ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರೆದಿದ್ದು, ಶುಕ್ರವಾರ ಸರಾಸರಿ 68.31 ಮಿ.ಮೀ ಮಳೆ ಸುರಿದಿದ್ದು, ಹಲವಡೆ ರಾತ್ರಿ ಇಡೀ ಮಳೆ ಸುರಿದಿದೆ.ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಾಗುತ್ತಿದ್ದು, ವಾಡಿಕೆ ಮೀರಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 603.55 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ತಿಂಗಳ ಅಂತ್ಯಕ್ಕೆ ಇನ್ನೂ 11 ದಿನಗಳು ಬಾಕಿ ಇರುವಾಗಲೇ ವಾಡಿಕೆ ಮೀರಿದ್ದು, ಜು.19ರವರೆಗೆ 605.23 ಮಳೆಯಾಗಿದೆ.
ಶಿವಮೊಗ್ಗದಲ್ಲಿ 204.70 ಮಿ.ಮೀ ವಾಡಿಕೆ ಮಳೆ ಇದ್ದರೆ, 278 ಮಿ.ಮೀ ಮಳೆ ಸುರಿದಿದೆ. ಭದ್ರಾವತಿಯಲ್ಲಿ 198.90 ಮಿ.ಮೀ ವಾಡಿಕೆ ಮಳೆ ಇದ್ದು, 172.20 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 1017.90 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 926.50 ಮಿ.ಮೀ ಮಳೆಯಾಗಿದೆ. ಇನ್ನೂ ಸಾಗರದಲ್ಲಿ 257.70 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 1071.40 ಮಿ.ಮೀ ಮಳೆ ಸುರಿದಿದೆ. ಶಿಕಾರಿಪುರದಲ್ಲಿ 257.20 ವಾಡಿಕೆ ಮಳೆ ಆಗಬೇಕಿದ್ದು, 309.90 ಮಳೆಯಾಗಿದೆ. ಸೊರಬದಲ್ಲಿ 535.20 ಮಿ.ಮೀ ವಾಡಿಕೆ ಮಳೆಯಲ್ಲಿ 456.90 ಮಿ.ಮೀ ಮಳೆಯಾಗಿದೆ. ಹೊಸನಗರದಲ್ಲಿ 1162.70 ವಾಡಿಕೆ ಮಳೆ ಪೈಕಿ 1021.70 ಮಿ.ಮೀ ಮಳೆಯಾಗಿದೆ.ಈಗಾಗಲೇ ಭರ್ತಿಯಾಗಿರುವ ತುಂಗಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದೆ. ಶುಕ್ರವಾರ 68895 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದ್ದು, 64312 ಕ್ಯಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶಿವಮೊಗ್ಗದಲ್ಲಿ ಹಾದಿ ಹೋಗುವ ತುಂಗಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು. ಪ್ರವಾಹದ ಭೀತಿ ಉಂಟಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಶುಕ್ರವಾರ 49555 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದ್ದು. ಒಂದೇ ದಿನ ಭದ್ರಾ ಜಲಾಶಯದ ನೀರಿನ ಮಟ್ಟ 4 ಅಡಿಗೂ ಏರಿಕೆಯಾಗಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 157.11 ಅಡಿಗೆ ತಲುಪಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಜಲಾಶಯದಲ್ಲಿ ಈಗ 41 ಟಿಎಂಸಿ ನೀರು ಸಂಗ್ರಹವಾಗಿದೆ.ಇನ್ನೂ ಶರಾವತಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 87496 ಕ್ಯುಸೆಕ್ ನೀರು ಹರಿದು ಬಂದಿದ್ದು, ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1791.50 ಅಡಿಗೆ ಏರಿಕೆಯಾಗಿದೆ.
