ಶಾಸಕರು, ಮಾಜಿ ಶಾಸಕರ ಭೇಟಿ, ವಿಶೇಷ ಪೂಜೆ । ಸರತಿ ಸಾಲಿನಲ್ಲಿ ನಿಂತು ಸೇವೆ ಸಲ್ಲಿಸಿದ ಲಕ್ಷಾಂತರ ಭಕ್ತಾಧಿಗಳುಕನ್ನಡಪ್ರಭ ವಾರ್ತೆ ಶಿರಸಿ

ಶ್ರೀ ಮಾರಿಕಾಂಬಾ ದೇವಿಯ 5ನೇ ದಿನದ ಜಾತ್ರಾ ಮಹೋತ್ಸವಕ್ಕೆ ಶನಿವಾರ ಭಕ್ತಸಾಗರವೇ ಹರಿದು ಬಂದಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಲಕ್ಷಾಂತರ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವಿಗೆ ಉಡಿ ತುಂಬುವುದು ಮತ್ತು ಹಣ್ಣು ಕಾಯಿ ಸೇವೆ ಸಲ್ಲಿಸಿದರು.

ಅಲ್ಲದೇ ಅನೇಕ ವೃದ್ಧರು, ಅಂಗವಿಕಲರು ಮತ್ತು ಯುವಕ-ಯುವತಿಯರು ದೇವಿಯ ದರ್ಶನ ಪಡೆಯಲು ರಾಜ್ಯ ಅಂತರ್‌ರಾಜ್ಯಗಳಿಂದ ಬಂದಿರುವುದು ವಿಶೇಷವಾಗಿ ಕಂಡು ಬಂತು.

ಎಂದಿನಂತೆ ಮಾರಿಕಾಂಬೆಯ ಸೀರೆ ಮಾರಾಟ ಜೋರಾಗಿ ಕಂಡು ಬಂದಿತು. ದಿನಕ್ಕೆ 10 ಸಾವಿರದಿಂದ 12 ಸಾವಿರ ಸೀರೆಗಳು ಮಾರಾಟವಾಗುತ್ತಿವೆ. ಪ್ರತಿದಿನ ಸುಮಾರು 50 ಸಾವಿರದಿಂದ 60 ಸಾವಿರ ಉಡಿಗಳು ಮಾರಾಟವಾಗುತ್ತಿವೆ. ಜೊತೆಗೆ ಪ್ರತಿದಿನ ಸುಮಾರು 15 ಸಾವಿರದಿಂದ 18 ಸಾವಿರ ಲಡ್ಡು ಪ್ರಸಾದವು ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ.

ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ‌ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಮತ್ತು ಕ್ಷೇತ್ರದ ಜನರಿಗೆ ಸುಖ ಸಮೃದ್ಧಿಯನ್ನು ಆ ತಾಯಿ ಕರುಣಿಸಲಿ‌ ಎಂದು ಹರಕೆ ಮಾಡಿಕೊಂಡರು. ನಂತರ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದ ಆಡಳಿತ ಮಂಡಳಿಯವರು ರೂಪಾಲಿ ಅವರನ್ನು ಗೌರವಿಸಿ ಸನ್ಮಾನಿಸಿದರು.


ಅದೇ ರೀತಿ ಶಾಸಕ ದಿನಕರ ಶೆಟ್ಟಿ ಶ್ರೀ ಮಾರಿಕಾಂಬಾ ಗದ್ದುಗೆಗೆ ಭೇಟಿ‌ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದಿನಕರ ಶೆಟ್ಟಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಗೌರವಿಸಿದರು.

ನಂತರ ಬ್ರಹ್ಮಾಂಡ ಗುರೂಜಿ ಆಗಮಿಸಿ‌ ದೇವಿಯ ಗದ್ದುಗೆಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ಶಿವಾನಂದ ಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವೀಲ್ ಚೇರ್‌ ಮೂಲಕ ಬಂದ ಅಂಗವಿಕಲ ಭಕ್ತಾಧಿಗಳಿಗೆ ಬಾಬುದಾರರ ಕಡೆಯಿಂದ ವಿಶೇಷ ದರ್ಶನ ಮಾಡಿಸಲಾಯಿತು.