ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಹಿನ್ನೆಲೆ ನಗರದ ವಿವಿಧ ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತಿ-ಭಾವದ ಚಾಲನೆ ದೊರೆಯಿತು.
ಹುಬ್ಬಳ್ಳಿ:
ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಹಿನ್ನೆಲೆ ನಗರದ ವಿವಿಧ ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತಿ-ಭಾವದ ಚಾಲನೆ ದೊರೆಯಿತು.ಇಲ್ಲಿನ ಭವಾನಿ ನಗರದ ನಂಜನಗೂಡು ರಾಯರ ಮಠ, ತೊರವಿಗಲ್ಲಿ ರಾಯರ ಮಠ, ಕುಬೇರಪುರಂ ರಾಯರ ಮಠ, ನವನಗರ ರಾಯರ ಮಠ, ವಿದ್ಯಾನಗರದ ಪರಿಮಳ ಮಾರ್ಗದಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ 10ಕ್ಕೂ ಹೆಚ್ಚು ಮಠಗಳಲ್ಲಿ ಬೆಳಗ್ಗಿನಿಂದಲೇ ಭಕ್ತರ ದಂಡು ಕಂಡುಬಂತು.
ಸುಪ್ರಭಾತ ಸೇವೆಯೊಂದಿಗೆ ದಿನದ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡವು. ಬಳಿಕ ರಾಯರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಅಷ್ಟೋತ್ತರ, ಪಾರಾಯಣ ಸೇರಿದಂತೆ ವಿವಿಧ ಸೇವೆಗಳು ನೆರವೇರಿದವು. ವಿದ್ವಾಂಸರಿಂದ ರಾಯರ ಮಹಿಮೆ ಸಾರುವ ಪ್ರವಚನ ಹಾಗೂ ರಾಯರ ಕೃತಿಗಳ ಪಾರಾಯಣ ನಡೆಯಿತು. ಹೂವು ಹಾಗೂ ವಿವಿಧ ಬಗೆಯ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ವೃಂದಾವನಗಳು ಭಕ್ತರ ಗಮನ ಸೆಳೆದವು.ಭವಾನಿ ನಗರದ ರಾಯರ ಮಠದಲ್ಲಿ ವಿಶೇಷ ಕನಕಾಭಿಷೇಕ ಸೇರಿದಂತೆ ವಿವಿಧ ಸೇವಾ ಕೈಂಕರ್ಯ ನೆರವೇರಿದವು. ನೈವೇದ್ಯ ಹಾಗೂ ಅಲಂಕಾರ ಭೋಜನದ ಬಳಿಕ ಸಹಸ್ರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ವಿಧ್ಯುಕ್ತ ಚಾಲನೆ:ಐದು ದಿನ ನಡೆಯಲಿರುವ ಆರಾಧನಾ ಪಂಚರಾತ್ರೋತ್ಸವಕ್ಕೆ ಶುಕ್ರವಾರ ಗೋಧೂಳಿ ಸಮಯದಲ್ಲಿ ಗೋಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು. ಧ್ವಜಾರೋಹಣದ ಬಳಿಕ ಭಜನಾ ಮಂಡಳಿಗಳಿಂದ ಶೋಭಾನ ಕಾರ್ಯಕ್ರಮ ನಡೆಯಿತು. ಋಗ್ವೇದಿ ಹಾಗೂ ಯಜುರ್ವೇದಿ ವಿಪ್ರರಿಂದ ನೂತನ ಉಪಾಕರ್ಮ ಕಾರ್ಯಕ್ರಮವೂ ನೆರವೇರಿತು.
ಸಂಜೆ ಮಠಗಳಲ್ಲಿ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ ಭಕ್ತಿಭಾವದಿಂದ ಜರುಗಿದವು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಾಯರ ದರ್ಶನ ಪಡೆದು ಸೇವಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.