ನಿರುಪಯುಕ್ತವಾಗಿ ಮೂಲೆ ಸೇರಿದ ಎಕ್ಸ್‌-ರೇ ಮಿಷನ್!

| Published : Jul 03 2025, 11:48 PM IST

ಸಾರಾಂಶ

ಗಣಿಬಾಧಿತ ಪ್ರದೇಶದ ಜನರ ಅನುಕೂಲಕ್ಕಾಗಿಯೇ ಇರುವ ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಹೇಗೆ ಅಪವ್ಯಯವಾಗುತ್ತದೆ ಎಂಬುದಕ್ಕೆ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಮೂಲೆಸೇರಿದ ಎಕ್ಸ್‌-ರೇ ಮಿಷನ್‌ ಪೂರಕ ಸಾಕ್ಷ್ಯ ಒದಗಿಸುತ್ತದೆ.

ಟೆಕ್ನಿಷಿಯನ್ ಇಲ್ಲದೆ ದುಬಾರಿ ಮೊತ್ತದ ಎಕ್ಸ್‌-ರೇ ಮಿಷನ್ ಕೋಣೆಗೆ ಬೀಗ

ಜಿಲ್ಲಾ ಖನಿಜ ನಿಧಿಯಿಂದ ₹40 ಲಕ್ಷ ಕೊಟ್ಟು ತಂದ್ರೂ ಉಪಯೋಗವಿಲ್ಲ.ಮಂಜುನಾಥ ಕೆ.ಎಂ.ಕನ್ನಡಪ್ರಭವಾರ್ತೆ ಬಳ್ಳಾರಿಗಣಿಬಾಧಿತ ಪ್ರದೇಶದ ಜನರ ಅನುಕೂಲಕ್ಕಾಗಿಯೇ ಇರುವ ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಹೇಗೆ ಅಪವ್ಯಯವಾಗುತ್ತದೆ ಎಂಬುದಕ್ಕೆ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಮೂಲೆಸೇರಿದ ಎಕ್ಸ್‌-ರೇ ಮಿಷನ್‌ ಪೂರಕ ಸಾಕ್ಷ್ಯ ಒದಗಿಸುತ್ತದೆ !ಕಳೆದ ವರ್ಷವಷ್ಟೇ ಖರೀದಿಸಿದ ಅತ್ಯಾಧುನಿಕ ತಂತ್ರಜ್ಞಾನದ ಎಕ್ಸ್‌-ರೇ ಮಿಷನ್‌ನ ಕೋಣೆಗೆ ಬೀಗ ಹಾಕಲಾಗಿದೆ. ಎಕ್ಸ್‌-ರೇ ಮಿಷನ್ ನಿರ್ವಹಿಸುವ ಟೆಕ್ನಿಷಿಯನ್ ಇಲ್ಲ ಎಂಬ ಕಾರಣಕ್ಕಾಗಿ ದುಬಾರಿ ಮೊತ್ತದ ಯಂತ್ರ ನಿರುಪಯುಕ್ತವಾಗಿದ್ದು, ರೋಗಿಗಳು ಅನಿವಾರ್ಯವಾಗಿ ಖಾಸಗಿಯಲ್ಲಿ ಎಕ್ಸ್‌-ರೇಗಾಗಿ ಅಲೆದಾಡುವಂತಾಗಿದೆ.

