ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಆರ್‌ಟಿಇ ಅಡಿ 1ರಿಂದ 8ನೇ ತರಗತಿ ವರೆಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗೆ 9ನೇ ತರಗತಿಯಲ್ಲಿ ಓದಲು ಬಡತನ ಅಡ್ಡಿಯಾಗಿದೆ.
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲದೆ ಇರುವುದರಿಂದ ಈ ವಿದ್ಯಾರ್ಥಿಯ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ ಮೊರಾರ್ಜಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ ಎಂದು ಜಿಲ್ಲಾಧಿಕಾರಿ ಕಚೇರಿಗೆ ತಾಯಿ, ಮಗ ಅಲೆಯುತ್ತಿದ್ದಾರೆ.ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ನಿವಾಸಿ ದರ್ಶನ ಹೊನ್ನಮ್ಮ ಬಾಗಲವರದ ಇಂಥ ಸಂಕಷ್ಟಕ್ಕೆ ಸಿಲುಕಿದ್ದಾನೆ. ಗ್ರಾಮದಲ್ಲಿರುವ ಸಾಧನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್‌ಟಿಇ ಅಡಿ 2017ರಲ್ಲಿ ಪ್ರವೇಶ ಪಡೆದು 8ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾನೆ. 9ನೇ ತರಗತಿಗೆ ಪ್ರವೇಶ ಪಡೆಯಲು ಹಣದ ಅಡಚಣೆಯಾಗಿದ್ದು ಮೊರಾರ್ಜಿ ಶಾಲೆಗೆ ಪ್ರವೇಶಾತಿ ನೀಡಬೇಕೆಂದು ಬೇಡಿಕೊಳ್ಳುತ್ತಿದ್ದಾನೆ.
ಪ್ರಾರಂಭದಿಂದ ಈ ವರಗೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗೆ ಸರ್ಕಾರಿ ಶಾಲೆಗೆ ಸೇರಿಸಿದರೆ ಅಲ್ಲಿ ಕನ್ನಡ ಮಾಧ್ಯಮವಿರುತ್ತದೆ. ಇದರಿಂದ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ನನ್ನ ಮಗನಿಗೆ ಮೊರಾರ್ಜಿ ಶಾಲೆಯಲ್ಲಿ ಪ್ರವೇಶಾತಿ ನೀಡಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದರೆ ಅವನ ಭವಿಷ್ಯ ರೂಪಗೊಳ್ಳುತ್ತದೆ ಎನ್ನುತ್ತಾರೆ ಬಾಲಕನ ತಾಯಿ.ಇಂತಹ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿದ್ದು ಸ್ಥಿತಿವಂತರು ಖಾಸಗಿ ಶಾಲೆಗೆ ಸೇರಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ನಮ್ಮಂತಹ ಅದೆಷ್ಟೋ ಬಡ ಮಕ್ಕಳ ಆರ್‌ಟಿಇ ಅಡಿ 8ನೇ ತರಗತಿ ವರೆಗೆ ಓದಿ ಬಳಿಕ ಬಡತನದಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇದರಿಂದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತವಾಗಿ ಬದುಕು ಕಟ್ಟಿಕೊಳ್ಳಲು ಪರದಾಡುವಂತೆ ಆಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.
ಸರ್ಕಾರ ಚಿತ್ತ ವಹಿಸಲಿ:ಹೀಗೆ ಆರ್‌ಟಿಇ ಅಡಿ 8ನೇ ತರಗತಿ ವರೆಗೆ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಬಡವರಿದ್ದರೆ ಅವರನ್ನು ನೇರವಾಗಿ ಸರ್ಕಾರಿ ಮೊರಾರ್ಜಿ ಶಾಲೆಗೆ ದಾಖಲಿಸಿಕೊಳ್ಳುವತ್ತ ಸರ್ಕಾರ ಚಿತ್ತ ಹರಿಸಬೇಕಿದೆ. ದರ್ಶನನಿಗೆ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಂಕಷ್ಟ ಎದುರಾಗಿದ್ದು ಸರ್ಕಾರ ವಿದ್ಯಾರ್ಥಿ ನೆರವಿಗೆ ಧಾವಿಸಿ ಮೊರಾರ್ಜಿ ಶಾಲೆಯಲ್ಲಿ ಪ್ರವೇಶಾತಿ ನೀಡಿ ಅವನ ಭವಿಷ್ಯ ರೂಪಿಸಬೇಕು.
ಅಮರೇಶ ಕಡಗದ, ಮಾಜಿ ಅಧ್ಯಕ್ಷ ಎಸ್‌ಎಫ್‌ಐನನ್ನ ಮಗ 8ನೇ ತರಗತಿ ಪೂರ್ಣಗೊಳಿಸಿದ್ದು 9ನೇ ತರಗತಿಗೆ ಖಾಸಗಿ ಶಾಲೆಯಲ್ಲಿ ಓದಿಸುವ ಶಕ್ತಿ ನಮಗೆ ಇಲ್ಲ. ಮೊರಾರ್ಜಿ ಶಾಲೆಗೆ ಪ್ರವೇಶಾತಿ ನೀಡಿ ಹಾಸ್ಟೆಲ್ ನೀಡಿದರೆ ಅನುಕೂಲವಾಗುತ್ತದೆ.ಹೊನ್ನಮ್ಮ ಬಾಗಲವಾರದ