ಮೈಸೂರು ಜಿಲ್ಲೆ

ಮೊ. 80734 54527

ಬೆಂಗಳೂರಿನ ಪಿಇಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌, ಮೈಸೂರಿನ ಟಿವಿಯು ಪ್ರಾದೇಶಿಕ ಕೇಂದ್ರದಲ್ಲಿ ಎಂ.ಟೆಕ್‌ ಮಾಡಿದ ನಾನು ಕೆಲಕಾಲ ಬೋಧನಾ ವೃತ್ತಿಯಲ್ಲಿಯೂ ತೊಡಗಿದ್ದೆ. ಚಲನಚಿತ್ರ, ಕಿರುತೆರೆಯಲ್ಲಿಯೂ ನಟಿಸಿದ್ದೆ. ಆದರೆ ಅದಕ್ಕಿಂತ ನೆಮ್ಮದಿಯ ಜೀವನ ನಡೆಸಲು ಊರಿಗೆ ಮರಳಿ, ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೆ.ಆರ್‌. ನಗರ ಹಾಗೂ ಮೈಸೂರಿನಲ್ಲಿ ನಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇನೆ.

- ಸಂದೀಪ್‌ ರಾಜ್‌, ಬಸವರಾಜಪುರ