₹40 ಲಕ್ಷದ ಯಂತ್ರ:ಕೆಲವು ಸೂಕ್ಷ್ಮ ರೋಗಗಳನ್ನು ಪತ್ತೆ ಹಚ್ಚಲು ಹಾಗೂ ಗಂಭೀರ ಕಾಯಿಲೆಗಳಿಗೆ ಪೂರಕ ಚಿಕಿತ್ಸೆ ನೀಡಲು ಜಿಲ್ಲಾ ಖನಿಜನಿಧಿಯಿಂದ ನೀಡಿದ ಅನುದಾನದಲ್ಲಿ ₹40 ಲಕ್ಷ ಮೌಲ್ಯದ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರವನ್ನು ಕಳೆದ ವರ್ಷವಷ್ಟೇ ಖರೀದಿಸಲಾಗಿತ್ತು. ಉಚಿತವಾಗಿ ಎಕ್ಸ್‌ರೇ ಮಾಡುತ್ತಿರುವುದರಿಂದ ಕಳೆದ ಒಂದು ವರ್ಷದಿಂದ ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸರೆಯಾಗಿತ್ತು. ಆದರೆ, ಈವರೆಗೆ ಎಕ್ಸ್‌ರೇ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆಯಿಂದ ನಿಯೋಜನೆಗೊಂಡಿದ್ದ ಸಿಬ್ಬಂದಿ ಮರಳಿ ಮಾತೃ ಸಂಸ್ಥೆಗೆ ಮರಳಿದ್ದರಿಂದ ಟೆಕ್ನಿಷಿಯನ್ ಇಲ್ಲ ಎಂಬ ಕಾರಣಕ್ಕಾಗಿ ಎಕ್ಸ್‌ರೇ ಕೋಣೆಗೆ ಬೀಗ ಜಡಿಯಲಾಗಿದೆ.ಎಕ್ಸ್‌ರೇ ಟೆಕ್ನಿಷಿಯನ್‌ನ್ನು ನಿಯೋಜನೆಗೊಳಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಕೆಲಸವಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬಳ್ಳಾರಿ ಮರೆತು ಕುಳಿತ ಮೇಲೆ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಜವಾಬ್ದಾರಿ ಹೆಚ್ಚಾಗಿದ್ದು, ಆಯುರ್ವೇದ ಕಾಲೇಜಿನಲ್ಲಾಗುತ್ತಿರುವ ಬೆಳವಣಿಗೆ ಕಡೆ ಗಮನ ಹರಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯೂ ಇದೆ.ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಪಕ್ಕದ ಆಂಧ್ರ, ತೆಲಂಗಾಣ ರಾಜ್ಯದ ನೂರಾರು ರೋಗಿಗಳು ಬಳ್ಳಾರಿಯ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿಗೆ ಚಿಕಿತ್ಸೆಗೆಂದು ಬರುತ್ತಿರುವುದರಿಂದ ಸಿಬ್ಬಂದಿ ಕೊರತೆ ನೆಲೆಯಲ್ಲಾಗುತ್ತಿರುವ ಚಿಕಿತ್ಸಾ ಸಂಬಂಧಿ ಸಮಸ್ಯೆಗಳನ್ನು ಕೂಡಲೇ ನಿವಾರಿಸಲು ಜಿಲ್ಲಾಡಳಿತ ಗಮನ ಹರಿಸಬೇಕಿದೆ.ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಎಕ್ಸ್‌-ರೇ ಮಿಷನ್ ನಿರುಪಯುಕ್ತವಾಗಿ ಮೂಲೆ ಸೇರಿರುವ ಕುರಿತು ಮಾಹಿತಿ ಇಲ್ಲ. ಕೂಡಲೇ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ವಹಿಸುವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲಾ ಖನಿಜ ನಿಧಿಯಿಂದ ಖರೀದಿಸಲಾದ ಎಕ್ಸ್‌-ರೇ ಯಂತ್ರ ಬಳಕೆಯಾಗದಿರುವುದು ಅತ್ಯಂತ ನೋವಿನ ಸಂಗತಿ. ಕೂಡಲೇ ಜಿಲ್ಲಾಡಳಿತ ಗಮನ ಹರಿಸಬೇಕು. ಬಡವರ ಅನುಕೂಲದ ದೃಷ್ಟಿಯಿಂದ ಶೀಘ್ರ ಗಮನ ಹರಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಹೇಳಿದ್ದಾರೆ.