ನಿಯಂತ್ರಣ ತಪ್ಪಿದ ಚಿತ್ರದುರ್ಗ ಆಡಳಿತ ಯಂತ್ರ

| Published : Jun 27 2024, 01:05 AM IST

ಸಾರಾಂಶ

ಚಿತ್ರದುರ್ಗ ಜಿಪಂ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆ ಆಡಳಿತ ಯಂತ್ರ ನಿಯಂತ್ರಣ ತಪ್ಪಿರುವುದಕ್ಕೆ ಸಾಕ್ಷಿಯಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಗಂಭೀರ ಸ್ವರೂಪ ಕೊಡಬೇಕಾದ ಅಧಿಕಾರಿಗಳು ಹೋಂ ವರ್ಕ್ ಮಾಡಿಕೊಳ್ಳದೇ ಕೈ ಬೀಸಿಕೊಂಡು ಬಂದು ತಪ್ಪು ಮಾಹಿತಿ ನೀಡುತ್ತಲೇ ಸಾಗಿದ ಪರುಣಾಮ ಅಂಕಿ ಅಂಶಗಳಲ್ಲಿ ಖಚಿತತೆ ಇರಲಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಕಂಠ ಶೋಷಣೆ ಮಾಡಿಕೊಳ್ಳಬೇಕಾಯಿತು.

ಚಿತ್ರದುರ್ಗ ಜಿಲ್ಲೆಯಲ್ಲಿ ಎಷ್ಟು ಆರ್‌ಒ ಪ್ಲಾಂಟ್(ಶುದ್ದ ಕುಡಿವ ನೀರಿನ ಘಟಕಗಳು)ಕೆಟ್ಟಿವೆ ಎಂಬ ಶಾಸಕ ರಘುಮೂರ್ತಿ ಅವರ ಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿಲ್ಲ. ಕೇವಲ 114 ಎಂಬ ಉತ್ತರಕ್ಕೆ ರೊಚ್ಚಿಗೆದ್ದ ರಘುಮೂರ್ತಿ ಚಳ್ಳಕೆರೆ ತಾಲೂಕಿನ ಪರಶುರಾಂಪುರ, ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯಲ್ಲಿ ನೂರಕ್ಕೂ ಹೆಚ್ಚು ಕೆಟ್ಟಿವೆ. ಜಿಲ್ಲೆಯಲ್ಲಿ 114 ಅಂತ ಸುಳ್ಳು ಹೇಳಿದರೆ ಹೇಗೆ ಎಂದು ಗ್ರಾಮೀಣ ಕುಡಿವ ನೀರು ಯೋಜನೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ಅಸಹಕಾರಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಮೇಲೆ ಹರಿಹಾಯ್ದು ಹಳ್ಳಿಗಳಿಗೆ ಭೇಟಿ ನೀಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗ ನಿರ್ಮಿತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರುಪಾಯಿ ಹಣ ದುರಪಯೋಗ ಪ್ರಕರಣವನ್ನು ಸಿಒಡಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು.

ಹಿಂದಿನ ಯೋಜನಾ ನಿರ್ದೇಶಕರ ಅವಧಿಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳಿವೆ. ತಾತ್ಕಾಲಿಕವಾಗಿ ಆತನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇಡೀ ಪ್ರಕರದ ತನಿಖೆಗೆ ಪೂರ್ಣಪ್ರಮಾಣದಲ್ಲಿ ನಡೆಯಲು ಸಿಒಡಿಗೆ ವಹಿಸುವುದು ಅಗತ್ಯವೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 193 ಬಾಲ್ಯ ವಿವಾಹ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 102 ತಡೆಯಲಾಗಿದ್ದು, 91 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೆ 11 ರಿಂದ 18 ವರ್ಷದ 154 ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳನ್ನು ಗುರುತಿಸಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕಾನೂನಿನನ್ವಯ ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗುವ ಪುರೋಹಿತರು, ಕಲ್ಯಾಣ ಮಂಟಪದವರು, ಕೆಟರಿಂಗ್, ಶಾಮಿಯಾನ ಸೇರಿದಂತೆ, ಪಾಲ್ಗೊಂಡ ಎಲ್ಲರ ಮೇಲೂ ಮೊಕದ್ದಮೆ ದಾಖಲಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ತಾಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿದ್ದು, ನಿರ್ವಹಣೆಗೆ ಟ್ರಸ್ಟ್ ರಚನೆ ಮಾಡಿ ಅನುದಾನ ನೀಡಲು ಕ್ರಮವಹಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕಿ ಇಂದಿರಾಬಾಯಿ ಅವರಿಗೆ ಸೂಚನೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಶಿಕ್ಷಕರನ್ನು ಕಳೆದ ಶೈಕ್ಷಣಿಕ ಸಾಲಿನಲ್ಲಿ ಇತರೆ ಕೆಲಸ ಕಾರ್ಯಗಳಿಗೆ ಹೆಚ್ಚಿನದಾಗಿ ಬಳಸಿಕೊಳ್ಳಲಾಗಿದೆ. ಇದು ಎಸ್ಎಸ್ಎಲ್‌ಸಿ ಫಲಿತಾಂಶ ಇಳಿಮುಖಕ್ಕೆ ಪ್ರಮುಖ ಕಾರಣವಾಗಿದೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇರುವ ಶಾಲೆಗಳಲ್ಲಿ ಆದ್ಯತೆ ಅನುಸಾರ ಪ್ರಾರ್ಥನಾ ಪ್ರಾಂಗಣ ಹಾಗೂ ಊಟದ ಸಭಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ವಿಶೇಷ ಅನುದಾನ ಮಂಜೂರಾತಿಗೆ ಕ್ರಮವಹಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಂಸದರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆಯ₹5300 ಕೋಟಿ ಅನುದಾನ ಶೀಘ್ರ ಬಿಡುಗಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಖಲಿಂ ಉಲ್ಲಾ, ರಂಗಸ್ವಾಮಿ, ದೀಪಿಕಾ, ಸತೀಶ್, ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.