68.31 ಸರಾಸರಿ ಮಳೆ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 68.31 ಮಿ.ಮೀ ಮಳೆಯಾಗಿದ್ದು. ಶಿವಮೊಗ್ಗದಲ್ಲಿ 37.80 ಮಿ.ಮೀ., ಭದ್ರಾವತಿ 27.10 ಮಿ.ಮೀ., ತೀರ್ಥಹಳ್ಳಿಯಲ್ಲಿ 83.60 ಮಿ.ಮೀ., ಸಾಗರದಲ್ಲಿ 97.20 ಮಿ.ಮೀ., ಶಿಕಾರಿಪುರದಲ್ಲಿ 52.60 ಮಿ.ಮೀ., ಸೊರಬದಲ್ಲಿ 77.40 ಮಿ.ಮೀ., ಹೊಸನಗರದಲ್ಲಿ 102.50 ಮಿ.ಮೀ. ಮಳೆಯಾಗಿರುವುದು ವರದಿಯಾಗಿದೆ.ಕೊಟ್ಟಿಗೆ ಮುರಿದು ಬಿದ್ದು ಜಾನುವಾರುಗಳಿಗೆ ಗಾಯ
ಬ್ಯಾಕೋಡು: ತಾಲ್ಲೂಕಿನಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಕಾರಣಿ ಗ್ರಾಮದ ಹೊಸಮನೆ ಬೀರನಾಯ್ಕ ಅವರ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದು, ಜಾನುವಾರುಗಳು ಗಾಯಗೊಂಡಿವೆ.ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಕೊಟ್ಟಿಗೆ ಕುಸಿದು ಬಿದ್ದ ಶಬ್ಧ ಕೇಳುತ್ತಿದ್ದಂತೆ ಮನೆಯಿಂದ ಹೊರಗೆ ಬಂದು ನೋಡಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಜಾನುವಾರುಗಳು ಸಿಲುಕಿಕೊಂಡಿದ್ದವು. ಘಟನೆಯಲ್ಲಿ 4 ಜಾನುವಾರುಗಳಿಗೆ ಗಂಭೀರ ಗಾಯಗಳಾಗಿದ್ದು. 5 ಜಾನುವಾರುಗಳು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕುದರೂರು ಗ್ರಾಮ ಆಡಳಿತ ಅಧಿಕಾರಿ ಹುಸೇನ್ ಕಟ್ಟಿಮನಿ ಸ್ಥಳ ಪರಿಶೀಲನೆ ನಡೆಸಿದರು.
ಪಶು ವೈದ್ಯರ ನೇಮಕಕ್ಕೆ ಆಗ್ರಹ:ಇದೇ ವೇಳೆ ಗಾಯಗೊಂಡಿರುವ 4 ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಕರೂರು ಹೋಬಳಿ ಭಾಗದಲ್ಲಿ ಪಶು ವೈದ್ಯರಿಲ್ಲದೆ ರೈತರು ಪರದಾಡುವಂತಾಯಿತು. ತುಮರಿ ಹಾಗೂ ಬ್ಯಾಕೋಡು ಭಾಗದಲ್ಲಿನ ಎರಡು ಪಶು ಅಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಇರುವುದರಿಂದ ಮಳೆಗಾಲದಲ್ಲಿ ದನ-ಕರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸಾಗರಕ್ಕೆ ತೆರಳಬೇಕಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಮೆಸ್ಕಾಂ ಉಪ ವಿಭಾಗದ ಸಿಬ್ಬಂದಿಗಳಿಗೆ ಹೊರೆ:ಮೆಸ್ಕಾಂ ಉಪ ವಿಭಾಗದ ( ಗ್ರಿಡ್)ಗೆ ಸಂಪರ್ಕ ಸಾಧಿಸುವ ಹೊಸನಗರದಿಂದ ಬರುವ ಹೈ ವೋಲ್ಟೇಜ್ ಲೈನ್ ನಿರ್ವಹಣೆ ಸಂಪೂರ್ಣವಾಗಿ ಬ್ಯಾಕೋಡು ಉಪ ವಿಭಾಗದ ಸಿಬ್ಬಂದಿಗಳೇ ನಿರ್ವಹಣೆ ನಡೆಸಬೇಕಾಗಿರುವುದು ಇಲ್ಲಿನ ಸಿಬ್ಬಂದಿಗಳಿಗೆ ಹೆಚ್ಚಿನ ಹೊರೆಯಾಗಿದೆ.
