ಕರ್ತವ್ಯ ನಿರತ ರಾಜಸ್ವ ನಿರೀಕ್ಷಕ ಹೃದಯಾಘಾತದಿಂದ ಸಾವು

| Published : Feb 26 2025, 01:03 AM IST

ಕರ್ತವ್ಯ ನಿರತ ರಾಜಸ್ವ ನಿರೀಕ್ಷಕ ಹೃದಯಾಘಾತದಿಂದ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪೂರ್ಣಚಂದ್ರ ಮಂಗಳವಾರ ಕಾರ್ಯನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ಬಂದು ಕೆಲಸ ನಿರ್ವಹಿಸಿದ ನಂತರ ಮಧ್ಯಾಹ್ನ ಮನೆಗೆ ಊಟಕ್ಕೆ ತೆರಳಿದ್ದ ವೇಳೆ ಹೃದಯಘಾತವಾಗಿದೆ.

ಮದ್ದೂರು: ಕರ್ತವ್ಯನಿರತ ರಾಜಸ್ವ ನಿರೀಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ಜರುಗಿದೆ. ತಾಲೂಕಿನ ಕೊಪ್ಪ ಗ್ರಾಮದ ಒಂದನೇ ವೃತ್ತದ ರಾಜಸ್ವ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಸಿ.ಪೂರ್ಣಚಂದ್ರ (50) ಹೃದಯಾಘಾತದಿಂದ ಮೃತಪಟ್ಟವರು. ಮೃತರಿಗೆ ಪತ್ನಿ ಕಲಾವತಿ, ಪುತ್ರಿ ಚಿನ್ಮಯಿ, ಪುತ್ರ ಚಿರಾಗ್ ಇದ್ದಾರೆ. ಮೂಲತಃ ಮದ್ದೂರು ತಾಲೂಕು ಹೆಮ್ಮನಹಳ್ಳಿಯ ಪೂರ್ಣಚಂದ್ರರವರು ಮಂಡ್ಯದ ಕಾವೇರಿನಗರದಲ್ಲಿ ವಾಸವಾಗಿದ್ದರು. ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪೂರ್ಣಚಂದ್ರ ಮಂಗಳವಾರ ಕಾರ್ಯನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ಬಂದು ಕೆಲಸ ನಿರ್ವಹಿಸಿದ ನಂತರ ಮಧ್ಯಾಹ್ನ ಮನೆಗೆ ಊಟಕ್ಕೆ ತೆರಳಿದ್ದ ವೇಳೆ ಹೃದಯಘಾತವಾಗಿದೆ. ಕುಟುಂಬದವರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ಹೆಮ್ಮನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ರಾಜಸ್ವ ನಿರೀಕ್ಷಕ ಪೂರ್ಣಚಂದ್ರ ನಿಧನಕ್ಕೆ ತಹಸೀಲ್ದಾರ್ ಡಾ.ಸ್ಮಿತಾರಾಮು, ಗ್ರೇಡ್- 2 ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಗಳಾದ ಉಮೇಶ್, ಲಕ್ಷ್ಮೀನರಸಿಂಹ, ತಾಲೂಕು ಸರ್ಕಾರಿ ನೌಕರರ ಸಂಘದ ರವೀಶ್, ಮಾಜಿ ಅಧ್ಯಕ್ಷ ರವಿಕುಮಾರ್, ಪದಾಧಿಕಾರಿಗಳು ಕಂದಾಯ ಇಲಾಖೆ ನೌಕರರು ಸಂತಾಪ ಸೂಚಿಸಿದ್ದಾರೆ.