ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ – ಆರ್.ಬಿ. ತಿಮ್ಮಾಪುರ

| Published : Nov 09 2023, 01:01 AM IST

ಸಾರಾಂಶ

ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆಯಲ್ಲಿ ದೇಶದ ಹಿತಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ, ಈಗ ಬಿಜೆಪಿ ವಿರುದ್ಧ ಮಾತನಾಡಿದರೆ ಐಟಿ, ಇಡಿ ಮೂಲಕ ದಾಳಿ ಮಾಡಿಸಿ ಹೆದರಿಸುತ್ತಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅಬಕಾರಿ ಸಚಿವ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ವೀಕ್ಷಕ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಶಿವಶಾಂತ ಮಂಗಲಭವನದಲ್ಲಿ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಪ್ಪಳ: ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆಯಲ್ಲಿ ದೇಶದ ಹಿತಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ, ಈಗ ಬಿಜೆಪಿ ವಿರುದ್ಧ ಮಾತನಾಡಿದರೆ ಐಟಿ, ಇಡಿ ಮೂಲಕ ದಾಳಿ ಮಾಡಿಸಿ ಹೆದರಿಸುತ್ತಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅಬಕಾರಿ ಸಚಿವ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ವೀಕ್ಷಕ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಶಿವಶಾಂತ ಮಂಗಲಭವನದಲ್ಲಿ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವನ್ನು ವಿರೋಧಿಸಿದರೆ, ಬಿಜೆಪಿಯನ್ನು ಟೀಕಿಸುವವರ ವಿರುದ್ಧ ಐಟಿ, ಇಡಿ ಮೂಲಕ ದಾಳಿ ಮಾಡಿ ಹೆದರಿಸುತ್ತಿದ್ದಾರೆ. ಅಧಿಕಾರದ ಲಾಲಸೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಿದರೆ ಅಡಗಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.

ಹಿಂದುತ್ವ ಯಾರಪ್ಪನ ಸ್ವತ್ತಲ್ಲ. ಅಷ್ಟಕ್ಕೂ ನಾವು ಹಿಂದೂಗಳೇ ಇದ್ದೇವೆ. ಅನೇಕರು ಹಿಂದೂಗಳೇ ಇದ್ದಾರೆ. ಆದರೆ, ಕೆಲವರು ಅದನ್ನು ತಮ್ಮ ಸ್ವತ್ತು ಎನ್ನುವಂತೆ ಬಿಂಬಿಸಿ, ಕಲಹ ಸೃಷ್ಟಿ ಮಾಡುತ್ತಿದ್ದಾರೆ. ಶಾಂತಿ ಕದಡುತ್ತಿದ್ದಾರೆ ಎಂದು ಆರೋಪಿಸಿದರು.

ಬರದಿಂದ ರಾಜ್ಯದಲ್ಲಿ ರೈತರು ತತ್ತರಿಸಿದ್ದರೂ ಕೇಂದ್ರ ನಯಾಪೈಸೆ ನೀಡುತ್ತಿಲ್ಲ. ಈಗಾಗಲೇ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಕೊಡದಿದ್ದರೂ ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರನ್ನು ಕೇಳುವ ಧೈರ್ಯ ಮಾಡುತ್ತಿಲ್ಲ. ಬದಲಾಗಿ ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಕೊಪ್ಪಳ ಜಿಲ್ಲಾಧ್ಯಕ್ಷ ಮತ್ತು ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರು ಹೊಸ ನಾಟಕ ಪ್ರಾರಂಭಿಸಿದ್ದಾರೆ. ಬರ ಅಧ್ಯಯನಕ್ಕೆಂದು ಹಳ್ಳಿ ಸುತ್ತುತ್ತಿದ್ದಾರೆ. ಅದನ್ನು ಬಿಟ್ಟು ಅವರು ಮೊದಲು ಕೇಂದ್ರದಿಂದ ಅನುದಾನ ಕೊಡಿಸಲಿ ಎಂದು ಸವಾಲು ಹಾಕಿದರು.