ಮಳೆಗಾಲದಲ್ಲಿ ಇಲ್ಲಿನ ಕಿರುವಾಸೆ, ಮಾರಲಗೋಡು, ಕಳೂರು, ಕಾರಣಿ, ಮರಾಠಿ, ಬರುವೆ ಭಾಗದಲ್ಲಿನ ವಿದ್ಯುತ್ ಲೈನ್ ಸಮಸ್ಯೆ ನಿವಾರಿಸುವುದೇ ಸವಾಲಾಗಿದ್ದು. ಇನ್ನು ದೂರದ ಸಂಪೆಕಟ್ಟೆಯಿಂದ ಲೈನ್ ನಿರ್ವಹಣೆ ಹೊಣೆಯಿಂದ ಬ್ಯಾಕೋಡು ಉಪ ವಿಭಾಗದ ಸಿಬ್ಬಂದಿಗಳಿಗೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಲೇ ನಿರ್ವಹಣೆ ಹೊಣೆಯನ್ನು ಅಲ್ಲಿನ ವಿಭಾಗದಲ್ಲಿಯೇ ನಿರ್ವಹಣೆ ಮಾಡಬೇಕು ಎಂಬುದು ಇಲ್ಲಿನ ಸಿಬ್ಬಂದಿಗಳ ಅಳಲಾಗಿದೆ.ತೀರ್ಥಹಳ್ಳಿಯಲ್ಲಿ ಶಾಲೆ ಮಾಡು ಕುಸಿದು ಹಾನಿ
ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆಯ ಬಿರುಸು ಮುಂದುವರೆದಿದ್ದು, ಶುಕ್ರವಾರ ಬೆಳಗಿನವರೆಗೆ ಆಗುಂಬೆಯಲ್ಲಿ 239ಮಿಮಿ ಮಳೆಯಾಗಿದೆ. ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ. ತುಂಗಾ ಮಾಲತಿ ಸೇರಿದಂತೆ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟ ಒಂದೇ ತೆರನಾಗಿದೆ.ಮಾಳೂರು 118.2, ಆರಗದಲ್ಲಿ 115, ಮೇಗರವಳ್ಳಿ 111.6, ಅರಳಸುರುಳಿ 108.6, ತೀರ್ಥಹಳ್ಳಿ 95.8,ಹುಂಚದಕಟ್ಟೆ 89.2, ಮಂಡಗದ್ದೆಯಲ್ಲಿ 69 ಮಿ.ಮೀ. ಮಳೆಯಾಗಿದೆ. ಸತತವಾಗಿ ಬೀಳುತ್ತಿರುವ ಮಳೆ ಹಾಗೂ ಬಿರುಗಾಳಿಯಿಂದಾಗಿ ಆಗುಂಬೆ ಹೋಬಳಿ ಕುಂದಾ ಗ್ರಾಮದ ಸರ್ಕಾರಿ ಕಿರಿಯ ಶಾಲೆ ಕಟ್ಟಡದ ಮೇಲೆ ಶಾಲೆ ಆವರಣದಲ್ಲಿದ್ದ ತೆಂಗಿನ ಮರ ಬಿದ್ದು ಶಾಲೆಯ ಮಾಡು ಕುಸಿದು ಹಾನಿ ಸಂಭವಿಸಿದೆ.
ಮಳೆಯ ಕಾರಣ ಶಾಲೆಗೆ ರಜೆ ನೀಡಿದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ. ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯಲ್ಲಿರುವ ವಿಕಲಚೇತನ ಮಕ್ಕಳ ಶಾಲೆಯ ಹಿಂಭಾಗದ ಕಾಂಪೌಂಡ್ ಗುರುವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಇದರಿಂದಾಗಿ ಶಾಲೆಯ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ.ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಹಲವಾರು ಮನೆಗಳಿಗೂ ಹಾನಿ ಸಂಭವಿಸಿದೆ. ದೇಮ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಕಳ್ಳಿ ಗ್ರಾಮದ ಸುಮಿತ್ರಾ ಶಿವಕುಮಾರ್ ಎಂಬುವರ ಮನೆ ಮರ ಬಿದ್ದು ಮನೆಯ ಮಾಡು ಮತ್ತು ಗೋಡೆಗೆ ಹಾನಿಯಾಗಿದೆ. ಕೊಳಗಿಬೈಲು ಗ್ರಾಮದ ಚೂಡಪ್ಪನಾಯ್ಕರ ಮನೆಯ ಕೊಟ್ಟಿಗೆಯ ಗೋಡೆ ಕುಸಿದಿದೆ. ಮಂಡಗದ್ದೆ ಹೋಬಳಿ ಶೀಕೆ ಗ್ರಾಮದ ಹಿರೇಬೈಲು ವಾಸಿ ಕೃಷ್ಣಪ್ಪನವರ ಮನೆಯ ಗೋಡೆ ಮತ್ತು ಅರಳಸುರುಳಿ ಗ್ರಾಮದ ಶಂಕರಪುರ ಹೊಸಗದ್ದೆ ವಾಸಿ ಗೋವಿಂದ ನಾಯ್ಕರ ಮನೆ ಗೋಡೆ ಕುಸಿದಿದ್ದು ಈ ಮನೆಗಳೂ ಬೀಳುವ ಸ್ಥಿತಿಯಲ್ಲಿವೆ.
ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಆನಂದಪುರ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅನೇಕ ಭಾಗದಲ್ಲಿ ರೈತರ ಗದ್ದೆಗಳು ಜಲಾವೃತಗೊಂಡಿದ್ದು, ಶುಕ್ರವಾರ ಮಧ್ಯಾನ ಬೀಸಿದ ಗಾಳಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸಾಗರ ರಸ್ತೆಗೆ ಬಾರಿ ಗಾತ್ರದ ಮರ ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮ ಆಡಳಿತ, ಕಂದಾಯ ಇಲಾಖೆ, ಹಾಗೂ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಹೆದ್ದಾರಿಗೆ ಬಿದ್ದಂತಹ ಮರವನ್ನು ತೆರವುಗೊಳಿಸಿದರು. ಬಿಟ್ಟುಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ದಾಸಕೊಪ್ಪ ಗ್ರಾಮದ ಮನೋಹರ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಕಂದಾಯ ಅಧಿಕಾರಿ ಕವಿರಾಜ್, ಭೇಟಿ ನೀಡಿದ್ದರು.
ಶಿವಮೊಗ್ಗದಲ್ಲಿ ಇವತ್ತು ಹೈ ಅಲರ್ಟ್ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರವೂ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗ ತಾಲೂಕು ಹೊರತುಪಡಿಸಿ ಜಿಲ್ಲಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ .ಉಕ್ಕಿ ಹರಿದ ವರದಾ: ಚಂದ್ರಗುತ್ತಿ ವ್ಯಾಪ್ತಿ ಪ್ರವಾಹ ಸೃಷ್ಠಿ
ಸೊರಬ: ತಾಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಅರ್ಭಟ ಶುಕ್ರವಾರ ಮುಂದುವರೆದಿದ್ದು, ವರದಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ತೀರದ ಪ್ರದೇಶಗಳ ಹೊಲ, ಗದ್ದೆ, ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ.
ತಾಲೂಕು ಹಾಗೂ ನೆರೆಯ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವರದಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸಮೀಪದ ಪುರ ಗ್ರಾಮದಲ್ಲಿ ಈಗಾಗಲೇ ೫ ಕುಟುಂಬದ ಸುಮಾರು ೩೦ ಜನ ನೆರೆಯ ಭೀತಿಯಿಂದ ಸಮೀಪದ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದಂತೆ ನೆರೆ ಎದುರಾದರೆ ೧೧ ಮನೆಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಗ್ರಾಮದ ಸರ್ಕಾರಿ ಕಿ.ಪ್ರಾ.ಶಾಲೆ ಅಥವಾ ಚಂದ್ರಗುತ್ತಿಯ ಯಾತ್ರಿ ನಿವಾಸ ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗಿದೆ. ವರದಾ ನದಿಯ ಪ್ರವಾಹಕ್ಕೆ ಈಗಾಗಲೇ ಕಡಸೂರು, ತಟ್ಟಿಕೆರೆ, ಅಂದವಳ್ಳಿ, ಜೋಳದಗುಡ್ಡೆ, ಚನ್ನಪಟ್ಟಣ ಹಾಗೂ ಅನೇಕ ಗ್ರಾಮಗಳ ನೂರಾರು ಎಕರೆ ಜಮೀನುಗಳು ಜಲಾವೃತವಾಗಿವೆ.ಕಳೆದ ೨೪ ಗಂಟೆಯಲ್ಲಿ ವಾಡಿಕೆ ಮಳೆಗಿಂತ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ ೨೮.