ಹಳೆಯ ದ್ವೇಷ: ರೌಡಿಶೀಟರ್ ಬರ್ಬರ ಹತ್ಯೆ

| Published : Apr 11 2024, 12:45 AM IST

ಸಾರಾಂಶ

ಆನೆಕೆರೆ ಬೀದಿಯ ಕೆಂಪೇಗೌಡರ ರಸ್ತೆಯಲ್ಲಿ ವಾಸವಾಗಿದ್ದ ರೌಡಿ ಶೀಟರ್ ಅಕ್ಷಯ್ (೨೪) ಎಂಬಾತನೇ ಹತ್ಯೆಯಾದವನಾಗಿದ್ದು, ಈತನನ್ನು ಸ್ವರ್ಣಸಂದ್ರದ ಭರತ್ ಅಲಿಯಾಸ್ ಸಾಹುಕಾರ, ಪ್ರಮೋದ್ ಅಲಿಯಾಸ್ ಕಾಡು, ಮನು ಅಲಿಯಾಸ್ ಮೀಸೆ ಹಾಗೂ ಇತರರು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುಗಾದಿ ಹಬ್ಬದ ರಾತ್ರಿ ದುಷ್ಕರ್ಮಿಗಳು ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ.

ಆನೆಕೆರೆ ಬೀದಿಯ ಕೆಂಪೇಗೌಡರ ರಸ್ತೆಯಲ್ಲಿ ವಾಸವಾಗಿದ್ದ ರೌಡಿ ಶೀಟರ್ ಅಕ್ಷಯ್ (೨೪) ಎಂಬಾತನೇ ಹತ್ಯೆಯಾದವನಾಗಿದ್ದು, ಈತನನ್ನು ಸ್ವರ್ಣಸಂದ್ರದ ಭರತ್ ಅಲಿಯಾಸ್ ಸಾಹುಕಾರ, ಪ್ರಮೋದ್ ಅಲಿಯಾಸ್ ಕಾಡು, ಮನು ಅಲಿಯಾಸ್ ಮೀಸೆ ಹಾಗೂ ಇತರರು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಏನಾಯ್ತು?:

ನಗರದ ಚಿಕ್ಕೇಗೌಡನ ದೊಡ್ಡಿಯ ಚಾಮೇಗೌಡ ಹಾಗೂ ರುಕ್ಮಿಣಿ ಮಗನಾದ ಅಕ್ಷಯ್, ಚಿಕ್ಕೇಗೌಡನದೊಡ್ಡಿಯಲ್ಲಿ ವಾಸವಾಗಿದ್ದನು. ಸುಮಾರು ಒಂದು ವರ್ಷದ ಹಿಂದೆ ಧರ್ಮಸ್ಥಳ ಸಂಘದ ಹಣದ ವಿಚಾರದಲ್ಲಿ ಸ್ವರ್ಣಸಂದ್ರದ ಭರತ್. ಆತನ ಅಣ್ಣ ಅಭಿ ಹಾಗೂ ಅಕ್ಷಯ್, ಆತನ ತಮ್ಮ ಅಭಿಲಾಷ್‌ಗೌಡ ಅವರೊಂದಿಗೆ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ಅಕ್ಷಯ್ ಮತ್ತು ಅಭಿಲಾಷ್‌ಗೌಡ ಮೇಲೆ ಭರತ್ ಹತ್ಯೆ ಯತ್ನ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದನು. ಜೈಲಿನಿಂದ ಸಹೋದರರು ಹೊರಬಂದ ನಂತರವೂ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದರು. ಪರಿಣಾಮ ಅಕ್ಷಯ್ ಕುಟುಂಬದವರು ಚಿಕ್ಕೇಗೌಡನದೊಡ್ಡಿ ಮನೆಯನ್ನು ಖಾಲಿ ಮಾಡಿ ಹೊಳಲು ಸರ್ಕಲ್‌ಗೆ ಹೋಗಿ ವಾಸವಾಗಿದ್ದರು. ಆದರೂ ಸಹ ಅಕ್ಷಯ್ ಮತ್ತು ಅಭಿಲಾಶ್‌ಗೌಡ ಅವರು ಭರತ್ ಎದುರಿಗೆ ಸಿಕ್ಕಾಗಲೆಲ್ಲಾ ದ್ವೇಷದಿಂದಲೇ ನೋಡುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏ.೯ರಂದು ಸಂಜೆ ೭.೩೦ರ ಸಮಯದಲ್ಲಿ ಅಕ್ಷಯ್ ಮತ್ತವನ ಸ್ನೇಹಿತ ಹೇಮಂತ್ ಇಬ್ಬರೂ ಮನೆಯಿಂದ ಬೈಕ್‌ನಲ್ಲಿ ಹೊರಹೋಗಿದ್ದರು. ಅಕ್ಷಯ್ ಸ್ವರ್ಣಸಂದ್ರಕ್ಕೆ ಬಂದು ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಅಕ್ಷಯ್‌ನನ್ನು ಕಂಡ ಭರತ್ ಕುಪಿತಗೊಂಡಿದ್ದನು. ತನ್ನ ಸ್ನೇಹಿತರೊಡಗೂಡಿ ಅಕ್ಷಯ್ ಹತ್ಯೆಗೆ ಯೋಜನೆ ರೂಪಿಸಿದನು. ರಾತ್ರಿ ೧೧.೨೦ರ ಸಮಯದಲ್ಲಿ ಸ್ವರ್ಣಸಂದ್ರದ ಭರತ, ಪ್ರಮೋದ, ಮನು ಹಾಗೂ ಇತರರು ಕೈಯ್ಯಲ್ಲಿ ಲಾಂಗ್‌ಗಳನ್ನು ಹಿಡಿದುಕೊಂಡು ಬಂದು ಏಕಾಏಕಿ ಅಕ್ಷಯ್ ಮತ್ತು ಸ್ನೇಹಿತ ಹೇಮಂತ್ ಮೇಲೆ ದಾಳಿ ನಡೆಸಿದರು. ಇಬ್ಬರನ್ನೂ ಅಟ್ಟಾಡಿಸಿಕೊಂಡು ಕೊನೆಗೆ ದಾಸೇಗೌಡ ಬೀದಿಯಲ್ಲಿರುವ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಬಳಿ ಕೈಗೆ ಸಿಕ್ಕ ಅಕ್ಷಯ್‌ನನ್ನು ಸುತ್ತುವರಿದು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಹೇಮಂತ್ ಆಸ್ಪತ್ರೆಗೆ ದಾಖಲಾಗಿದ್ದನು. ವಿಷಯ ತಿಳಿದ ಅಕ್ಷಯ್ ಅತ್ತೆಯ ಮಗ ಮನು ಮನೆಯವರಿಗೆ ವಿಷಯ ಮುಟ್ಟಿಸಿದನು.

ಸ್ಥಳಕ್ಕೆ ಧಾವಿಸಿ ಮಂಡ್ಯ ಪಶ್ಚಿಮ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶೇಷಾದ್ರಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಕ್ಷಯ್ ಕೊಲೆ ಮಾಡಿರುವ ದುಷ್ಕರ್ಮಿಗಳ ಶೋಧ ನಡೆಸಿದ್ದಾರೆ. ಅಕ್ಷಯ್ ಸಹೋದರ ಅಭಿಲಾಷಗೌಡ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.