ಕರಿಯಣ್ಣ ಭಾವಚಿತ್ರಕ್ಕೆ ಆಕ್ಷೇಪ: ಕಾಂಗ್ರೆಸ್ ಬ್ಯಾನರ್‌ನಲ್ಲಿ ಕೆಆರ್‌ಪಿ ಪಕ್ಷದ ಮುಖಂಡ ಹಾಗೂ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ಅವರ ಫೋಟೋ ಹಾಕಿರುವ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ತೊರೆದವರ ಫೋಟೋ ಹಾಕುವುದಾದರೂ ಯಾಕೆ? ಗಂಗಾವತಿಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೂ ಆದ್ಯತೆ ನೀಡುವುದು ಯಾವ ನ್ಯಾಯ? ಎಂದು ಗಂಗಾವತಿ ಭಾಗದ ಕಾರ್ಯಕರ್ತರು ಕಿಡಿಕಾರಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರ ಫೋಟೋ ಹಾಕಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ, ಇವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ಮಾಡಿದ್ದಾರೆ ಎಂದು ಬ್ಯಾನರ್‌ನಲ್ಲಿದ್ದ ಅವರ ಫೋಟೋ ಹರಿದು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.ಆಕಾಂಕ್ಷಿಗಳ ಪರ ಜಯಘೋಷ: ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಪರವಾಗಿ ಜಯಘೋಷ ಮತ್ತು ಕೇಕೆ ಮೊಳಗಿದವರು. ಆಕಾಂಕ್ಷಿಗಳಾದ ರಾಜಶೇಖರ ಹಿಟ್ನಾಳ, ಅಮರೇಗೌಡ ಭಯ್ಯಾಪುರ ಹಾಗೂ ಬಸನಗೌಡ ಬಾದರ್ಲಿ ಅವರ ಪರವಾಗಿ ಭರ್ಜರಿಯ ಜಯಕಾರ ಮೊಳಗಿದವು. ಆಕಾಂಕ್ಷಿಗಳು: ಸಚಿವ ಶಿವರಾಜ ತಂಗಡಗಿ ಅವರು ತಮ್ಮ ಭಾಷಣದಲ್ಲಿ ಐವರು ಆಕಾಂಕ್ಷಿಗಳ ಹೆಸರನ್ನು ವೇದಿಕೆಯಲ್ಲಿ ಹೇಳಿದರು.

ಕೆ. ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಅಮರೇಗೌಡ ಭಯ್ಯಾಪುರ, ಬಸನಗೌಡ ಬಾದರ್ಲಿ, ಮಾಜಿ ಸಂಸದ ಶಿವರಾಮಗೌಡ ಹಾಗೂ ಬಸವರಾಜ ಮಳಿಮಠ ಅವರ ಹೆಸರನ್ನು ಹೇಳಿ, ಇವರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಕಾರ್ಯಕರ್ತರು ತಮ್ಮ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆ. ಬಸವರಾಜ ಹಿಟ್ನಾಳ, ಅಮರೇಗೌಡ ಭಯ್ಯಾಪುರ, ರಾಜಶೇಖರ ಹಿಟ್ನಾಳ, ಶಿವರಾಮಗೌಡ, ಮಾಲತಿ ನಾಯಕ, ಬಸವರಾಜ ಮಳಿಮಠ, ಶಾಂತಣ್ಣ ಮುದಗಲ್, ಗೂಳಪ್ಪ ಹಲಿಗೇರಿ, ಎಸ್.ಬಿ. ನಾಗರಳ್ಳಿ, ಕೆ.ಎಂ. ಸಯ್ಯದ್, ಗಾಳೆಪ್ಪ ಪೂಜಾರ, ಅಮ್ಜಾದ ಪಟೇಲ, ಟಿ. ರತ್ನಾಕರ, ಜಲ್ಲು ಖಾದ್ರಿ, ಕಿಶೋರಿ ಬೂದನೂರು ಮೊದಲಾದವರು ಇದ್ದರು.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ ಸ್ವಾಗತಿಸಿದರು. ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಕಾರ್ಯಕ್ರಮ ನಿರೂಪಿಸಿದರು.