೪ ಮಿ.ಮೀ ಆಗಿದ್ದು, ೧೨೧.೨ ಮಿ.ಮೀ ಮಳೆ ದಾಖಲಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ಕೋಡಿ ಬಿದ್ದಿವೆ. ಕಮರೂರು ಗ್ರಾಮದಲ್ಲಿ ಕೆರೆ ನೀರು ರಸ್ತೆಗೆ ಬರುತ್ತಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಈ ಹಿಂದೆ ಸಮರ್ಪಕವಾಗಿ ಕೆರೆ ಕೋಡಿ ದುರಸ್ತಿ ಮಾಡದಿರುವುದೇ ಸಮಸ್ಯೆಗೆ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.ಸಿದ್ದಾಪುರ ರಸ್ತೆಯ ಶಿವಪುರ ಸಮೀಪ ಭಂಗೀ ಭೂತಪ್ಪ ದೇವಸ್ಥಾನದ ಬಳಿ ಹಳ್ಳ ಉಕ್ಕಿದ್ದು, ಸುತ್ತಲಿನ ಪ್ರದೇಶ ಜಲಾವೃತವಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಚಂದ್ರಗುತ್ತಿ-ಸಿದ್ದಾಪುರ ರಸ್ತೆ, ನ್ಯಾರ್ಸಿ ಸಮೀಪ ಹಳ್ಳ ಉಕ್ಕಿದರೆ ಹರೀಶಿ ಸಂಪರ್ಕ ರಸ್ತೆ, ಗುಂಜನೂರು ನರ್ಸರಿ ಬಳಿ ವರದಾ ನದಿ ಉಕ್ಕಿ ನೀರು ರಸ್ತೆಗೆ ಬಂದರೆ ಸೊರಬ ಸಂಪರ್ಕ ರಸ್ತೆ ಕಡಿತವಾಗುವ ಸಾಧ್ಯತೆ ಎದುರಾಗಿದೆ.ಇನ್ನು, ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಜನತೆಯ ಸುರಕ್ಷತೆ ದೃಷ್ಟಿಯಿಂದ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗಿದೆ. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ನೆರೆಯಿಂದ ಸಮಸ್ಯೆ ಎದುರಾದರೆ ಅಂತಹ ಸ್ಥಳದಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡಿ ಸ್ಥಳೀಯ ಸರ್ಕಾರಿ ಶಾಲೆ ಅಥವಾ ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತದಿಂದ ಸಿದ್ಧತೆ ನಡೆದಿದೆ ಎಂದು ಉಪ ತಹಶೀಲ್ದಾರ್ ಪಿ.ಲಲಿತಾ ಹೇಳಿದ್ದಾರೆ.ಎಡೆಬಿಡದೆ ಸುರಿವ ಮಳೆಗೆ ಜನಜೀವನ ಅಸ್ತವ್ಯಸ್ತ
ಶಿಕಾರಿಪುರ: ತಾಲೂಕಿನಾದ್ಯಂತ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಬಹುತೇಕ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದು, ಹಲವೆಡೆ ಕೊಟ್ಟಿಗೆ ಮನೆ ಕುಸಿದು ಬಿದ್ದು ಜಾನುವಾರುಗಳು ಮೃತಪಟ್ಟಿವೆ. ಕೆಲ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ 3-4 ದಿನದಿಂದ ಪಟ್ಟಣದಲ್ಲಿ ಜನತೆಯ ಒಡಾಟ ತೀರಾ ಕಡಿಮೆಯಾಗಿದ್ದು, ತಾಲೂಕಿನಾದ್ಯಂತ ಮಳೆಯ ತೀವ್ರತೆಗೆ 60ಕ್ಕೂ ಅಧಿಕ ಮನೆಗಳಿಗೆ ತೀವ್ರ ಹಾನಿಯಾಗಿ 9 ಕೊಟ್ಟಿಗೆ ಮನೆ ನಾಶವಾಗಿದೆ. ಅಗ್ರಹಾರ ಮುಚುಡಿ ಗ್ರಾಮದಲ್ಲಿ ಚಲಿಸುತ್ತಿದ್ದ ಎತ್ತಿನ ಗಾಡಿ ನೀರಿನಲ್ಲಿ ಕೊಚ್ಚಿಹೊದ ಪರಿಣಾಮ 3 ಹಸು 2 ಎಮ್ಮೆ ನೀರು ಪಾಲಾಗಿದೆ. ಕೊಟ್ಟ ಗ್ರಾಮದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತವಾಗುವ ಲಕ್ಷಣ ಹೆಚ್ಚಾಗಿದೆ. ಈ ದಿಸೆಯಲ್ಲಿ 20 ಮನೆ ನೀರಿನಿಂದಾವೃತವಾಗುವ ಅಪಾಯವಿದ್ದು, ಸ್ಥಳಾಂತರಿಸುವ ಕಾರ್ಯದಲ್ಲಿ ತಾಲೂಕು ಆಡಳಿತ ಶ್ರಮಿಸುತ್ತಿದೆ. ಮಂಚಿಕೊಪ್ಪ ಗ್ರಾಮದಲ್ಲಿ 8 ಮನೆಗೆ ಕೆರೆ ನೀರು ನುಗ್ಗಿದ್ದು, 2 ಕುಟುಂಬವನ್ನು ಸ್ಥಳೀಯ ಶಾಲೆಗೆ ಸ್ಥಳಾಂತರಿಸಲಾಗಿದ್ದು, ಸಮೀಪದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಉಳಿದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ತಿಳಿಸಿದ್ದಾರೆ. ಇನಾಂ ಅಗ್ರಹಾರ ಮುಚುಡಿಯಲ್ಲಿ ಕೊಟ್ಟಿಗೆ ಮನೆ ನಾಶದಿಂದ 5 ಹಸು ಮೃತಪಟ್ಟಿದ್ದು, ಕಟ್ಟಿಗೆಹಳ್ಳ ಮರಾಠ ಕ್ಯಾಂಪ್ ನಲ್ಲಿ ಕೊಟ್ಟಿಗೆಮನೆ ಹಾನಿಗೆ ಹಸು ಮೃತಪಟ್ಟಿದೆ.ತಾಲೂಕಿನಲ್ಲಿನ ಮಳೆಯ ತೀವ್ರತೆ ಬಗ್ಗೆ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ರವರಿಗೆ ಶುಕ್ರವಾರ ಸಂಜೆ ದೂರವಾಣಿ ಮೂಲಕ ಮಾತನಾಡಿ, ಹಾನಿಯ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಕಟ್ಟಿಗೆಹಳ್ಳ ಮರಾಠ ಕ್ಯಾಂಪ್ ನಲ್ಲಿ ಕೊಟ್ಟಿಗೆ ಮನೆ ಬಿದ್ದು ಜಾನುವಾರುಗಳು ಮೃತಪಟ್ಟ ಬಗ್ಗೆ ಕೊಟ್ಟ ಗ್ರಾಮದ ಮುಖ್ಯ ರಸ್ತೆ ಸಂಪರ್ಕ ಕಡಿತವಾಗುವ ಬಗ್ಗೆ, ತಡಸನಹಳ್ಳಿಯಲ್ಲಿ ಕೆರೆ ನೀರು ಭರ್ತಿಯಾಗಿ ಸಮೀಪದ ಜೋಳದ ಬೆಳೆಯ ಜಮೀನಿಗೆ ನುಗ್ಗಿ ಪೈರು ಹಾಳಾಗಿರುವ ಬಗ್ಗೆ ದೃಢಪಡಿಸಿಕೊಂಡರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವರು ತಾಲೂಕಿನಾದ್ಯಂತ ಅಂದಾಜು 60 ಕ್ಕೂ ಅಧಿಕ ಮನೆ ಹಾನಿಯಾಗಿದ್ದು, ಜಾನುವಾರುಗಳು ಮೃತಪಟ್ಟ ಬಗ್ಗೆ ಮಾಹಿತಿ ನೀಡಿ ಹಾನಿಗೊಳಗಾದ ಗ್ರಾಮಗಳಿಗೆ ನಿರ್ಲಕ್ಷಿಸದೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳ ಜತೆ ಖುದ್ದು ಬೇಟಿ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು.ತಾಲೂಕಿನಲ್ಲಿನ ಮಳೆಯ ತೀವ್ರತೆ ಬಗ್ಗೆ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ರವರಿಗೆ ಶುಕ್ರವಾರ ಸಂಜೆ ದೂರವಾಣಿ ಮೂಲಕ ಮಾತನಾಡಿ ಹಾನಿಯ ಬಗ್ಗೆ ಸಮಗ್ರ ಮಾಹಿತಿ ಪಡೆದರು.ತುರ್ತು ಪರಿಹಾರ ಕಾರ್ಯಕ್ಕೆ ಶಾಸಕ ಸೂಚನೆದೂರವಾಣಿ ಮೂಲಕ ಮಾಹಿತಿ ಪಡೆದ ಶಾಸಕ ವಿಜಯೇಂದ್ರ ಇದೀಗ ಅಧಿವೇಶನ ನಡೆಯುತ್ತಿದ್ದು, ಅಧಿಕಾರಿಗಳು ನಿರ್ಲಕ್ಷಿಸದೆ ಹೆಚ್ಚು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ರೈತ ಸಮುದಾಯ ಈಗಾಗಲೇ ಅನಾವೃಷ್ಟಿ ಸಹಿತ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಇದೀಗ ಅತಿವೃಷ್ಟಿಯ ಹಾನಿಗೆ ಪುನಃ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದು, ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳು ಕೂಡಲೇ ಹಾನಿಗೀಡಾದ ಮನೆ, ಜಮೀನು ತೋಟದ ಬಗ್ಗೆ ಪರಿಶೀಲಿಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ.