ಮೊಟ್ಟ ಮೊದಲ ಬಾರಿಗೆ ಮೈಸೂರು ವಿಭಾಗವು ಎಲ್ಲ ನಾಲ್ಕು ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ವಿಶೇಷ ಸಾಧನೆ

ಕನ್ನಡಪ್ರಭ ವಾರ್ತೆ ಹುಣಸೂರು

ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ನಾಗಪುರ ಹಾಡಿಯ ಆಶ್ರಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹೊನಲು ಬೆಳಕಿನ ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಬೆಳಗಾಂ ವಿರುದ್ಧ 2-1ರ ಗೆಲುವು ಪಡೆದು ನಂತರ ಕಲಬುರ್ಗಿ ತಂಡದೆದುರು 2-1ರಲ್ಲಿ ಸೋಲನುಭವಿಸಿತ್ತು. ನಂತರ ಬೆಂಗಳೂರು ತಂಡದ ಎದುರು ಭರ್ಜರಿ 2-0 ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಮೈಸೂರು ವಿಭಾಗವು ಎಲ್ಲ ನಾಲ್ಕು ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ. ಬಾಲಕಿಯರ 14 ಮತ್ತು 17ನೇ ವಯಸ್ಸಿನ ವಿಭಾಗದಲ್ಲಿ ಅರಕಲಗೂಡಿನ ದಿವ್ಯಜ್ಯೋತಿ ಶಾಲೆ ಪ್ರಥಮ ಸ್ಥಾನ ಪಡೆದರೆ, ಬಾಲಕರ ಅಂಡರ್ 17 ವಿಭಾಗದಲ್ಲಿ ಚಿಕ್ಕಮಗಳೂರು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.ಕಳೆದ ಮೂರು ನಾಲ್ಕು ವರ್ಷಗಳಿಂದ ವಿಭಾಗ ಮಟ್ಟದಲ್ಲಿ ವಿಫಲವಾಗುತ್ತಿದ್ದನು ಗಮನಿಸಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಲೋಕೇಶ್‌ ಅವರ ಕೋರಿಕೆ ಮೇರೆಗೆ ಈ ಬಾರಿ ಟ್ಯಾಲೆಂಟ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಮಹದೇವ್‌ ಅವರು ಮಾರ್ಗದರ್ಶನ ನೀಡಬೇಕೆಂದು ಕೋರಿಕೊಂಡ ಮೇರೆಗೆ ಪ್ರತಿದಿನ ಮಹದೇವ್‌ ಅವರು ಆಶ್ರಮ ಶಾಲೆಗೆ ತೆರಳಿ ಕಠಿಣ ತರಬೇತಿ ನೀಡಿದ್ದರು.

ಮಹದೇವರ ಅವರೊಡಗೂಡಿ ಆಶ್ರಮ ಶಾಲೆಯ ದೈಹಿಕ ಶಿಕ್ಷಕ ಕೃಷ್ಣ, ಮುಖ್ಯೋಪಾಧ್ಯಾಯರಾದ ಲಕ್ಷ್ಮಣ್, ಜಲೇಂದ್ರ ಅನ್ಸರ್ ಪಾಷ, ತಟ್ಟಕೆರೆ ಶ್ರೀಧರ ಅವರ ಸಹಾಯದಿಂದ ಅರ್ಜುನ್ ನೇತೃತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಸ್ಟ್‌ ಆಲರೌಂಡರ್‌ ಅರ್ಜುನ ಪಡೆದುಕೊಂಡರೆ ಮತ್ತೋರ್ವ ಮೋಹಿತ ಬೆಸ್ಟ್ ಸೆಟ್ಟರ್ ಪ್ರಶಸ್ತಿ ಸ್ವೀಕರಿಸಿದರು.

ಮಕ್ಕಳ ಆಟ ವೀಕ್ಷಿಸಿದ ತಾಲೋಕು ಶಿಕ್ಷಣ ಅಧಿಕಾರಿ ಮಹದೇವ್‌ ಅವರು ಖುದ್ದುತಂಡದೊಂದಿಗೆ ತೆರಳಿ ಮಕ್ಕಳಿಗೆ ಪ್ರೋತ್ಸಾಹ ನೀಡಿರುವುದು ಪ್ರಶಂಸನಿಯ ಎಂದು ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಜಗದೀಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

-------

ಮಕ್ಕಳ ಪ್ರತಿಭೆ ನೋಡಿ ಖುದ್ದು ತಾನೇ ಹೋಗಿ ಸಂಭ್ರಮಿಸಿ ಬಂದಿದ್ದೇನೆ, ಇದು ಹುಣಸೂರು ತಾಲೂಕು ಹೆಮ್ಮೆ ಪಡುವ ವಿಷಯ, ಮಕ್ಕಳ ಕ್ರೀಡಾ ಭವಿಷ್ಯಕ್ಕೆ ತನ್ನ ಅವಧಿಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತೇನೆ.

- ಮಹದೇವ್‌, ತಾಲೂಕು ಶಿಕ್ಷಣಾಧಿಕಾರಿ.

-------

ಮಕ್ಕಳಲ್ಲಿ ಗೆಲುವಿನ ಹಸಿವಿತ್ತು ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇತ್ತು, ಸದ್ಬಳಕೆ ಮಾಡಿಕೊಂಡಿದ್ದಾರೆ, ಸಾಧಿಸಿದ ಸಂಭ್ರಮದಲ್ಲಿ ನಾನು ಪಾಲುದಾರ ಎಂಬ ಸಂತೋಷವಿದೆ.

- ಮಹದೇವ್‌, ಟ್ಯಾಲೆಂಟ್‌ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರು.

-----

ಹಾಡಿ ಮಕ್ಕಳ ಸಾಧನೆ ಸಂತೋಷ ತಂದಿದೆ, ಶಾಲೆಗೆ ಬರಲು ಹಿಂದೇಟು ಹಾಕುವ ಹಾಡಿ ಮಕ್ಕಳ ಈ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂತದು, ಮಕ್ಕಳ ಮುಂದಿನ ಕ್ರೀಡಾ ಭವಿಷ್ಯಕ್ಕೆ ಕೈಜೋಡಿಸುತ್ತೇನೆ.

- ಜಿ.ಡಿ. ಹರೀಶ್‌ ಗೌಡ, ಶಾಸಕರು, ಹುಣಸೂರು.